ಅಪ್ಪ ನೀನ್ಯಾಕೆ ಹೀಗೆ....?
ಅಪ್ಪ ನೀನ್ಯಾಕೆ
ಹೀಗೆ....?
ಮೊನ್ನೆಯಷ್ಟೆ ತಮಿಳಿನ "ವಾಳೈ"
ಸಿನಿಮಾ ನೋಡುತ್ತಿದ್ದೆ. ಶ್ರೀವೈಕುಂಡಮ್ನಲ್ಲಿ ೧೯೯೯ರಲ್ಲಿ
ನಡೆದ ಲಾರಿ ದುರಂತದಲ್ಲಿ ಮೃತರಾದ ೨೦ ಬಾಳೆಗೋನೆ ಸಾಗಣೆ ಮಾಡುತ್ತಿದ್ದ ಶ್ರಮಿಕರ ಕತೆ. ಬಾಲ್ಯವೇ
ಮುಖ್ಯಭೂಮಿಕೆಯಲ್ಲಿರುವ ಸಿನಿಮಾವಾದ ಕಾರಣ ಅರ್ದ್ರತೆಯಿಂದ ಇಷ್ಟವಾಗುತ್ತದೆ. ಇದರಲ್ಲಿ ಒಂದು
ದೃಶ್ಯ ನನ್ನನ್ನು ತುಂಬಾ ಕಾಡಿತು. ಶಾಲೆಯ
ಬಿಡುವಿನ ದಿನಗಳಲ್ಲಿ ಮಾಡುತ್ತಿದ್ದ ಬಾಳೆಗೊನೆಗಳ ಸಾಗಿಸುವ ಕೆಲಸಕ್ಕೆ ಬೇಸತ್ತು ಚಿತ್ರದ ಮುಖ್ಯಪಾತ್ರವೊಂದು
ನೀರೊಳಗೆ ಅವುಗಳನ್ನು ಎಸೆದು ನೀರಿಗೆ ಜಿಗಿಯುವ ಸನ್ನಿವೇಶ ಒಂದಿದೆ. ಅದು ನನಗೆ ಹನ್ನೊಂದನೆ
ವರ್ಷದವನಿದ್ದಾಗ ಸಂಕ್ರಾಂತಿ ಹಬ್ಬದ ದಿನ ನೆನಪಿಗೆ ತಂದು ಬಾಯೆಲ್ಲಾ ಉಪ್ಪು ಒಗರು ಪಸೆ ನಾಲಿಗೆ
ಮೇಲೆ ತಂದಿತು. ಅದಕ್ಕೆ ಬಹುಮುಖ್ಯ ಕಾರಣವೂ ಇದೆ.
ನನ್ನ ಅಪ್ಪ ಮರಗೆಲಸ ಮಾಡುತ್ತಿದ್ದ. ಅಮ್ಮ ಕೂಲಿಗೆ ಹೋಗುತ್ತಿದ್ದಳು.
ದೇವರಾಯನ ದುರ್ಗ ಸಿದ್ಧಗಂಗಾ ಮಠದ ಮಧ್ಯದಲ್ಲಿ ನಮ್ಮದು ಅಂತ ಎರಡು ಎಕರೆ ಜಮೀನು ಇತ್ತು. ಸಮೃದ್ಧವಾಗಿ ಮಳೆಯಾದರೆ ರಾಗಿ, ಜೋಳ, ಕರಿಮಣಿಕಾಯಿ, ಅಲಸಂದೆ,
ಹಾಗಲಕಾಯಿ, ಹುಚ್ಚೆಳ್ಳು ಬೆಳೆದರೆ ಸುಮಾರು ಎನ್ನುವಂತೆ ಆದರೆ ಹುರುಳಿ ಹಾಕಿ ಮಧ್ಯೆ ಅವರೆ ಮುಂತಾದ
ದ್ವಿದಳ ಧಾನ್ಯಗಳನ್ನು ಬೇಳೆಯುತ್ತಿದ್ದೆವು. ಮುಖ್ಯವಾಗಿ ಮರಗೆಲಸವನ್ನೆ ಬದುಕಿಗೆ
ನೆಚ್ಚಿಕೊಂಡಿದ್ದರಿಂದ ಹೊಲವನ್ನು ಬೀಳು ಬಿಡಬಾರದು ಅನ್ನೋ ಕಾರಣಕ್ಕೆ ಬಿತ್ತನೆ
ಮಾಡಲಾಗುತ್ತಿತ್ತು.
ಮುಂಗಾರಿಗೆ ಭಿತ್ತನೆ ಮಾಡಿದರೆ ಸಂಕ್ರಾಂತಿ
ಹಬ್ಬಕ್ಕೆ ಸರಿಯಾಗಿ ಬೆಳೆ ಕೈಗೆ ಬರುತ್ತಿತ್ತು. ಕೊಯ್ಲು ಮಾಡಿದ ಬೆಳೆಯನ್ನು ಬೇರೆ ರೈತರೊಟ್ಟಿಗೆ
ಸರದಿಯಾನುಸಾರ ಕಣಕ್ಕೆ ಸೇರಿಸುತ್ತಿದ್ದೆವು.
ಅಲ್ಲಿಂದ ಕೈಗೆ ಬರುವವರೆಗೂ ತಪಸ್ಸಿನ ಹಾಗೆ ಕೆಲಸಗಳು ಸಾಗುತ್ತಿದ್ದವು. ನಮ್ಮ ಮಾವನ ಮಕ್ಕಳು
ಒಂದೇ ಕೇರಿಯಲ್ಲಿ ಇದ್ದುದರಿಂದ ಅವರೂ ಜೊತೆಯಾಗುತ್ತಿದ್ದರು. ಒಮ್ಮೊಮ್ಮೆ ಹಲವು ಜನರು
ಒಟ್ಟೊಟ್ಟಿಗೆ ಕಣ ಬೇಕೆಂದಾಗ ಅಥವಾ ಕಣ ಹಸನು ಮಾಡಲು ಜನವಿಲ್ಲದಿದ್ದಾಗ ವಿಶಾಲ ಬಂಡೆಯನ್ನರಸಬೇಕಿತ್ತು.
ಇಳಿಜಾರು ಇರುವ ಕಾರಣಕ್ಕೋ ಹಸನು ಮಾಡಲು ಸುಲಭವಿರುವ ಕಾರಣಕ್ಕೆ ವಿಶಾಲ ಬಂಡೆಯೇ ಮುಖ್ಯ
ಆಯ್ಕೆಯಾಗಿರುತ್ತಿತ್ತು. ಕಣವಾದರೆ ಸಗಣಿ ನೀರು ಬಳಿದು ಗುಂಡು ಸುತ್ತಾ ಸಾಗಿಸಿ ಸಿದ್ಧಪಡಿಸುವದು
ಹೆಚ್ಚಿನ ಶ್ರಮ ಬೇಡುತ್ತಿತ್ತು. ಕೆಲವೊಮ್ಮೆ ಬಂಡೆಯೂ ಅಷ್ಟು ಸುಲಭಕ್ಕೆ ದಕ್ಕುತ್ತಿರಲಿಲ್ಲ.
ಕಣವಾದರೇ ಆ ಜಾಗದ ಮಾಲಿಕರು ಯಾರಾದರು ಇರುತ್ತಿದ್ದರು. ಸರದಿಯಾನುಸಾರ ಅವರೇ ಇಂತಹ
ದಿನವೆಂದು ಹೇಳುವ ಕಾರಣಕ್ಕೆ ಗೊಂದಲಗಳು ಇರುತ್ತಿರಲಿಲ್ಲ. ಅದು ಅಲ್ಲದೇ ಉಚಿತವಾಗಿ ದಕ್ಕುವ
ವಿಶಾಲ ಬಂಡೆಯ ಕಾರಣಕ್ಕೆ ಬೇಗ ಯಾರು ಬಂದು ಕೊಯ್ಲನ್ನು ಕಣ ಕಟ್ಟುವರೋ ಅವರು ಮಾಡಬೇಕಿತ್ತು.
ನಮ್ಮಪ್ಪ ಕಡುಕೋಪಿಷ್ಠ ಅವನು ಅಷ್ಟೆ ಸೂಕ್ಷ್ಮ ಸ್ವಭಾವದವನು ಮುಂದೆ ತಿಳಿಯಿತು.
ರಾಗಿ ಕೊಯ್ಲು ಬಂದು ಹೊಲದಲ್ಲಿ ಬಣವೆ ಹಾಕಿದ್ದೆವು. ಒಂದೊಳ್ಳೆ ದಿನ ನೋಡಿ ಬಂಡೆಗೆ ಬಿಡಬೇಕು
ಅನ್ನುವಷ್ಟರಲ್ಲಿ ಯಾರೋ ಆಗಲೇ ಆಕ್ರಮಿಸಿ ಬಿಟ್ಟಿದ್ದರು. ಅವರು ಪರಿಚಯವಿದ್ದರೂ ನಮ್ಮ ಸಮಯಕ್ಕೆ ಕಣ ಮಾಡುವ ಅವಕಾಶ
ಸುಲಭವಾಗಿ ದಕ್ಕಲಿಲ್ಲ. ಆದರೆ ಸಂಕ್ರಾಂತಿ ಹಬ್ಬದ ದಿನ ಹಿಂದಿನ ದಿನ ಹಾಗು ಹಬ್ಬದ ದಿನ ಯಾರೂ
ಮಾಡುವ ಸಂಭವವಿರಲಿಲ್ಲ. ಸಂಕ್ರಾಂತಿ ಹಬ್ಬ ಆಚರಿಸಿ, ಒಂದು ವಾರ ಕಾಯ್ದು ಮಾಡಬಹುದೆಂದು ನಾವು
ಅಂದುಕೊಂಡಿದ್ದೆವು. ಅದೇ ಸಮಯಕ್ಕೆ ಮರಗೆಲಸ ಮಾಡಿ ಒಪ್ಪಂದದ ಪ್ರಕಾರ ಹಬ್ಬಕ್ಕೆ ಬರಬೇಕಾದ ದುಡ್ಡು
ಸಹ ಅಪ್ಪನ ಕೈ ಸೇರಿರಲಿಲ್ಲ. ಅಪ್ಪ ಕೋಪಗೊಂಡಿದ್ದ. ಅದೆಲ್ಲದರ ಕೋಪಕ್ಕೆ ಹಬ್ಬ ಆಚರಣೆಗೆ ಕೊಕ್ಕೆ
ಬಿದ್ದಿತು.
ಹಿಂದಿನ ದಿನ ಹಬ್ಬಕ್ಕೆ ತಯಾರಿಯ ಹಾಗೂ
ಹಬ್ಬಕ್ಕೆ ಬೇಕಾದ ಸಾಮಾಗ್ರಿಯ ಕೊಳ್ಳಲು ತುಮಕೂರಿನಲ್ಲಿ ಮೊದಲಿದ್ದ ವಿನಾಯಕ ಮಾರುಕಟ್ಟೆಗೆ
ಹೋಗುವರೆಂದು ನಾನಂದುಕೊಂಡಿದ್ದೆ. ಅದಾವುದು ಆಗದೇ ಹಬ್ಬದ ಹಿಂದಿನ ದಿನದ ಬೆಳಗ್ಗೆಯೇ ನಮ್ಮನ್ನೆಲ್ಲ
ಒಟ್ಟುಗೂಡಿಸಿಕೊಂಡು ಬಂಡೆಕಣದ ಕಡೆ ಅಪ್ಪ
ಹೊರಡಿಸಿದ್ದ. ಅಮ್ಮ ಮನೆಯಿಂದ ಅಡುಗೆ ಮಾಡಿ ತರಬೇಕಿತ್ತು ಅವಳು ಅಲ್ಲೆ ಉಳಿದಳು. ಕೆಲವು ದಿನಗಳ
ಕೆಳಗೆ ಹಾವೊಂದನ್ನು ಮೊದಲು ಕಣ ಮಾಡಿದ್ದವರು ಹೊಡಿದು ಹಾಕಿದ್ದರೆಂಬ ಸತ್ಯ ನಮ್ಮ ಕಿವಿಗೆ ಬಿದ್ದ,
ನಾನು ನಮ್ಮಣ್ಣ ಇಬ್ಬರು ನಡುಗಿದ್ದೆವು. ಆದರೂ ರಾತ್ರಿ ಅಲ್ಲೆ ನಾವು ಮಲಗಬೇಕಿತ್ತು. ಬಡಿದ
ಒಣತೆನೆಯನ್ನು ಗಾಳಿಗೆ ತೂರಿ ಒಟ್ಟುಗೂಡಿಸಲು ಜೋರುಗಾಳಿಯ ನಿರೀಕ್ಷೆಯಲ್ಲೆ ಅಮ್ಮ ಅಪ್ಪ ಅತ್ತೆ
ಮಾವಂದಿರು ಎದ್ದಿರುತ್ತಿದ್ದರು. ಬೆಳಗ್ಗೆ ಬೇರ್ಪಡಿಸಿದ ರಾಗಿಹೊಟ್ಟು ಹಾಗು ರಾಗಿಯನ್ನು ಮನೆಗೆ
ಸಾಗಿಸಬೇಕಿತ್ತು. ರಾಗಿಹೊಟ್ಟು ಹೊರಲು ಭಾರವಿಲ್ಲವಿದ್ದುದರಿಂದ 2 ಕಿ.ಮೀ.
ದೂರವಿದ್ದ ಮನೆಗೆ ಹೊತ್ತುಕೊಂಡೆ ತರಬೇಕಿತ್ತು. ಹಿರಿಯರು ಬೇರೆ ಬೇರೆ ಕೆಲಸದಲ್ಲಿ
ತೊಡಗಿರುತ್ತಿದ್ದುದರಿಂದ ಚಿಕ್ಕವರು ನಾವೆ ಹೊತ್ತು ತರಲು ನಿಶ್ಚಯವಾಯಿತು. ನೇರ ಟಾರುರಸ್ತೆಯಿಂದ
ಬರದೇ ಗದ್ದೆಬಯಲಿನ ಅಡ್ಡದಾರಿಯ ಮೂಲಕ ಬಂದರೆ 1.5 ಕಿ.ಮೀ ದಾರಿ.
ಎತ್ತಿನಗಾಡಿಗೆ ಎರಡು ಮೂರು ಟ್ರಿಪ್ಪು ಬಂದು
ಹೋಗಲು ಹೆಚ್ಚಿನ ದುಡ್ಡಿನ ಕಾರಣಕ್ಕೆ ಎಲ್ಲರೂ ಹೊಟ್ಟಿನ ಚೀಲವನ್ನು ತಲೆ ಮೇಲೆ ಹೊತ್ತೆ ಅಜ್ಜಿ
ಮನೆಯ ಕೊಟ್ಟಿಗೆಗೆ ತಂದು ಹಾಕಬೇಕಿತ್ತು. ಗದ್ದೆಯ ಬದವು ಕಡಿದಾದದ್ದರಿಂದ ನಿಧಾನವಾಗಿ
ಸಾಗಬೇಕಿತ್ತು ಇಲ್ಲದಿದ್ದರೆ ಒಮ್ಮೊಮ್ಮೆ ಜೋರಾಗಿ ನಡೆದು ಬೀಳುವ ಸಂಭವವಿರುತ್ತಿತ್ತು.
ಒಂದೆ ಊರಲ್ಲಿ
ಮದುವೆಯಾಗಿದ್ದರಿಂದ ಅಜ್ಜಿ ಮನೆ ನಮ್ಮ ಮನೆ ಎರಡು ಮೂರು ಹಟ್ಟಿಸಾಲು ಅಂತರ. ಹಬ್ಬದ ಆಚರಣೆ,
ಗೆಣಸು, ಸೊಗಡಿನ ಅವರೆಕಾಯಿ, ಬೆಂಡು, ಬತ್ತಾಸು ಹೊಸಬಟ್ಟೆ ಹಸಿರುತೋರಣ ಹಬ್ಬದೂಟದ
ನೀರಿಕ್ಷೆಯಲ್ಲಿದ್ದ ನಮಗೆ ದಾರಿಯಲ್ಲಿ ಕಾಣುತ್ತಿದ್ದ ಹಬ್ಬದ ಸಂಭ್ರಮ ಕಸಿವಿಸಿಯನ್ನುಂಟು
ಮಾಡುತ್ತಿತ್ತು. ಗೆಳೆಯರೆಲ್ಲ ಹೊಸಬಟ್ಟೆ ತೊಟ್ಟು ದಪ್ಪಗೋಲಿಯಿಡಿದು ಮೇರಿಯಾಟದಲ್ಲಿ
ತೊಡಗಿದ್ದರು. ನಾನು ಬಿರಬಿರನೇ ಹೆಜ್ಜೆ ಇಡುತ್ತಿದ್ದೆ. ನಾಲ್ಕೈದು ಬಾರಿ ಓಡಾಡಿಯಾಗಿತ್ತು.
ನಮ್ಮಣ್ಣ ನನಗಿಂತ ಎರಡು ವರ್ಷ ದೊಡ್ಡವನು. ಬೇಟೆಯ ಹುಚ್ಚು. ಆಸ್ಪತ್ರೆಯಲ್ಲಿ ಬಳಸಿ ಬಿಸಾಡಿ
ಸಿಗುವ ಉದ್ದನೆಯ ರಬ್ಬರ್ ಎಳೆದು ಒಂದು ಕವಲು ಕಡ್ಡಿಗೆ ಕಟ್ಟಿ, ಗೊಜನಕ್ಕಿಯನ್ನು ಹೊಡೆಯಲು
ಹೋಗುತ್ತಿದ್ದ. ಅವತ್ತು ಮಧ್ಯಾಹ್ನ ಹೋದವನು ಎಷ್ಟೊತ್ತಾದರು ಬರಲಿಲ್ಲ. ಸಿಟ್ಟಿಗೆದ್ದ ಅಪ್ಪ
ಅವನನ್ನು ಹುಡುಕಿ ಹೊರಟು ಅಲ್ಲಿಂದಲೇ ತಾರಾಮಾರಿ ಹೊಡೆದು ತಂದಿದ್ದ. ನನ್ನದು ತುಸು ಪುಕ್ಕಲು
ಸ್ವಾಭಾವ. ಅವನಿಗೆ ಬಿದ್ದ ಏಟು ಗಮನಿಸಿ ನಾನು ಏನೊಂದು ಮಾತಾಡದೆ ಹೊಟ್ಟಿನ ಮೂಟೆಯನ್ನು ಹೊತ್ತು
ಸಾಗುತ್ತಿದ್ದೆ.
ಹೊಟ್ಟುಜೊತೆಗಿದ್ದ
ರಾಗಿತೆನೆಯನ್ನು ಗಾಳಿ ಜೋರಾಗಿ ಬೀಸಿದರೆ ಮಾತ್ರ ತೂರಬೇಕಿತ್ತು. ತೂರಿ ಉಳಿದದ್ದು ಹೊಟ್ಟಿನ ರಾಶಿಗೆ ತುಂಬುತ್ತಿದ್ದರು. ಗಾಳಿ ಬೀಸುವವರೆಗೆ
ಮಾವ ಅತ್ತೆ ಅಮ್ಮ ಕಾಯುತ್ತಿದ್ದರು. ಅಪ್ಪ ಹೊಟ್ಟು ತುಂಬಿ ಚೀಲವನ್ನು ನಮಗೆ ಹೊರಿಸುತ್ತಿದ್ದ.
ಹೊಟ್ಟಿನ ರಾಶಿಯ ಮಧ್ಯೆ ಮುಳ್ಳಿನಂತ ಪುಳ್ಳೆಗಳು ಸೇರಿ ಟವಲ್ ಒಟ್ಟಿಗಿರಿಸಿ ಸಿಂಬೆ ಸುತ್ತಿದ್ದರೂ
ಅದನ್ನು ಮೀರಿ ತಲೆಗೆ ಚುಚ್ಚುತ್ತಿದ್ದವು. ಹೊಟ್ಟಿನ ಚೀಲ ಬಿಸುಟು ನಾನು ಅಲ್ಲಿ ನಿಲ್ಲದೇ
ಬಂದುಬಿಡುತ್ತಿದ್ದೆ. ಅಲ್ಲಿದ್ದರೆ ಅಕ್ಕಪಕ್ಕದ ಮನೆಯ ಗೆಳೆಯರು ಪರಿಚಿತರು ಕೇಳುವರೆಂಬ~
ಗಮನಿಸುವರೆಂಬ ಚಡಪಡಿಗೆ ಹೆಚ್ಚುತ್ತಿತ್ತು.
ಊಟದ
ಸಮಯವಾದರು ಯಾಕೋ ಉಣ್ಣಬೇಕೆಂದು ಅನಿಸಲಿಲ್ಲ. ನಾನು ಓದುತ್ತಿದ್ದ ಸರ್ಕಾರಿ ಶಾಲೆಯ ಆವರಣದಲ್ಲಿ
ಗ್ರಾಮೀಣ ಕ್ರೀಡಾಕೂಟ ಏರ್ಪಡಿಸಿ ವಿವಿಧ ಆಟಗಳನ್ನು ಆಡಿಸುತ್ತಿದ್ದರು. ನಮ್ಮ ಬಂಡೆಕಣದಿಂದ
ನೋಡಿದರೆ ಕಾಣುತ್ತಿತ್ತು ಹೋಗಲು ಮನಸಾದರೂ ಅಪ್ಪನ ಏಟಿನ ಭಯಕ್ಕೆ ಅಲ್ಲಿ ಸುಳಿಯಲಿಲ್ಲ. ಅಲ್ಲಿ
ಇರಲಾಗದ ಸ್ಥಿತಿಗೆ ನನ್ನ ತಲುಪಿಸಿದ ಅಪ್ಪನ ಬಗ್ಗೆ ವಿಪರೀತ ಕೋಪ ಬಂತು. ಉಳಿಯುತ್ತಿದ್ದ
ನೆತ್ತಿಗೆ ಬೆರಳು ತಾಕಿಸಿ ನೊಡಿಕೊಂಡೆ. ತಲೆ ಮೇಲಿಂದ ಪುಳ್ಳೆಗಳೂ ಚುಚ್ಚಿದ್ದ ಜಾಗದಿಂದ ರಕ್ತ ಜಿನುಗುತ್ತಿತ್ತು.
ಹೇಳಿದರೇ ಅಪ್ಪ ಎಲ್ಲಿ ಹೊಡೆಯುವನೋ ಎಂದು ತೆಪ್ಪಗಾದೆ. ಹೊಟ್ಟಿನ ರಾಶಿಯ ಮೇಲೆ ಅವನನ್ನು ದೂಡಿ
ಎಲ್ಲಿಯಾದರೂ ಓಡಿಹೋಗಬೇಕೆನಿಸುತ್ತಿತ್ತು. ಅದೆಲ್ಲಾ ಸಾಧ್ಯವಿರಲಿಲ್ಲ. ಅಣ್ಣನಿಗೆ ಬಿದ್ದ ಏಟಿಗೆ
ಅವನು ತುಂಬ ಸಮಯದವರೆಗೆ ಅಳುತ್ತಲೇ ಇದ್ದ.
ಎಲ್ಲಾ ಕೆಲಸ
ಮುಗಿಯುವಷ್ಟೊತ್ತಿಗೆ ಸಂಜೆ ಏಳು ಗಂಟೆ ಮೀರಿತ್ತು. ಊರವರು ಹಬ್ಬದ ಸಂಭ್ರಮ ಮುಗಿಸುವಾಗ ನಮ್ಮ
ಮನೆಯಲ್ಲಿ ಗೆಣಸು ಅವರೆ ಕೂಡೊಲೆಯ ಮೇಲೆ ಬೇಯುತ್ತಿದ್ದವು. ಸ್ನಾನಕ್ಕೆ ಹೋದಾಗಲೇ ನೆತ್ತಿಯ ಯಾವ ಯಾವ
ಭಾಗದಲ್ಲಿ ಗಾಯವಾಗಿದೆ ಎಂದು ಅರಿವಿಗೆ ಬಂದು ನೋವಿಗೆ ಕಣ್ಣೀರು ಧಾರಾಕಾರವಾಗಿ ಹರಿಯತೊಡಗಿತು. ತಲೆಯ
ಕೂದಲಿನಲ್ಲಿ ಅಡಗಿ ಕೂತಿದ್ದ ಹೊಟ್ಟಿನ ಚಿಕ್ಕಚಿಕ್ಕ ಕಣಗಳು, ಮಣ್ಣು, ಹೆಪ್ಪು ಗಟ್ಟಿದ ರಕ್ತದ
ಕಣಗಳು ಬಿಸಿ ನೀರಿನ ಜೊತೆಗೆ ಜಾರುತ್ತ ಮುಖದ ಮೇಲಿಂದ ಇಳಿಯುತ್ತಿದ್ದವು. ಅವುಗಳು ನಾಲಿಗೆಗೆ
ತಾಗಿ ಉಪ್ಪು ಒಗರು ಅರಿವಿಗೆ ಬಂದು ಕೆಮ್ಮತೊಡಗಿದೆ. ತುಂಬಾ ಹೊತ್ತಿನವರೆಗೂ ಇದೇ
ಪುನಾರಾವರ್ತನೆಯಾಗಿ ಅಂತೂ ಸ್ನಾನ ಮುಗಿಸಿ ಹಬ್ಬದೂಟ ಮಾಡುವಷ್ಟರಲ್ಲಿ ಗಂಟೆ ಹತ್ತಾಗಿತ್ತು.
ತಿಂದು ಹೊರಳಿದಾಗ ನಿದ್ದೆ ಆವರಿಸಿ ಬೆಳಗ್ಗೆ ಎದ್ದಾಗಲೇ ಅರಿವಾಗಿದ್ದು ಮೈ ಸಣ್ಣಗೆ
ಸುಡುತ್ತಿದೆಯೆಂದು.
**
ಅಪ್ಪನ ಕೋಪದ
ಪರಿಚಯವಿದ್ದ ನಮಗೆ ಅವನೆಷ್ಟು ಸೂಕ್ಷ್ಮ ಮನದವನು ಎನ್ನುವುದು ಅರಿವಾಗಲು ಆ ಸಂಕ್ರಾಂತಿ ಕಳೆದು
ಮೂರ್ನಾಲ್ಕು ವರ್ಷ ಬೇಕಾಯಿತು. ನನ್ನಣ್ಣ ಹಾಗೂ ಅಪ್ಪನದು ಎಂದೂ ಹಾವು ಮುಂಗುಸಿ ಸಂಬಂಧ. ಅವನದು
ತುಸು ಒರಟು ಸ್ವಾಭಾವ. ಅಪ್ಪನ ಹಾಗೆ. ಅವತ್ತು ಯಾವುದೋ
ಕಾರಣಕ್ಕೆ ಅಪ್ಪ ಬೈದನೆಂದು “ಮನೆಗೆ
ಹೆಜ್ಜೆ ಇಡೊಲ್ಲ. ಸತ್ರು ಇಲ್ಲಿಗೆ ಬರಲ್ಲ” ಎಂದು ಅಬ್ಬರಿಸಿ ಹೋದವನು ಸಂಜೆಯಾದರೂ ಬಂದಿರಲಿಲ್ಲ.
ಊರಕೆರೆ ತುಂಬಿ ಕೋಡಿಬಿದ್ದಿತ್ತು ನಮಗೆಲ್ಲ ದಿಗಿಲಾಯಿತು. ಅಮ್ಮನಿಗೆ ಅಂದೇನೋ ಅವಘಡ
ಸಂಭವಿಸುತ್ತದೆಂದು ಗಾಢವಾಗಿ ಅನಿಸಿ ಸಂಕಟಪಡುತ್ತಿದ್ದಳು. ಅಪ್ಪನಿಗೆ ಬಾಯಿಗೆ ಬಂದಂಗೆ ಬೈದಳು.
ಅಪ್ಪ ಏನೊಂದು ಮಾತಾಡಲಿಲ್ಲ. ಮಾವ ಬಂದವನೆ ಹುಡುಕಲು ನನ್ನನ್ನು ಜೊತೆಗೆ ಕರೆದೋಯ್ದ. ಕೆರೆಯನ್ನು
ಸುತ್ತಿ ಬಂದರೂ ಯಾವುದೇ ಸುಳಿವು ಕಾಣಲಿಲ್ಲ. ಕ್ಯಾತಸಂದ್ರದ ಕಡೆ ಹೊದನೆಂದು ಊರವರು ಯಾರೋ
ಹೇಳಿದ್ದು ಕೇಳಿ ಎದೆ ಧಸಕ್ಕೆಂದಿತು. ಅದು ನಮ್ಮ ಮನೆಗೆ ಹತ್ತಿರದ ರೈಲ್ವೆ ಸ್ಟೇಷನ್ನು.
ಬಿರಬಿರನೇ ಹೆಜ್ಜೆ ಹಾಕುತ್ತಾ ನಾನು ಮಾವ ರೈಲ್ವೆ ಟ್ರಾಕಿನ ಬಳಿ ಹೋಗುತ್ತಿದ್ದರೆ, ಹಾದು
ಹೋಗುತ್ತಿದ್ದ ರೈಲುಗಳ ಹಾರನ್ನು ನಮ್ಮನ್ನು ಮತ್ತಷ್ಟು ಸಂಕಟಕ್ಕೆ ದೂಡುತ್ತಿದ್ದವು. ಅಂತದ್ದೇನಾದರು
ಕೆಟ್ಟದು ಆದರೆ ಅಮ್ಮನ ಅಳುವನ್ನು ಊಹಿಸಿ ನನಗೆ ದುಃಖ ಒತ್ತರಿಸಿ ಬಂತು.
ಅಲ್ಲಿ ಹೋಗಿ
ನೋಡಲಾಗಿ ಅಲ್ಲಿ ಯಾರೂ ಒಬ್ಬ ಅಡ್ಡಾಡುತ್ತಿದ್ದನೆಂದು ಗೇಟು ಎತ್ತುವ ಮಧ್ಯವಯಸ್ಕನೊಬ್ಬ ಹೇಳಿದ.
ನಾವಿಬ್ಬರು ಹೀರೆಹಳ್ಳಿಯ ಕಡೆಯವರೆಗೂ ಹೋಗಿ ವಾಪಸ್ಸು ಬಂದೆವು.ಆಗಲೇ ಕತ್ತಲಾಗಿತ್ತು. ಮನೆಗೆ ಹೇಳಿ
ಪೋಲೀಸು ಕಂಪ್ಲೆಂಟು ದಾಖಲಿಸಬೇಕಿತ್ತು. ನಾವಿಬ್ಬರು ವಾಪಸ್ಸು ಬಂದಾಗ ಅಮ್ಮ ಆಗಲೇ ಅತ್ತು ಅತ್ತು
ಸುಸ್ತುಹೊಡೆದಿದ್ದಳು. ಅಪ್ಪನನ್ನು ಚನ್ನಾಗಿ ಬೈದ ಕಾರಣಕ್ಕೆ ಅಪ್ಪ ಸಪ್ಪಗೆ ಮುಖ ಮಾಡಿಕೊಂಡು ಆಚೆ
ನಿಂತಿದ್ದ. ಪೋಲೀಸರ ಬಳಿ ಹೋಗಲು ಎಲ್ಲ ನಿಶ್ಚಯಿಸಿದೆವು. ಒಮ್ಮೆ ಯಾವಾಗಲು ಈಜಲು ಹೋಗುವ ಬಾವಿಯ
ಬಳಿ ಹೋಗಿ ನೋಡೋಣ ಎನ್ನುವ ಮನಸಾಗಿ ಅಪ್ಪ ನಾನು ಮಾಮ ಮೂವರು ಹೋದಾಗ ಅಣ್ಣ ಆ ಕಗ್ಗತ್ತಲಲ್ಲಿ
ಅಳುತ್ತಾ ಸುಧಾರಿಸಿಕೊಳ್ಳುತ್ತಾ ಬಾವಿಯ ಪಂಪ್ ಹೌಸಿನ ಮೇಲೆ ಕೂತಿದ್ದ. ಅಪ್ಪ ಅವನನ್ನು ನೋಡಿದವನೆ
ನಮ್ಮನ್ನು ಹಿಂದೂಡಿ ಬಿರಬಿರನೆ ಹೆಜ್ಜೆ ಹಾಕಿದ. ಅಣ್ಣನಿಗೆ ಸರಿಯಾಗಿ ಪೆಟ್ಟು ಬಿಳುತ್ತದೆಂದು
ಎಣಿಸಿದ್ದೆವು. ಸಾಯುವ ಹಾಗೆ ಹೊಡೆದರೆ ಇನ್ನೆನು ಗತಿಯೆಂದು ಚಿಂತಿಸತೊಡಗಿದೆ. ಮಾಮ “ಹೊಡಿಬೇಡ ಕಣಯ್ಯೋ.... ಬಿಟ್ಬಿಡೋ...ಎಳೆ
ಹುಡುಗುನ್ನಾ” ಎಂದು
ಅಂಗಲಾಚುತ್ತಿದ್ದ. ಅಪ್ಪ ಕೆಳಿಸದವನಂತೆ ನುಗ್ಗಿದ. ಅಪ್ಪ ಬಳಿ ಬರುತ್ತಿದ್ದಂತೆ ಅಣ್ಣ ಹೆದರಿ
ತರಗುಟ್ಟುತ್ತಿದ್ದ. ಆದರೆ ಅಪ್ಪ ಅವನ ಬಳಿ
ಹೋದವನು ಅವನ ತಬ್ಬಿ ಅಳತೊಡಗಿದ. ಅವನ ಕಣ್ಣಲ್ಲಿ ಧಾರಾಕಾರ ನೀರು. ಅಪ್ಪ ಎಂಬೋ ಕೋಪದ ಮೂಟೆ ಕಣ್ಣೀರು ಬರುಗೂವುದನ್ನು ಸಾಕ್ಷಾತ್
ನೋಡಿ ಅಚ್ಚರಿಯಾಯಿತು. ಅವತ್ತು ಅವನ ಅಳುವು ನನ್ನಲ್ಲಿ ದುಃಖ ತರುತ್ತದೆಂದು ಎಣಿಸಿರಲಿಲ್ಲ. “ಮತ್ತೆ ಬೈಯದು ಹೊಡಿಯದು ಮಾಡಲ್ಲ ಕಣೋ
ನನ್ನಪ್ನೆ...” ಎಂದು ತಬ್ಬಿ
ಅಳುತ್ತಿದ್ದ. ಒಂದು ಲೈಟು ಇಲ್ಲದ ಕಡು ಕತ್ತಲೆಯ ತೋಟದ ನೀರವ ಮೌನದಲ್ಲಿ ಅಪ್ಪ ಅಳುವುದು ಊರಿಗೂ ಕೇಳಿಸಿತೇನೋ
ಅನ್ನುವ ಹಾಗೆ ನಾವು ವಾಪಸ್ಸು ಬರುವ ವೇಳೆಗೆ ಅಮ್ಮನಿಗೆ ವಿಷಯ ತಲುಪಿ ಅವಳು ತುಸು
ನಿರಾಳವಾಗಿದ್ದಳು. ಅಪ್ಪ ಅಂದು ಅತ್ತದ್ದಲ್ಲದೇ
ಮುಂದೆಯೂ ಅಂದು ಹೇಳಿದ ಹಾಗೆ ನಡೆದುಕೊಂಡ. ಆ ಘಟನೆಯಾದ ಮೇಲೆ ನಮ್ಮಿಬ್ಬರ ಮೇಲೆ ಅಪ್ಪ ಎಂದೂ
ಕೈಮಾಡಲಿಲ್ಲ. ಅವತ್ತು ಅಪ್ಪನ ಇನ್ನೊಂದು ಮುಖ ಪರಿಚಯವಾಗಿತ್ತು. ನಮ್ಮಿಬ್ಬರ ಮೇಲೆ ಅಪ್ಪ
ಜೀವವನ್ನೆ ಇಟ್ಟುಕೊಂಡಿದ್ದ.
***
ಇಂತಹ ಹಲವು
ಘಟನೆಗಳು ನನ್ನ ಮನಸಿನಲ್ಲಿ ಅಚ್ಚೊತ್ತಿದ ಹಾಗೆ ಇವೆ. ಕೆಲವು ಖುಷಿ ಕೊಟ್ಟರೆ, ಕೆಲವು ಈಗಲು
ಕಣ್ಣು ತುಂಬಿಸುತ್ತವೆ. ಅವುಗಳ ಬಗ್ಗೆ ಈಗ ಯಾವುದೇ ಈರ್ಷ್ಯೆಗಳಿಲ್ಲ. ಎಲ್ಲವೂ ಬಾಲ್ಯದ ಹಾಗು
ಬದುಕಿನ ಭಾಗ. ಈ ಎಲ್ಲಾ ಅನುಭವಗಳನ್ನು ಗಮನಿಸುವಾಗ ಒಳ್ಳೆಯದೋ ಕೆಟ್ಟದೋ ಇಂತಹ ಸಾವಿರಾರು ಬಿಡಿ
ಅನುಭವದ ಚಿತ್ರಣಗಳು ನಮ್ಮ ಬಾಲ್ಯವನ್ನು ಕಟ್ಟಿವೆ. ಇದ್ದ ಹಾಗೆಯೆ ಇವುಗಳನ್ನು ಸ್ವೀಕರಿಸಲು ಓದು
ಅನುಭವ ಕಲಿಸಿವೆ. ಬದುಕು ಸ್ವೀಕಾರ ಮನೋಭಾವ ಬಹುಮುಖ್ಯ. ಆ ಕ್ಷಣದ ಕಹಿ ಅನುಭವವಷ್ಟೆ ಬದುಕಲ್ಲ.
ಜನಗಳು ಬದಲಾಗಬಹುದು ಆಗ ಅದೇ ಘಟನೆಗಲು ನಮ್ಮನ್ನು ತಟ್ಟುವ ಬಗೆ ಬೇರೆಯಾಗುತ್ತದೆ. ಕಹಿ ಘಟನೆಗಳ
ಹೊರೆ ಹೆಚ್ಚು ಹೊತ್ತು ತಲೆ ಮೇಲಿದ್ದಷ್ಟು ನೋವು ಕೊಡುವುದು ಹೆಚ್ಚು. ನೆನಪಿಗೆ ಬಂದಾಗ ಉಪ್ಪು
ಒಗರು ಸಹಜ ಅದು ಬದುಕಿನ ಭಾಗ.
ನಾವು ಬೆಳೆಯುವಾಗ
ನನ್ನಪ್ಪ ತೆಗೆದುಕೊಂಡ ಕೆಲವು ದೂರಾಲೋಚನೆ ಇಲ್ಲದ ಹಣಕಾಸಿನ ನಿರ್ಧಾರಗಳು ನಮ್ಮ ಕುಟುಂಬವನ್ನು
ಬಹಳ ಕಾಲ ತೊಂದರೆಯಲ್ಲಿಟ್ಟಿತ್ತು. ಉದ್ದೇಶ ಒಳ್ಳೆಯದೇ ಆದರೂ ಅಪ್ಪ ನಿರ್ಧರಿಸಿದರೆ ಮನೆಯವರ ಯಾರ
ಮಾತನ್ನು ಕೇಳುತ್ತಿರಲಿಲ್ಲ. ಅಪ್ಪನ್ಯಾಕೆ ಹೀಗೆ ನಮ್ಮನ್ನು ಕಷ್ಟಕ್ಕೆ ದೂಡುತ್ತಾನೆಂದು ಮನಸಲ್ಲೆ
ನೊಂದುಕೊಂಡಿದ್ದಿದೆ. ಆದರೆ ಕಾಲ ಮಾಗುತ್ತಾ ಬದುಕಿನ ಸವಾಲುಗಳು ಆ ಕ್ಷಣಕ್ಕೆ ಅಸಹನೀಯವೆನಿಸಿದರೂ
ನಮ್ಮನ್ನು ರೂಪಿಸಲು ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ಅರ್ಥವಾಗಿದೆ. ಅವೆಲ್ಲ ಅನುಭವಗಳು ಈಗ
ಪಾಠಗಳಂತೆ ತೋರುತ್ತವೆ. ಅಪ್ಪನ ನಿರ್ಧಾರಗಳು ಫಲಿಸದಿದ್ದರೂ ಕುಟುಂಬದ ಅಭ್ಯುದಯವನ್ನು ಗಮನದಲ್ಲಿ
ಇಟ್ಟಿದ್ದಂತೂ ಸತ್ಯ. ಕಷ್ಟದ ಆ ವರ್ಷಗಳನ್ನು ನನ್ನ ಬಾಲ್ಯದ ಭಾಗವೆಂದೆ ತಿಳಿದಕಾರಣಕ್ಕೆ ಆ ಸಮಯದ
ಕೋಪ ಹತಾಷೆ ಈಗ ನನ್ನಲ್ಲಾಗಲಿ ನಮ್ಮಣ್ಣನಲ್ಲಾಗಲಿ ಇಲ್ಲ. ದಿನದಿಂದ ದಿನಕ್ಕೆ ವಯಸ್ಸಾಗುತ್ತಾ
ನನ್ನಪ್ಪ ಮತ್ತಷ್ಟು ಮಾಗುವುದ ನೋಡುತ್ತಿರುವಾಗ ನನಗನ್ನಿಸುವುದು, ಅಷ್ಟೆಲ್ಲಾ ಏರಿಳಿತಗಳು ಬದುಕಿನ
ಭಾಗ. ಅವುಗಳಿಲ್ಲದೆ ನಮ್ಮ ಬದುಕನ್ನು ನೋಡುವುದು ಅಸಾಧ್ಯ. It’s a reminder that acceptance does not mean erasing
difficult memories but rather learning to see them as meaningful parts of our
Story.
ನಂಗೆ
ನೌಕರಿಯಾಗಿ ಊರು ಬಿಟ್ಟ ಮೇಲೆ ಮನೆಯ ಮುಖ್ಯ ನಿರ್ಧಾರಗಳು ಹಾಗು ಖರ್ಚು ನಾನು
ನಿಭಾಯಿಸುತ್ತಿದ್ದೇನೆ. ಅಣ್ಣ ಮನೆಯ ಆಗು ಹೋಗುಗಳನ್ನು ನೋಡಿಕೊಳ್ಳುತ್ತಾನೆ. ಈಗ ಅಪ್ಪನಿಗೂ ಅರುವತ್ತು ತುಂಬಿ ಹಣ್ಣಾಗುತ್ತಿದ್ದಾನೆ. ಬಿಪಿ ಷುಗರ್
ಎರಡೂ ಅವನ ಹೆಗಲೇರಿ ಆಗಾಗ ಕುಟುಕುತ್ತಿರುತ್ತವೆ. ಮರಕೆಲಸ ಮಾಡುವಾಗ ಮೊದಲಿನಷ್ಟು ಕಸುವು
ಈಗಿಲ್ಲ. ಊರಿಗೆ ಹೋದಾಗ, “ಆಹಾರದಲ್ಲಿ ಕಟ್ಟು
ನಿಟ್ಟು ಮಾಡು” ಎಂದರೆ ತಲೆ ಕೆರೆದುಕೊಳ್ಳುತ್ತಾನೆ.
ಅಮ್ಮನೋ “ನೀನ್ಯಾಕೆ ನಿಮ್ಮಪ್ಪನ
ಮೇಲೆ ಹಂಗೆ ರೇಗ್ತಿಯಾ” ಎಂದು ಗಂಡನನ್ನು
ವಹಿಸಿಕೊಳ್ಳುತ್ತಾಳೆ. ವರ್ಷದ ನನ್ನ ಮಗನಿಗೆ ಸಕ್ಕರೆ ಪದಾರ್ಥ ಬೇಡ ಅಂತ ಗದರುವಾಗ, ಜೊತೆಗೆ ಅಪ್ಪನ ಕಡೆ ತಿರುಗಿ “ಸಕ್ಕರೆದು ಏನು ತಿನ್ನಬೇಡಿ” ಎಂದು ದೊಡ್ಡಗೆ ಕಣ್ಣು ಬಿಟ್ಟು ಹೇಳುವಾಗ
ಇಬ್ಬರೂ ಪಿಳಿಪಿಳಿ ಕಣ್ಣು ಬಿಟ್ಟು ನೋಡುತ್ತಿರುತ್ತಾರೆ. ಮಗನೂ ಒಂದು ದಿನ ಅಂದುಕೊಳ್ಳಬಹುದು “ಅಪ್ಪ ನೀನ್ಯಾಕೆ ಹೀಗೆ...” ಅಂತ. ಇದರ ಮಧ್ಯೆ ಆಗಾಗ ನನಗೆ Generational Role Conflict ಕಾಡುತ್ತದೆ. ನಾನು ಯಾರಿಗೆ ಅಪ್ಪ ಯಾರಿಗೆ ಮಗ ಅಂತ.
ಚಂದ್ರಶೇಖರ್ ಡಿ.ಆರ್.
ತುಮಕೂರು
ಸುಂದರವಾಗಿ ಮೂಡಿಬಂದಿದೆ
ಪ್ರತ್ಯುತ್ತರಅಳಿಸಿ