FIRST BEST THING

 

"smile is the second best thing you can do with your lips..😌"

ತಟಕ್ಕನೆ ಮೋಬೈಲು ಲಾಕು ಮಾಡಿ ಕೆಳಗಿಟ್ಟೆ. ಕೈ ರೇಖೆಗಳ ಮಧ್ಯದಲ್ಲಿ ಬೆವರು ನೀರು ಒಸರಿ ಹಸ್ತವೆಲ್ಲಾ ತಣ್ಣಗಾದಂತಾಗಿತ್ತು. ಕೈಗಳೇಕೋ ಸಣ್ಣಗೆ ನಡುಗುತ್ತಿದ್ದವು. ಬೇಕಂತಲೆ ಬೇರೆ ಏನಾದರೂ ಮಾಡೋಣಂತ ನನ್ನನ್ನೆ ನಾನು ತೊಡಗಿಸಿಕೊಳ್ಳೋಕೆ ನೋಡಿದೆ. ನೋಟಿಫಿಕೆಶನ್ನು ಬರುತ್ತದೆಯಾದರೂ ವಾಟ್ಸಪ್ಪು ಒಳಹೊಕ್ಕು ಇಣುಕಿದರೇನೆ ಉಚಿತ.  ಇನ್ನೂ ಡಬಲ್ಲು ಟಿಕ್ಕಲ್ಲೆ ಮೆಸೇಜುಇತ್ತು. ಇನ್ನು ನೋಡಿಲ್ಲ ಎಂದು  ತುಸು ನಿರಾಳನಾದೆ. ಸ್ಕ್ರೋಲಿಸುತ್ತಾ ಮೇಲಿನ ಮೇಸೇಜುಗಳು, ರಿಪ್ಲೆಗಳನ್ನು ನೋಡಿದಾಗ ಅವಳು Read Receipt ಕೊಟ್ಟಿಲ್ಲವೆಂದು ಅರಿವಾಯಿತು. ಪರಿಚಯವಾಗಿ ಐದು ತಿಂಗಳಾಗಿದ್ದರೂ ಇತ್ತಿಚೆಗೆ ನಂಬರು ಕೊಟ್ಟಿದ್ದಾಗಿಯೂ ಹಾಗೆ ಅಗಣಿತ ಮೆಸೇಜುಗಳಾದರೂ ಇದ್ಯಾಕೆ ನಾನು ಗಮನಿಸಲಿಲ್ಲ ಎಂದು ಕೈ ಕೈಹಿಸುಕಿಕೊಂಡೆ. ಬಿ ಹೆಚ್ ರಸ್ತೆಯಲ್ಲೆ ಒಂದೇ ಸಂಸ್ಥೆಗೆ ಸೇರಿದ ಅಕ್ಕಪಕ್ಕವೆ ಇದ್ದ ಬಾಯ್ಸ್ ಕಾಲೇಜು ಮತ್ತು ವಿಮೆನ್ಸ್ ಕಾಲೇಜು. ನಾವಿಬ್ಬರೂ ಪರಿಚಯವಾಗೋಕೆ ಒಂದು ಸಾಂಸ್ಕ್ರೃತಿಕ ಕಾರ್ಯಕ್ರಮ. ಅದರ ವಿವರಣೆಯನ್ನ ಇನ್ನೊಮ್ಮೆ ಯಾವಗಲಾದರೂ ಬರೆಯುತ್ತೇನೆ.

ಡಿಲೀಟು ಮಾಡಲು ಮನಸಾದರೂ, ಏನಾದರಾಗಲಿ ನೊಡೋಣ  ಎಂಬ ಭಂಡಧೈರ್ಯ ಬೆನ್ನು ತಟ್ಟಿತು. ಅದಾಗಲೇ ಕಳುಹಿಸಿ 13 ನಿಮಿಷಗಳಾಗಿದ್ದವು ತೊರೆಯಂತೆ ರಭಸವಾಗಿ ಹರಿಯುತ್ತಿದ್ದ ಮಾತುಕತೆ ಒಂದೇ ಮೆಸೇಜಿಗೆ ಅಣೆಕಟ್ಟೆ ಕಟ್ಟುಕೊಂಡಿತ್ತು. ಮನಸ್ಸು ಈಗ ವಿಚಿತ್ರ ಭಾವದಲ್ಲಿ ತೊಳಲಾಡುತ್ತಿತ್ತು. ಅಕಸ್ಮಾತ್ ಪೋಲಿಸು ಕೇಸಾದರೇ ಏನಾಗಬಹುದೆಂದು ಯೋಚಿಸುತ್ತಿದ್ದೆ. ಹಂತ ಸಿನಿಮಾದಲ್ಲಿ  ಅಂಬರೀಶ್ನ್ನು ಚೈನುಗಳಲ್ಲಿ ಬಂಧಿಸಿ ಗಡ್ಡ ಕೆರೆದುಕೊಳ್ಳೋ ಸೀನು ಜ್ಞಾಪಕಕ್ಕೆ ಬಂದು ದಿಗಿಲಾಯಿತು. ತೆಗೆದುಬಿಡೋಣ ಎಂದು ದೃಢವಾಗಿ ನಿರ್ಧರಿಸಿದೆ. ಏತನ್ಮಧ್ಯೆ ಒಂದು ಅವಘಡ ವಾಯಿತು. Delete for everyone ಕೊಡುವ ಬದಲು Delete for me ಕೊಟ್ಟಾಕ್ಷಣ ಅದು ಗೊತ್ತು ಗುರಿ ಇಲ್ಲದೆಡೆ ಮರೆಯಾಯಿತು. ಕೆಂಡದ ಮೇಲೆ ಕೂತಂತಾಯಿತು. ನನ್ನ ಕತೆ ಮುಗಿಯಿತೆಂದು ನಿರ್ಧರಿಸಿದೆ. ಅವಳು ಅವರಣ್ಣನಿಗೋ, ಅಥವಾ ಅವಳ ಬೆಷ್ಟಿಗೋ ಸ್ಕ್ರೀನ್ ಶಾಟ್ ತೆಗೆದು ಕಳುಹಿಸಿ, ಯಾವುದಾದರೂ ಅಪರಿಚಿತ ಕರೆ ಬಂದರು ಬರಬಹುದೆಂದು ಆ ಸರಿ ರಾತ್ರಿಯಲೂ ಕಾಯತೊಡಗಿದೆ.

ಆಗಲೇ 21 ನಿಮಿಷಗಳಾಗಿತ್ತು. ನಾನು ಮೊಬೈಲು ಬಿಟ್ಟು ಟಿ.ವಿ. ನೋಡ್ತಿದ್ದೆ. ಅದರಲ್ಲಿ ಜನರೆಲ್ಲಾ ಸೇರಿ ಚಪ್ರಿಯೊಬ್ಬನಿಗೆ  ಹಿಗ್ಗಾಮುಗ್ಗ ತಳಿಸುತ್ತಿದ್ದರು. ಅಲ್ಲೊಬ್ಬ ಹುಡುಗಿ ಬಿಳಿ ಅ್ಯಕ್ಟಿವಾದ ಬಳಿ ನಿಂತು  ಅಳುತ್ತಿದ್ದಳು. ಅವಳ ಜೊತೆ ಇದ್ದ ಗೆಳತಿ ಅವಳ  ಭುಜದ ಮೇಲೆ ಕೈ ಇಟ್ಟು ಸಂತೈಸುತ್ತಿದ್ದಳು. ಈ ಟೈಮ್ನಲ್ಲಿ ಇದೇ ಬರಬೇಕಾ ಎಂದು ಹಲುಬಿದೆ. ಚಾನೆಲ್ಲು ಚೇಂಜು ಮಾಡಿವಾಗ ಬರುವ ಕರಿ ಕಲರಿನ ತೆರೆಯ ಮೇಲೆ ನನ್ನ ಪಕ್ಕ ಇಟ್ಟಿದ್ದ ಮೊಬೈಲು ಮಿನುಗಿದ ಅನುಭವವಾಯಿತು. ಪಟಕ್ಕನೆ ಮೋಬೈಲು ತಡಕಿದೆ. ಎರಡು ಮೆಸೇಜು ರಿಪ್ಲೆ ಬಂದಿತ್ತಾದರೂ  ಅವು ಡಿಲೀಟು ಆಗಿ ಮುಖಮುಚ್ಚಿಕೊಂಡಿತ್ತು. ಈ ವಾಟ್ಸಪ್ಪು ಹುಡುಗಿಯರಿಗೆ ಎಷ್ಟು ವಿಧೇಯವಾಗಿರುತ್ತದೆ ಎನಿಸಿ ಜುಕರ್ಬರ್ಗನ ಮೇಲೆ ತುಸು ಕೋಪ ಬಂತು. ನಿಧಾನವಾಗಿ ಡಿಪಿ ನೋಡಿದೆ. ಅದು ಆಗಲೇ ಕಾಣೆಯಾಗಿತ್ತು. ನನಗೆ  ಮತ್ತೂ ದಿಗಿಲಾಯಿತು. ಪ್ರೋಫೈಲು ಮೇಲೆ ಕ್ಲಿಕ್ಕಿಸಿದೆ. Status ಇನ್ನು ಭಿತ್ತರವಾಗುತ್ತಿತ್ತು Intellect is seductive” . ಬ್ಲಾಕು ಮಾಡಿಲ್ಲವೆಂದು ಸ್ವಲ್ಪ ಸಮಾಧಾನವಾಯಿತು.  ಬೆಳ್ಳಂಬೆಳಗ್ಗೆಯೇ  ಎದ್ದು ದೇವರಿಗೂ ಮುಖ ತೋರಿಸದೆ ಒಂದು ಗಂಟೆಗೂ ಮಿಕ್ಕಿ ಇಬ್ಬರೂ ಮಾತಾಡಿದ್ದೆವು. ಅದೆಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದ ಹಾಗಾಗಿತ್ತು. ಮತ್ತೆಂದು ಇಷ್ಟೊಂದು ರಿಸ್ಕು ತಗೋಬಾರದು ಲೈಫಲ್ಲಿ ಅಂತ ಅವಳ ಕಾಣದ ಡಿಪಿ ಮೇಲೆ ಪ್ರಮಾಣ ಮಾಡಿದೆ.

ರೀಲ್ಸ್ ಗಳನ್ನಾದರೂ ನೋಡೋಣ ಎಂದು ಸ್ಕ್ರೋಲಿಸಲು ಶುರುಮಾಡಿದೆ. ಮದುವೆಯಾಗದ ರಾವುಲ್ಲಾ ಕರಿಮಣಿ ಮಾಲಿಕ ಹೇಗೆ ಆಗ್ತಾನೆ ಎಂಬ ವಿಷಯ ಸಿರಿಯಸ್ಸಾಗಿ ಡಿಸ್ಕಸ್ಸು ಮಾಡೋಣ ಎನಿಸಿದರೂ ಅವಳಿನ್ನು ಮೆಸೇಜು ಮಾಡಿರಲಿಲ್ಲ. ನಂತರ ರೀಲು ನೋಡೋಣ ಎಂದು ಮೇಲಕ್ಕೆತ್ತಿದೆ. 12th FAIL  ಮೂವಿಯ ದೃಶ್ಯವೊಂದು ತೇಲುತ್ತಿತ್ತು. ಪೋಲೀಸು ಠಾಣೆಯಲ್ಲಿ ಕೂತ ಮನೋಜ್ ಕುಮಾರ್ ಶರ್ಮ, Non Cognizable Offence”ಗೆ ವಾರಂಟ್ ಇಲ್ಲದೇ ತನ್ನ ಸ್ನೇಹಿತನನ್ನು ಅರೆಸ್ಟ್ ಮಾಡಿದ್ದು ತಪ್ಪೆಂದು ವಾದಿಸುತ್ತಿದ್ದ. ನನೀಗ ಮಾಡಿರುವ ಸಾಹಸ Cognizable Offence ಅಥವಾ Non Cognizable Offence ವ್ಯಾಪ್ತಿಗೆ ಬರುತ್ತದೋ ಎಂದು ಯೋಚಿಸತೊಡಗಿದೆ. ಗೂಗಲಿಸಿ ನನ್ನ ಈ ಕೈಂಕರ್ಯ ಎರಡನೇ ವ್ಯಾಪ್ತಿಗೆ ಬರುತ್ತದೆಂದೂ, ಪೋಲೀಸು ಬಂದರೂ ವಾರಂಟ್  ತರಲು ಹೇಳಿ ವಾಪಸ್ಸು ಕಳುಹಿಸಲು ನಿಶ್ಚಯಿಸಿದೆ.

"ನನ್ ಮೋಬೈಲು ಹ್ಯಾಕಾಗಿತ್ತು...ವೈರಸ್ ಅಟ್ಯಾಕ್ ಆಗಿ ಅದಾಗಿ ಅದೆ ಟೈಪಾಗಿದೆ..‌‌.."ನನ್ ಫ್ರೆಂಡ್ ಬೇಡ ಅಂದ್ರು ಟೈಪ್ ಮಾಡ್ಬಿಟ್ಟ ಬೇವರ್ಸಿ..".."ಬೆಕ್ಕು ಸ್ಕ್ರೀನ್ ಕರೆದುಹಾಕಿತ್ತು. ಏನೋ ಟೈಪ್ ಮಾಡೋಕೆ ಹೋಗಿ ಏನೆನೋ ಟೈಪ್ ಅಗೋಯ್ತು"...ಬೆಳಗ್ಗೆ ಎಂದಿನ ಹಾಗೆ ಕಾಲೇಜಲ್ಲಿ ಸಿಕ್ಕಾಗ ಏನೇನು ಕಾರಣ ಹೇಳಬಹುದೆಂದು ಹುಡುಕುತ್ತಿದ್ದೆ. ಏನೂ ಸರಿ ಎನಿಸದೆ. ಮೂರ್ನಾಲ್ಕು ದಿನ  ಕಾಲೇಜು ಕಡೆ ತಲೆ ಹಾಕೋದು ಬೇಡ ಎಂದು ನಿರ್ಧರಿಸಿದೆ.

ಆಗಲೇ 28 ನಿಮಿಷಗಳಾಗಿತ್ತು. Typing...ಎಂದು ಭಿತ್ತರಗೊಂಡಂತೆ ಭಾಸವಾಯಿತು. ಕತ್ತಲಲ್ಲಿ ಟಾರ್ಚ್ ಹುಡುಕುತ್ತಿದ್ದವನಿಗೆ ಮಿಂಚು ಸಂಚರಿಸಿದ ಅನುಭವ.

ಅವಳು ರಿಪ್ಲೈಸಿದಳು

"Hmm. ಮೊದನೆಯದು...🤔"

ಬ್ಲಾಕು‌‌ ಮಾಡಿಲ್ಲ ಎನ್ನುವುದು ಮತ್ತೂ ದೃಢವಾಯಿತು.

ನಾನು ಉತ್ತರ ಸಿದ್ಧಪಡಿಸಿಕೊಂಡಿದ್ದೆ

"ನೀನು ಬೆಳಗ್ಗೆ ಅರೆ ನಿದ್ರೆಯಲ್ಲಿ ನನ್ನ ಹೆಸರು ಹೇಳ್ತಿಯಲ್ಲ ಅದೇ ಇಷ್ಟ ನಂಗೆ...ಅದೆ ನಂಗೆ ಫರ್ಸ್ಟ್ ಬೆಸ್ಟ್ ಥಿಂಗ್.

ಮತ್ತದೇ ಒಂದಷ್ಟ್ ಮಾತುಕತೆ. 

ಬೆಳಗ್ಗೆ ಮತ್ತೆ ಕರೆ ಮಾಡಿದ್ದಳು. 

ಮತ್ತೊಂದು ಗಂಟೆ ಅರೆನಿದ್ರೇಲೆ ಮಾತುಗಳು.

ಫೋನಿಟ್ಟು ವಾಟ್ಸಪ್ಪು ಬಗೆದೆ. ಡಿಪಿ ಕಂಡಂತಾಗಿ ನಿಟ್ಟುಸಿರು ಬಿಟ್ಟೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

The Stillness Between Two Trees

ಆಲ್ ವಿ ನೀಡ್ ಇಸ್ ಚೇಂಜ್

ಅಪ್ಪ ನೀನ್ಯಾಕೆ ಹೀಗೆ....?