ಆಲ್ ವಿ ನೀಡ್ ಇಸ್ ಚೇಂಜ್
ಔಪಚಾರಿಕ ನಗು ಎಂಬುದು ಬೇಕೆಂದರೂ ಬೇಡವೆಂದರೂ ಕೆಲವು ಸಂದರ್ಭಗಳಲ್ಲಿ ಪಾಲಿಸಬೇಕಾದ ಧರ್ಮ. ಮೊದಲೆಲ್ಲ ನಿಷ್ಠೂರವಾದರೂ ಪರವಾಗಿಲ್ಲ, ಎಂದೂ ಇಂತಹ ಡ್ರಾಮಾಗಳನ್ನು ಮಾಡುವುದಿಲ್ಲ ಎಂದು ನಿರ್ಧರಿಸಿದ್ದೆ. ದಿನಗಳುರುಳುತ್ತಾ ವ್ಯಾಪಾರ ವ್ಯವಹಾರಗಳ ಸೋಗಿನಲ್ಲಿ ಅದೆಲ್ಲಾ ಅಭ್ಯಾಸವಾಗಿದೆ. ವ್ಯಾಪಾರಸ್ಥನಾದವನು ಏನನ್ನೇ ಮಾರುವವನು ಎಂದೂ ನಗದೇ ಇರಬಾರದು ಎಂಬುದು ಪ್ರಚಲಿತ ಮಾತು. ನಮ್ಮಮ್ಮ ಕೆಲಸಕ್ಕೆ ಹೋಗೋಕೆ ಮುಂಚೆ “ಯಾರ ಮೇಲೂ ರೇಗಬೇಡ, ಮಕ ಕೆಡುಸ್ಕೊಬೇಡ. ದಿನ ಅವರ ಜೊತೆನೆ ವ್ಯವಾರ ಮಾಡ್ಬೇಕು” ಅಂತ ಹೇಳುವಳು.
ಬೆಳಗ್ಗೆ ಮನೆ-ಬಸ್ಟಾಂಡ್-ಆಫೀಸು ಸಂಜೆ ಆಫೀಸು - ಬಸ್ಸು - ಮನೆ ಎಂಬೋ ನಿರ್ಮಲ ದಿನಚರಿ ನನ್ನದು. ಒಂದೊಂದು ದಿನ ಏರುಪೇರಾದಾಗ “ಯಾಕ್ ಬೇಕಿತ್ತು ಗುರು ಈ ತಲೆನೋವುಗಳು..” ಅಂತಾನು ಅನಿಸುತ್ತಿರುತ್ತದೆ. ಅದೇನೆ ಇರಲಿ ಹೊಸತು ಯಾವಾಗಲೂ ಮುಳ್ಳಿನ ಹಾಸಿಗೇನೆ. ಅವತ್ತು ಅಂತದ್ದೆ ಒಂದು ಔಪಚಾರಿಕ ನಗು ಹೊತ್ತು ಮಧುಗಿರಿ ಖಾಸಗಿ ಬಸ್ಸು ಹತ್ತಿದ್ದೆ. ಬಸ್ಸಿನ ಸೀಟುಗಳೆಲ್ಲಾ ತಕ್ಕಮಟ್ಟಿಗೆ ಭರ್ತಿಯಾಗಿದ್ದವು. ನಾನು ಬಸ್ಸಿನ ಎಡಬಾಗದಲ್ಲಿ ಕಿಟಕಿ ಪಕ್ಕದಲ್ಲಿ ಕೂತೆ. ಕಂಡಕ್ಟರ್ ಹತ್ತುವಾಗಲೇ ಯಾರಿಗೋ ಬಯ್ಯುತ್ತಾ ಕಟಿಕಟಿ ಹಲ್ಲು ಕಡಿಯುತ್ತಾ ಒಳಬಂದ. ಬಸ್ಸು ಹೊರಟಿತು.
ಎಂದಿನಂತೆ ಕಂಡಕ್ಟರು ಯಲ್ಲಾಪುರ ಬೈಪಾಸು ದಾಟಿದಾಗ, ಟಿಕೇಟು ಕೊಡಲು ಶುರುಮಾಡಿದ. ಖಾಸಗಿ ಬಸ್ಸುಗಳು ಹತ್ತು ನಿಮಿಷಕ್ಕೊಂದರಂತೆ ಸಂಚರಿಸುವ ಕಾರಣಕ್ಕೆ ಅದು ಅಲ್ಲದೆ ಕೆಎಸ್ಸಾರ್ಟಿಸಿ ಬಸ್ಸುಗಳು ಬೆಳಗ್ಗೆ ತಿಂಡಿಗೆಂದು ಕೊರಟಗೆರೆ ಬಸ್ ಸ್ಟಾಂಡ್‌ನಲ್ಲಿ 15 ನಿಮಿಷ ನಿಲ್ಲಿಸುವ ಸಲುವಾಗಿ, ಖಾಸಗಿ ಬಸ್ಸುಗಳ ಸಂಚಾರವೇ ಹೆಚ್ಚು ಅನುಕೂಲಕರ. ಸರ್ಕಾರಿ ಬಸ್ಸುಗಳ ಟಿಕೇಟು 46/-ರೂ ಇದ್ದರೆ ಖಾಸಗಿ ಬಸ್ಸುಗಳಲ್ಲಿ 40/- ಇದೆ. ನಿರಂತರ ಸಂಚರಿಸುವವರಿದ್ದರೆ ಅವರಿಗೆ 30/- ತೆಗೆದುಕೊಳ್ಳುತ್ತಾರೆ. ಇದೆಲ್ಲಾ ಕಾರಣಕ್ಕೆ ಕೆಎಸ್ಸಾರ್ಟಿಸಿ ಬಸ್ಸು ಕಡೆ ಈ ಮಾರ್ಗದಲ್ಲಿ ಸಂಚರಿಸುವವರು ಹೋಗುವುದು ಕಡಿಮೆ.
ಯಲ್ಲಾಪುರ ದಾಟುತ್ತಿದ್ದಂತೆ ಒಬಳಾಪುರ ಟೋಲ್ ಗೇಟ್ ಬಳಿ ಯಾವುದೋ ಬೈಕ್ ಅಡ್ಡ ಬಂತೆಂದು ಡ್ರೈವರ್ ಕಂಡಕ್ಟರ್ ಇಬ್ಬರೂ ಬಸ್ಸು ನಿಲ್ಲಿಸಿ ಅವನೊಡನೆ ಬೈದು ಕಾದಡಿ ಬಂದು ಕೂತರು. ನಾನು ಇಯರ್ ಫೋನ್ ತೆಗೆದು ಕುತೂಹಲದಿಂದ ಅವರ ಸಂಭಾಷಣೆ ಕೇಳಿಸಿಕೊಳ್ಳುತ್ತಿದ್ದೆ. ನನ್ನ ಪಕ್ಕದಲ್ಲಿದ್ದವನು ಬಾಯಲ್ಲಿ ವಿಮಲ್ ಓವರ್‌ಲೋಡ್ ಮಾಡಿಕೊಂಡು ವಿವರಣೆ ಕೊಡಲು ಬಂದ. ಆ ಕರಿತುಟಿಗಳ ದುರ್ಬಲ ಗೇಟು ದಾಟಿ ವಿಮಲದ್ರವ ಸಿಡಿಯಬಹುದೆಂದು ಭಯದಲ್ಲಿ ನಾನು ಆಕಡೆ ಗಮನ ಕೊಡಲಿಲ್ಲ. ನಾನು ನನ್ನ ಪಾಡಿಗೆ ಫೋನಿಗೆ ಕಿವಿ ಅಂಟಿಸಿ ಕಿಟಕಿಯೆಡೆ ನೋಡುತ್ತಾ ಕುಳಿತೆ. ಅವನ ಮಾತನ್ನು ನಾನು ಉದಾಸೀನ ಮಾಡಿದ್ದಕ್ಕೆ ಅವನಿಗೆ ತುಸು ಪೆಚ್ಚಾಯಿತು. ಕೆಕ್ಕರಿಸಿ ನೋಡಿ ಸುಮ್ಮನಾದ. ಬಸ್ಸು ಹೊರಟಿತು.
ಮೊದಲನೆ ಟಿಕೇಟಿಗೆ 100/- ರೂ ಕೊಟ್ಟನೆಂದು ಮೊದಲ ಪ್ರಯಾಣಿಕನ ಜೊತೆ ಮತ್ತೊಂದು ಸುತ್ತಿನ ಜಗಳ ಶುರುವಾಯಿತು. ಅವತ್ತು ಸೋಮವಾರವಾದದ್ದರಿಂದ ವಾರಾಂತ್ಯದ ಕೆಲಸ ಮುಗಿಸಿ ಊರಿಗೆ ಹೊರಟಿದ್ದವರೆ ಹೆಚ್ಚು. ಅವರ ಬಳಿ ಚಿಲ್ಲರೆ ಇದ್ದಂತಿರಲಿಲ್ಲ. ಮುಂದೆ ಚಿಲ್ಲರೆ ಕೊಡದ ಎಲ್ಲಾ ಪ್ರಯಾಣಿಕರ ಮೇಲೆ ಕೆಂಡ ಕಾರುತ್ತಾ ಬರುತ್ತಿದ್ದ. ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂತಲೇ ನಾನು ವಾರಕ್ಕಾಗುವಷ್ಟು ಚಿಲ್ಲರೆ ಇಟ್ಟುಕೊಂಡಿರುತ್ತೇನೆ. ನಿತ್ಯ ಓಡಾಡುವುದರಿಂದ ಚಿಲ್ಲರೆ ಇಲ್ಲದ ಸ್ಥಿತಿ ನಾನು ಎದುರಿಸಿರಲಿಲ್ಲ. ಕ್ಯಾಶು ಕೌಂಟರಿನಲ್ಲಿ ಬೇಕೆಂದ ನೋಟುಗಳನ್ನು ಸಂಜೆ ಕೆಲಸ ಮುಗಿಸಿ ಬರುವಾಗ ತಂದರೆ ಮುಗಿಯಿತು. ಚಿಲ್ಲರೆ ಇಲ್ಲದೆ ಕಂಡಕ್ಟರ್ ಕೋಪದ ಜ್ವಾಲೆಗೆ ತುತ್ತಾಗುತ್ತಿದ್ದವರನ್ನು ನೋಡಿ ಅವರ ಮೇಲೆ ಕನಿಕರವುಂಟಾಗುತ್ತಿತ್ತು. ಒಬ್ಬೊಬ್ಬರೆ ಆಗುತ್ತಾ ಕಂಡಕ್ಟರ್ ಸಂಯಮದ ಕಟ್ಟೆ ಒಡೆಯುತ್ತಾ ಬಂದಿತು. ನನ್ನ ಮುಂದಿನ ಸೀಟಿನ ಸರದಿ ಬಂದಾಗ ಅವರು ಇನ್ನೂರು ರೂಗಳ ನೋಟು ಝಳಪಿಸಿದರು.
“ರೀ ಸ್ವಾಮಿ ಅವಾಗಿಂದ ಬಡ್ಕೊತಿರೋದು ಕೇಳುಸ್ತಿಲ್ವಾ... ದಿನ ಓಡಾಡ್ತಿರಾ... ಮೂವತ್ ರುಪಾಯ್ ಹಿಡ್ಕೊಂಡ್ ಬರೋಕೆ ಆಗಲ್ವಾ...”
“.....”
“ಎಷ್ಟ್ ಜನಕ್ಕೆ ಅಂತ ಚೆಂಜ್ ಕೊಡೋದು. ಸಾಕಾಗಿದೆ ನಂಗು. ಮುವತ್ತ್ ಚೇಂಜ್ ಕೊಡಿ...” ಎನ್ನುತ್ತಾ ಅವನು ಕೊಟ್ಟ ನೋಟು ವಾಪಸ್ಸು ಕೊಟ್ಟ. ಅದು ಕೆಳಗೆ ಬಿತ್ತು. ಪ್ರಯಾಣಿಕನಿಗೂ ಕೋಪ ಉಕ್ಕಿದ ಹಿನ್ನಲೆಯಲ್ಲಿ ಮಾತಿನ ಚಕಮಕಿ ಮತ್ತೂ ಮುಂದುವರೆಯಿತು.
ಬೆಳಗ್ಗೆ ಬೆಳಗ್ಗೆನೆ ಅದು ಕೆಲಸಕ್ಕೆ ಹೊರಡುವ ವೇಳೆ ಏನಾದರೂ ಕಿರಿಕ್ ಆದರೆ ಅದರ ಬಿಸಿ ದಿನಪೂರ್ತಿ ಇರುತ್ತದೆ. ಕೆಲಸದಲ್ಲೂ ಏನಾದರೂ ಅಡೆತಡೆಗಳು ಮುಂದುವರೆದರೆ ಮುಗಿಯಿತು. ಕೆಲಸದಲ್ಲಿ ಏನಾದರೂ ಚಿಕ್ಕ ಎಡವಟ್ಟಾದರೂ ಬೇಗನೆ ರಿಯಕ್ಟು ಮಾಡಿ ಕೆಲಸದ ಪರಿಸರ ಮತ್ತೂ ಹಾಳಾಗುತ್ತದೆ. ಆ ಕಾರಣಕ್ಕೆ ಆದಷ್ಟು ಚಿಲ್ಲರೆಯನ್ನು ಕೊಂಡುಯ್ಯುತ್ತೇನೆ. ಇಂದು ಏನಾದರಾಗಲಿ ಎಂದು ಒಮ್ಮೆ ಪರ್ಸು ತೆಗೆದು ನೋಡಿಕೊಂಡೆ. ಯಾಕೋ ದಿನ ತರುವ ಪರ್ಸು ಇದ್ದಂತೆ ಇರಲಿಲ್ಲ.
ನಾನೆಣಿಸದಂತೆ ಆಗಿತ್ತು. ಬರುವ ಬಿಸಿಯಲ್ಲಿ ಹಳೆ ಪರ್ಸುತಂದಿದ್ದೆ. ಅದರಲ್ಲಿ ಹಿಂದೆ ಮುಂದೆ ನೋಡಿದರೂ ಒಂದು ನೋಟು ಬಿಟ್ಟು ಬೇರೆನೂ ಇರಲಿಲ್ಲ. ಅದು ಐನೂರು ರುಪಾಯಿಯ ನೋಟು. ಖಾಲಿ ಪರ್ಸು ಇರಬಾರದು ಅಂತ ಅಮ್ಮ ಅದರಲ್ಲಿ ಸ್ವಲ್ಪವಾದರೂ ದುಡ್ಡು ಇಡು ಎಂದಳೆನ್ನುವ ಕಾರಣಕ್ಕೆ ಅದರಲ್ಲಿ ಇಟ್ಟಿದ್ದೆ. ನಿಧಾನವಾಗಿ ಉಗುಳು ನುಂಗಿದೆ. ಅವನೇನಾದರೂ ಹೆಚ್ಚು ಮಾತಾಡಿ ಅದು ಎಲ್ಲರೂ ಕೇಳಿಸುವಂತೆ ಬೈದು ನಾನು ಅದಕ್ಕೆ ಸ್ವಲ್ಪ ಒಗ್ಗರಣೆ ಬೆರೆಸಿ ಸುಮ್ನೆ ಸೀನ್ ಆಗುವುದು ನೆನೆಸಿಕೊಂಡು ಹಲುಬುತ್ತಾ ಕುಳಿತೆ. ಬರೀ ಇನ್ನೂರಕ್ಕೆ ಅಷ್ಟು ಮಾತಾಡುವವನು ಐದುನೂರು ನೋಟು ನೋಡಿ ತಕತಕ ಕುಣಿಯದೆ ಇರಲಾರ. ಪಕ್ಕದಲ್ಲಿ ಇದ್ದ ವಿಮಲಾಕರ ನನ್ನ ಕೈಲಿದ್ದ ಐನೂರು ನೋಡಿ ಒಳಗೊಳಗೆ ನಗುತ್ತಿದ್ದ. ಅವನ ಸರದಿ ಬರುತ್ತಿದ್ದಂತೆ ನಗುತ್ತಲೆ ಚಿಲ್ಲರೆ ಸಹಿತ ಟಿಕೇಟ್ ದುಡ್ಡುಕೊಟ್ಟ. ನಂತರ ನನ್ನದೇ ಸರದಿ.
ವಿಮಲಾಕರನ ನಂತರ ಕಂಡಕ್ಟರು ನನ್ನ ಬಳಿ ಬಾರದೇ ನಂತರ ಟಿಕೇಟು ಕೊಡಲು ನನ್ನ ಹಿಂದಿನ ಸೀಟಿಗೆ ಹೋದ. ನಾನು ವಿಮಲಾಕರ ಇಬ್ಬರೂ ಆಶ್ಚರ್ಯಗೊಂಡೆವು. ನಾನೀಗ ಗೊಂದಲಕ್ಕೆ ಒಳಗಾದೆ. ಮರೆತು ಹೋದನೋ ಅಥವಾ ಮಧುಗಿರಿ ದಂಡಿನ ಮಾರಮ್ಮ ನನ್ನ ಗೋಳನ್ನು ಕೇಳಿ ಕಾಪಾಡಲು ಬಂದಳೋ ಎಂದು ಒಳಗೊಳಗೆ ಅಂದುಕೊಳ್ಳುತ್ತಿದ್ದೆ. ಯೋಚಿಸುತ್ತಾ ಇರುವಾಗ ಇನ್ನೊಂದು ತೆರನಾದ ಪೀಕಲಾಟ ಶುರುವಾಯಿತು. ಬಸ್ಸು ಅದಾಗಲೇ ಕೈಮರ ದಾಟಿ ಕೊರಟಗೆರೆ ಹೆಬ್ಬಾಲಲ್ಲಿ ನುಸುಳುತ್ತಿತ್ತು. ಅವನೇನಾದರು ನೆನಪಾಗಿ ಬಂದು “ನಾನು ಮರೆತ್ರು..... ನೀವ್ ಕೇಳಿ ತಗೋಬೇಕಿತ್ತಲ್ಲ...” ಎಂದು ಚೆಂಜ್ ಇಲ್ಲದ್ದಕ್ಕೂ ಮತ್ತು ಟಿಕೆಟ್‌ಕೊಳ್ಳದೇ ಇದ್ದದ್ದಕ್ಕೂ ಸೇರಿ ಕೆಂಡಕಾರಬಹುದೆಂದು ಯೋಚಿಸುತ್ತಾ ಕೂತೆ. ಎಲ್ಲಾ ಟಿಕೇಟು ಮುಗಿಸಿ ಸಿಡುಕುತ್ತಲೆ ಅವನು ವಾಪಸ್ಸು ಆಗುತ್ತಿದ್ದ. ನಾನು ಅಳುಕುತ್ತಲೇ ಕರೆದೆ.
“ಇವ್ರೆ...ಟಿಕೇಟ್ ಕೊಟ್ಟಿಲ್ಲ..ನೋಡಿ...” ಎನ್ನುತ್ತಾ ಪರ್ಸು ಜಾಲಾಡುತ್ತಿದ್ದೆ. ಡ್ರಾಮಾ.
“ನಿಮ್ದ್ ಆಯ್ತು ಆಗ್ಲೆ....” ಹೊರಡುತ್ತಿದ್ದ.
“ನಾನು ತಗೊಳ್ಲಿಲ್ಲ......”
“ಇಲ್ಲ ಮುಂದೆ ಡ್ರೈವರ್ ಕಂಬಿ ಪಕ್ಕ ಕೂತವ್ರಲ್ಲ ಅವ್ರ್ ತಗೊಂಡ್ರು...” ಎಂದು ಹೇಳಿ ಮುಂದೆ ಹೋದ. ಆಷ್ಟೊತ್ತಿಗೆ ವಿಮಲಾಕರ ನಿರಾಸೆಯಿಂದ ಇಳಿದುಹೋದ. ನಾನು ಮುಂದೆ ನೋಡಿದೆ. ತೀರಾ ಪರಿಚಿತರು ಅಂತಲೂ ಅಲ್ಲದ ಅಪರಿಚಿತರು ಅಲ್ಲದ ಮುಖವೊಂದು ಕಂಡಿತು.
ಮಧುಗಿರಿಯ ಮಿಡಿಗೇಶಿ ಪ್ರಾಥಮಿಕ ಶಾಲೆಯ ಸಹಶಿಕ್ಷಕರು ನಸುನಗುತ್ತ ಒಂದು ಕೈ ಮೇಲೆತ್ತಿ “ನಾನೆ ತಗೊಂಡಿದಿನಿ ನೀವು ಮತ್ತೆ ಕೊಡಬೇಡಿ” ಎನ್ನುವಂತೆ ಸನ್ನೆ ಮಾಡಿದರು. ತುಮಕೂರು ಸಿವಿಲ್ ಬಸ್ಟಾಂಡಿನಲ್ಲಿ ಕಲ್ಲುಬೆಂಚಿನ ಮೇಲೆ ಬಸ್ಸಿಗೆ ಕಾಯುತ್ತಾ ಆಗಾಗ್ಗೆ ಮಾತಾಡಿ ಪರಿಚಯವಾಗಿದ್ದರು. ತುಮಕೂರಿನಲ್ಲಿ ಯಾರಾದರೂ ರಾಜಕೀಯ ವ್ಯಕ್ತಿಗಳ ಸಮಾವೇಷಗಳಾದರೆ, ಸರ್ಕಾರಿ - ಖಾಸಗಿ ಎನ್ನದೇ ಎಲ್ಲಾ ಬಸ್ಸುಗಳನ್ನು ಕಾರ್ಯಕರ್ತರನ್ನು ಸಾಗಿಸಲು ಬಳಸುವಾಗ ನಾನು ನನ್ನ ಬೈಕಿನಲ್ಲೆ ಮಧುಗಿರಿವರೆಗೂ ಹೋಗುತ್ತಿದ್ದೆ. ಒಮ್ಮೆ ಇವರು ಕಂಡು ಬೈಕಿನಲ್ಲಿ ಡ್ರಾಪ್ ಮಾಡಿದ್ದೆ. ಅದನ್ನು ಬಿಟ್ಟರೆ ಅವರ ಹೆಸರು ಕೂಡ ತಟ್ಟನೆ ನೆನಪಾಗುತ್ತಿರಲಿಲ್ಲ. ಬಸ್ಸು ಹತ್ತುವಾಗ ಅವರು ಕಂಡಿದ್ದರು. ಅದೆ ಔಪಚಾರಿಕ ನಗು ಬೀರಿ ಬಸ್ಸು ಹತ್ತಿದ್ದೆ. ಇವತ್ತು ಅದೇ ನಗು ಕಂಡಕ್ಟರ್ ಜ್ವಾಲಾಗ್ನಿಯಿಂದ ಬಚಾವು ಮಾಡಿತ್ತು. ಅವತ್ತಿಂದ ಸರಿಯಾದ ಚಿಲ್ಲರೆ ಇಟ್ಟುಕೊಂಡೆ ಬಸ್ಸು ಹತ್ತುವೆ. ಆಮೇಲೆ ಈಗ ಬೇಸಿಗೆ ರಜೆ ಮುಗಿದು ಶಾಲೆ ಶುರುವಾದಾಗಿನಿಂದ ರಜೆ ಅವರು ಕಂಡಿಲ್ಲ. ಅವರ ಟಿಕೇಟನ್ನು ನಾನೊಮ್ಮೆ ಖರೀದಿಸಲು ಅಂದಿನಿಂದ ಕಾಯುತ್ತಿದ್ದೇನೆ. ಅದೊಂದು ಚಿಕ್ಕ ರುಣವ ತೀರಿಸುವ ಜವಾಬ್ದಾರಿ ಕೂಡ ಹೆಗಲೇರಿದೆ. ರೈಟ್....ರೈಟ್......
ಇದು ತುಂಬಾ ಚೆನ್ನಾಗಿ ಬರೆದ ಲೇಖನ. ನಿಮ್ಮ ಬರವಣಿಗೆಯ ಶೈಲಿ ಆಕರ್ಷಕವಾಗಿದೆ. ಇದೇ ರೀತಿ ಬರೆಯುವುದನ್ನು ಮುಂದುವರಿಸಿ!
ಪ್ರತ್ಯುತ್ತರಅಳಿಸಿನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಪ್ರತ್ಯುತ್ತರಅಳಿಸಿ