YELLOW ALERT

ಬೆಳಗ್ಗೆನೇ "ಜವಾಬ್ದಾರಿ ತಗೊಂಡು ಕೆಲಸ ಮಾಡೋರ್ ಕಷ್ಟ ನಿಂಗೆ ಹೇಗೆ ತಾನೆ ಗೊತ್ತಾಗ್ಬೇಕು ಹೇಳು" ಅಂತ ಬೈದಿದ್ದು ನಾಲಿಗೆ ಮೇಲೆ ಹಾಗೆ ಇತ್ತು. ತತ್ ಕ್ಷಣಕ್ಕೆ ಏನೂ ಅನಿಸದಿದ್ದರೂ ಅಳುತ್ತಲೆ ಆಫಿಸಿನ ದಾರಿ ಹಿಡಿದಿದ್ದೆ . ಮೀಟಿಂಗ್ ಮುಗಿದರೂ ಮೀಟಿಂಗ್ ಹಾಲಿನಲ್ಲೆ ಕೂತು ಯೋಚನೆಗಳ ಸಾಗರದಲ್ಲಿ ಮುಳುಗೇಳುತ್ತಿದ್ದೆ. ಮನೆಯವರನ್ನು ಎದುರು ಹಾಕಿಕೊಂಡು ನಾನು ಮತ್ತು ಕಿರಣ್  ಇಂಟರ್ಕಾಸ್ಟ್ ಮದುವೆ ಮಾಡಿಕೊಂಡಿದ್ದೆವು. ಆಗ ಅದೇ ಸಹ್ಯವೆನಿಸಿತ್ತು. ಅವನ ಸಾಂಗತ್ಯವೊಂದೆ ಸಾಕೆನಿಸಿತ್ತು. ಹೊಂಡ ಶೋರೂಮಿನಲ್ಲಿ ಕೆಲಸ ಮಾಡುತ್ತಿದ್ದ ಹಾಗೆ ಕಾಲೇಜಲ್ಲಿ ನನ್ನ ಸೀನಿಯರ್ ಕೂಡ ಹೌದು. ಸರ್ಕಾರಿ ಕೆಲಸ ಎಂದು ನಮ್ಮ ಮನೆಯಲ್ಲಿ ಒಪ್ಪುತ್ತಾರೆ ಅಂತ ಅವನು. ಮುಂದೆ ಸ್ವಂತ ಶೋ ರೂಮ್ ಇಡೋ ಸಾಮರ್ಥ್ಯ ಇದೆ ಎಂದು ನಾನು. ಎರಡು ಮನೆಯವರು ಒಪ್ಪದಿದ್ದಾಗ ಕೆಲವು ಜನರ ಮುಂದಷ್ಟೆ ಮಂತ್ರ-ಮಂಗಲ್ಯದ ಪ್ರಕಾರ ಮದುವೆಯಾದೆವು. ಆಗೆಲ್ಲಾ ಕೆಲವು ಸ್ನೇಹಿತರು ಸರಳ ವಿವಾಹವಾದ ನಮ್ಮನ್ನು ಅಭಿನಂದಿಸಿದ್ದರು. ಹೋರಾಟದ ಹಾದಿ ಅಂತೆಲ್ಲಾ ಬಣ್ಣಿಸಿದ್ದರು. ಮದುವೆಯ ಹೊಸ ಬಿಸುಪಲ್ಲಿ ಎಲ್ಲವು ಚನಾಗೇ ಇತ್ತು. ಯಾವಾಗ ಕಿರಣ ಕೆಲಸ ತೊರೆದು ಮನೆಗೆ ಬಂದನೋ ಅವಗಿಂದ ಸಮಸ್ಯೆಗಳು ಒಂದೊಂದೆ ಶುರುವಾದವು. ಅದರ ಹಿಂದೆ ಕೋವಿಡ್ ಕೂಡ ಶುರುವಾಯಿತು. ಮನೆಯ ಪೂರ್ಣ ಜವಾಬ್ದಾರಿ ನನ್ನ ಮೇಲೆ ಬಿತ್ತು. ಉಳಿಸಿದ ದುಡ್ಡು ಪಾರ್ಟ್ನರ್ಶಿಪ್ಪಿನಲ್ಲಿ ಗೆಳೆಯನಿಗೆ ಕೊಟ್ಟು ಗೆಳೆಯ ಕೋವಿಡ್ ಸಮಯದಲ್ಲಿ ಜಗತ್ತು ಬಿಟ್ಟು ಹೋಗಿದ್ದ. ಮತ್ತೆ ಕೆಲಸಕ್ಕೆ ಹೋದರೂ ಗೆಳೆಯನ ನೆನಪು ಅವನನ್ನು ವಾಪಸ್ಸು ಮನೆಗೆ ಕಳುಹಿಸಿತ್ತು. ಮನೆಯ ಬಾಡಿಗೆ ಇಂದ ಹಿಡಿದು ಕರೆಂಟ್ ಬಿಲ್ಲಿವರೆಗೂ ನನ್ನ ಮೇಲೆ ಬಿದ್ದಿದೆ. ಎಂತಾ ಸಮಸ್ಯೆಗಳಾದರೂ ಎದುರಿಸಬಹುದು, ಒಬ್ಬರೇ ಎಲ್ಲವನ್ನು ಎದುರಿಸುವಾಗ ಉಂಟಾಗೋ ಒಂಟಿತನ ಸಾಕು ಸಾಕೆನಿಸುತ್ತದೆ. ನಿಧಾನವಾಗಿ ಕೋವಿಡ್  ಭೀತಿ ಕೂಡ ಕರಗುತ್ತಿದೆ. ಆದರೆ ಕಿರಣನಿಗೆ ಇನ್ನು ಕೆಲಸ ಸಿಕ್ಕಿಲ್ಲ.

ಕನಿಷ್ಟ ಪಕ್ಷ ಮಗುವಾದರೆ ಅಪ್ಪ ಅಮ್ಮನಾದರೂ ಜೊತೆ ಬರಬಹುದು ಎಂದು ಜಾತಕ ಪಕ್ಷಿಯಂತೆ ಕಾಯುತ್ತಾ ಇದ್ದೇನೆ. ಆದರೆ ಈ PCOD ಸಮಸ್ಯೆಯೊಂದು ಹೆಗಲೇರಿದೆ, ಅವಳೊಬ್ಬಳು ಡಾಕ್ಟರು ಪ್ರತಿ ತಿಂಗಳು ಹೋದಾಗಲೂ ತೂಕ ಕಡಿಮೆ ಮಾಡಿಕೊಳ್ಳಿ ಅಂತ ಹೇಳ್ತಾನೆ ಇರ್ತಾಳೆ. ಅದೇನೂ ಅಷ್ಟು ಸುಲಭನಾ?? ಹೋದವಾರ ಅನ್ನ ಬಿಟ್ಟು ಸ್ವಲ್ಪ ಬಾಯಿ ಕಟ್ಟಿದ್ದಕ್ಕೆ ಒಂದು ಕೆ.ಜಿ ಇಳಿಸಿದ್ದೆ. ನಂತರ ಮುಂದುವರೆಸಲಾಗದೆ ತಿನ್ನತೊಡಗಿದೆ. ಈಗ ಮತ್ತೆರಡು ಕೆ.ಜಿ ಹೆಚ್ಚಾಗಿದ್ದೇನೆ. ಈ ಕೆಲಸದ ಒತ್ತಡದ ಮಧ್ಯೆ ಯಾವುದನ್ನ ತಾನೆ ನಿಭಾಯಿಸಲಿ. ಮದುವೆಯಾಗುವಾಗ ವಾಸ್ತವ ಸತ್ಯಗಳ ಮುಂದೆ ಆದರ್ಶಗಳು ಬೆಟ್ಟದಂತೆ ನಿಂತಿದ್ದವು. ಈಗ ಆ ಬೆಟ್ಟ ಕೂಡ ನಿಧಾನವಾಗಿ ಕರಗುತ್ತಿದೆ.

ಬರುವ ಸಂಬಳದಲ್ಲಿ ಮನೆ ನಿಭಾಯಿಸೋದು ಕಷ್ಟ. ಕಿರಣ್ ಈಗ ಮನೆ ನೋಡಿಕೊಳ್ಳುತ್ತಾ ಇದಾನೆ. ಇತ್ತೀಚೆಗೆ ಅವನ ಕಂಡರೆ ಇನ್ನಿಲ್ಲದ ಅಸಹನೆ ಎನಿಸುತ್ತದೆ. ಗಂಡಾಗಿ ನನ್ನ ಸಾಕಬೇಕಾದವನು ಯಾವುದೇ ಅಳುಕೂ ಇಲ್ಲದೇ ನನ್ನ ಸಂಬಳದಲ್ಲಿ ಬದುಕುತ್ತಿದ್ದಾನೆ ಅಂತ ಯೋಚನೆ ಬಂದು ಆ ಯೋಚನೆಗಳನ್ನೆಲ್ಲಾ ಅವೈಡ್ ಮಾಡೋಕೆ ಪ್ರಯತ್ನಿಸುತ್ತೇನೆ. ಸಂಸಾರ ಸಹಭಾಗಿತ್ವ 50-50 ಅಂತೆಲ್ಲಾ ಏನೇ ಅಂದರೂ ಹೊರಗೆ ಹೋಗಿ ದುಡಿದು ಬರುವ ಹೆಣ್ಣಾಗಲಿ ಗಂಡಾಗಲಿ‌ ಮನೆಯಲ್ಲಿ ಇರುವವರ ಬಗ್ಗೆ ತಮ್ಮ ಅಸಹನೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಹೊರಗೆ ಹಾಕೇ ಹಾಕುತ್ತಾರೆ. ಒಂದು ತೆರನಾದ Superiority Complex ಅಂತೂ ಸುಪ್ತವಾಗಿ ಅಡಗಿ ಕೂತಿರುತ್ತದೆ.ತನಗೆ ಅಂತ ಏನನ್ನೂ ಅನಗತ್ಯ ಖರ್ಚುಗಳನ್ನು ಮಾಡದಿದ್ದರೂ ಕ್ಲಿಷ್ಟ ಸಂದರ್ಭಗಳಲ್ಲಿ ನನಗೆ ಬಹುವಾಗೆ ಕಾಡುತ್ತದೆ.  ಸ್ನೇಹಿತೆಯರು ವೆಕೆಶನ್ನಿಗೆ ಅಂತ ಗಂಡನೊಟ್ಟಿಗೆ ಹೊರದೇಶ ಸುತ್ತುವಾಗ, ಹತ್ತನೇ ವಾರ್ಷಿಕೋತ್ಸವವಾದರೂ ಈವೆಂಟ್ ಮ್ಯಾನೇಜ್ಮೆಂಟ್ ತೆಕ್ಕೆಗೆ ಕೊಟ್ಟು ಜಗಮಗಿಸೋ ಕೃತಕ ಬೆಳಕಿನ ಮಧ್ಯೆ ಪ್ರಜ್ವಲಿಸುವಾಗಹೊಸ ಮನೆ ಕಟ್ಟಿಸಿ ಹೆಂಡತಿ ಹೆಸರಿಟ್ಟು ವಾಟ್ಸಪ್ಪು ಸ್ಟೇಟಸ್ಸು ಹಾಕುವಾಗ ನನಗೂ ಅನಿಸುತ್ತದೆ. ಪ್ರೀತಿ ಎಂದರೆ ಒಂದು ಸಂಭ್ರಮ ಅಂತ. ಅದೊಂದು ಅವ್ಯಕ್ತ ವೈಭವ. ಇದೆಲ್ಲಾ ನಮ್ಮ ಮಧ್ಯೆ ಸಾದ್ಯವಿಲ್ಲವೇನೋ ಅನಿಸುತ್ತದೆ. ಈ ಐದು ವರ್ಷದಲ್ಲಿ ಪ್ರೀತಿಯ ಪಸೆ  ಒಂದಿಷ್ಟಾದರೂ ಉಳಿದಿರಬಹುದಾ ಎನಿಸಿದರೆ ಉತ್ತರ ಅಗೋಚರ. ಇಷ್ಟು ದಿನದ ಬದುಕಲ್ಲಿ ಇಂತವೆಲ್ಲಾ ನಿರೀಕ್ಷಿಸಿ ನಾನೆ ನೊಂದು ಕೊಳ್ಳುವುದು ಸಾಮಾನ್ಯವಾಗಿದೆ. ನಾಲ್ಕು ಜನ ಗಮನಿಸಿ ಅವರ ಅಚ್ಚರಿಯ ಕಣ್ಣುಗಳಲ್ಲಿ ನಮ್ಮ ಪ್ರೀತಿಯ ಬಗೆಗಿನ ಬೆರಗು ನೋಟಗಳನ್ನ ಗಮನಿಸದ ಹೊರತು ಪ್ರೀತಿ ಅಪೂರ್ಣ ಅಂತ ಅನಿಸುತ್ತದೆ.

 

"ಮೇಡಮ್....ಸುಮ ಮೇಡಮ್...ನಿಮ್ಮನ್ನ ಯಾರೋ ಹುಡುಕೊಂಡು ಬಂದಿದ್ದಾರೆ" ಅಟೆಂಡರ್ ಗೋಪಾಲ ನನ್ನ ಎಚ್ಚರಿಸಿದ. ಈ ಹೊಸ ಬ್ರಾಂಚಿಗೆ ವಾರದ ಹಿಂದಷ್ಟೆ ರಿಪೋರ್ಟ್ ಮಾಡಿಕೊಂಡಿದ್ದೆ. ಬೆಳಗ್ಗೆಯೇ ಮೀಟಿಂಗ್ ಇದ್ದುದರಿಂದ ಸ್ನಾನಕ್ಕೆ ಅಂತ ಹೋದರೆ ನೀರೆ ಇರಲಿಲ್ಲ. ಕಿರಣ್‌ಗೆ ನೆನ್ನೆಯೇ ನೀರಿನ ಟ್ಯಾಂಕರ್ ಗೆ ಹೇಳಲು ಹೇಳಿದ್ದೆ. ಅವನು ಮರೆತು ನನ್ನ ಗೋಪಾಗ್ನಿಗೆ ತುತ್ತಾಗಿದ್ದ. ತುಂಬಾ ದಿನಗಳಿಂದ ಹಿಡಿದಿಟ್ಟಿದ್ದ ಕೋಪವನ್ನೆಲ್ಲಾ ಅವನ ಮೇಲೆ ಸುರುವಿ ಬಂದಿದ್ದೆ. ಕ್ಯಾಬಿನಿಗೆ ಬಂದರೆ ಅಲ್ಯಾರು ಇರಲಿಲ್ಲ. ಮೊಬೈಲು ನೋಡಿದೆ ಮುಕ್ಕಾಲು ಗಂಟೆಯ ಕೆಳಗೆ ಕಿರಣ್ ನಂಬರಿಂದ ಮೂರು ಮಿಸ್ಡ್ ಕಾಲ್ ಗಳು ಇದ್ದವು.ಗೋಪಾಲ್ ಕಡೆ ತಿರುಗಿ “ರೀ ಗೋಪಾಲ್ ಯಾರು ಇಲ್ವಲ್ಲ ಇಲ್ಲಿ.”

“ಮೇಡಮ್. ಆಚೆ ಆವ್ರೆ. ಒಳಗೆ ಬರಲ್ವಂತೆ ಅವಾಗಿಂದ ಅಲ್ಲೆ ಅವ್ರೆ” ಫೈಲು ಹಿಡಿದು ಅವ ಹೇಳಿ ಹೊರಟು ಹೋದ.

ಆಚೆ ಬಂದರೆ ಕಿರಣ್ ಕಾಯುತ್ತಿದ್ದ. "ಏನಾದರೂ ವಿಷಯ ಇದ್ದರೆ ಮನೆಗೆ ಬಂದಾಗ ಮಾತಾಡಬಹುದಿತ್ತು. ಇವನಿಗಂತು ಮನೇಲಿ ಕೆಲಸ ಇಲ್ಲ ಸುಮ್ಮನೆ ನನ್ನ ಟೈಮ್ ವೇಸ್ಟ್ ಮಾಡೋಕೆ ಅಂತ ಬಂದಿದಾನೆ." ಎಂದು ಗೊಣಗಿಕೊಳ್ಳುತ್ತಾ ಅವನೆಡೆಗೆ ಬಂದೆ. ಅವ ನನ್ನ ನೋಡಿ ಮುಗುಳ್ನಕ್ಕ.

“ಸಂಜೆ ಮನೆಗೆ ಬರ್ತಿದ್ನಲ್ಲ. ಅಂತ ಅರ್ಜೆಂಟ್ ಏನಿತ್ತು...” ಅವನಿಗೆ ಮಾತಿಗೆ ಅವಕಾಶ ಕೊಡದೆ ಶುರುಮಾಡಿದೆ.

“ಅಲ್ಲ ಅದು...”

“ಇಲ್ಲು ಜಗಳ ಎಲ್ಲ ಶುರು ಮಾಡ್ಬೇಡಾ...”

ಇರಿ  ನಾನೆ ಶುರುಮಾಡ್ತಿರೋದು ಲಾಜಿಕ್ಕೆಲ್ಲಾ ಕೇಳ್ಬೇಡಿ.

“ಕೇಳುಸ್ಕೊಳೆ ಸುಬ್ಬಿ. ಜಗಳ ಮಾಡ್ಕೊಂಡು ನೀನೇನೋ ಬಂದ್ಬಿಟ್ಟೆ. ಆದರೆ ಟಿ.ವಿ.ಯಲ್ಲಿ ನ್ಯೂಸ್ ಪೇಪರಲ್ಲಿ ಇವತ್ತು ಮತ್ತೆ ನಾಳೆ ತುಮಕೂರಿನ ಎಲ್ಲಾ ಕಡೆ ಧಾರಾಕಾರ ಮಳೆ ಅಂತ ಓದಿದೆ. ಬರೋ ವೇಗದಲ್ಲಿ ಕೊಡೆ ಮತ್ತೆ ರೇನ್ ಕೋಟು ಮನೇಲಿ ಮರ್ತು ಬಂದಿದ್ಯಾ. ಅದಕ್ಕೆ ಕೊಡೋಕೆ ಬಂದೆ. ಬಂದು ಕಾಲ್ ಮಾಡಿದೆ. ಬ್ಯುಸಿ ಅಂತ ನಿಮ್ಮ ಅಟೆಂಡರ್ ಹತ್ರ ಹೇಳಿದೆ”

ನನ್ನ ಕೋಪವೆಲ್ಲಾ ಜರ್ರನೆ ಇಳಿದುಹೋಯಿತು. ಕಾಯಿಸಿದ್ದಕ್ಕೆ ಬೇಜಾರಾಯಿತು.”ಒಳಗೆ ಬರೋದು ಅಲ್ವಾ ಕಿರಣ್ ಸುಮ್ನೆ ಕಾಯ್ತಾ ಇರೋ ಬದಲು”

“ಬರೋಣ ಅನ್ಕೊಂಡೆ.ಆದರೆ....ಅಲ್ಲಿ ಯಾರಾದರೂ ಏನು ಕೆಲಸ ಮಾಡ್ತಿದಿರಾ ಅಂತ ಕೇಳಿ ನಿನಗೆ ಮುಜುಗರ ಅಗಬಹುದು ಅಂತ ಸುಮ್ಮನಾದೆ. ಹೊಸ ಆಫೀಸು ಬೇರೆ ಅಲ್ವಾ. ಮತ್ತೊಮ್ಮೆ ಯಾವಾಗಾದ್ರು ಬರ್ತಿನಿ”

ನನಗೆ ಮಾತೆ ಹೊರಡಲಿಲ್ಲ.ಇನ್ನಿಲ್ಲದ ಪಾಪ ಪ್ರಜ್ಞೆ ಕಾಡಿತು” ಯಾಕೋ ಹೀಗ್ ಮಾಡ್ತಿಯಾ ಅಂದೆ” ಅವನಿಗೆ ಏನೊಂದು ತಿಳಿಯದೆ ಮುಗುಳ್ನಕ್ಕ.

 

“ಅಂದಹಾಗೆ ಫ್ರೆಂಡ್ ಇನ್ಸುರೆನ್ಸ್ ಕೂಡ ಕೊರ್ಟಿನಲ್ಲಿ ಸೆಟಲ್ ಆಗಿದ್ಯಾಂತೆ ಅವನಣ್ಣ ಕಾಲ್ ಮಾಡಿದ್ದ...” ಅವನ ಕಣ್ಣಲ್ಲಿ ಹೊಳಪಿತ್ತು."ಇನ್ಮೇಲೆ ನಾನು ಕೆಲಸ ಮಾಡೋಕೆ ಶುರು ಮಾಡಿದ್ರೆ ಇಬ್ಬರೂ ಇನ್ನೂ ಅರಾಮಾಗಿ ಮನೆ ನಿಭಾಯಿಸಬಹುದು"

ಅಷ್ಟೊತ್ತಿಗೆ ಮಳೆ ಶುರುವಾಯಿತು.ಬ್ಯಾಗಿಂದ ಕೊಡೆ ತೆಗೆದು ಬಿಚ್ಚಲು ಅನುವಾಗುತ್ತಿದ್ದ. ಅದ ಲೆಕ್ಕಿಸದೆ ಸುರಿಯುತ್ತಿದ್ದ ಮಳೆಗೆ ಮುಖವೊಡ್ಡಿ ಮುನ್ನೆಡೆದೆ. ಕಣ್ಣೀರಾ ಹನಿಗಳು ಮಳೆಯೊಂದಿಗೆ ಬೆರೆತು ಬ್ಯಾಂಕಿನ ಕಾಂಪೌಂಡ್ ದಾಟಿ ಬಯಲು ಸೇರಿದವು.

“ನಿಂತ್ಕೊಳೆ ಸುಬ್ಬಿ” ಎನ್ನುತ್ತಾ ಕಿರಣ್ ಹಿಂದಿನಿಂದ ಓಡಿಬಂದು ಕೊಡೆ ಹಿಡಿದ. ಇಬ್ಬರೂ ಕೊಡೆಯಡಿ ಬಂಧಿಯಾದೆವು. ಮಳೆಯ ಅಬ್ಬರಕ್ಕೆ ಎದ್ದ ಧೂಳಿನ ಮಧ್ಯೆ ಕಾಂಪೌಂಡಿನ ಒಳಗೆ ಮಳೆಯಿಂದ ರಕ್ಷಣೆಗೆ ಮರದ ಕೆಳಗೆ ಹಾಗೂ ಬ್ಯಾಂಕಿನ ಬಾಗಿಲ ಛಾವಣಿ ಕೆಳಗೆ ನಿಂತಿದ್ದ ಜನರೆಲ್ಲಾ ನನಗೆ ಕಾಣದಾದರು. ಅವ ಮುಗುಳುನಗುತ್ತಾ ನನ್ನನ್ನೆ ದಿಟ್ಟಿಸುತ್ತಿದ್ದ. ಅವನ ಪ್ರೀತಿ ಕಣ್ಣ ಕನ್ನಡಿಯಲ್ಲಿ ನನ್ನನೆ ನಾ ಕಂಡೆ. ನನಗದಷ್ಟೆ ಸಾಕಿತ್ತು. ಅವನನ್ನ ತಬ್ಬಿದೆ. ಸಂಕೋಚದಿಂದ ತುಸು ಕೊಸರಾಡಿದ. ನಾ ಬಿಡಲಿಲ್ಲ. ಅವನೆದೆಗೆ ನನ್ನ ಕಿವಿ ಅಂಟಿತ್ತು. ಖಾಲಿ ಜೇಬಲ್ಲಿ ಅವನ ಎದೆ ಬಡಿತ ಸ್ಪಷ್ಟವಾಗಿ ಕೇಳಿಸುತ್ತಿತ್ತು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

The Stillness Between Two Trees

ಆಲ್ ವಿ ನೀಡ್ ಇಸ್ ಚೇಂಜ್

ಅಪ್ಪ ನೀನ್ಯಾಕೆ ಹೀಗೆ....?