Departures (2008)
ದೃಶ್ಯ 1
ಕಲ್ಲಿನ ಪತ್ರ
ಅವಳ ಕೈಹಿಡಿದು ಒಂದು ಬೆಣಚುಕಲ್ಲು ಕೊಡುತ್ತಾ...
“ಪ್ರಾಚೀನ ಕಾಲದಲ್ಲಿ ಅಂದ್ರೆ ಸಂವಹನ ಅಷ್ಟು ಪಕ್ವವಾಗದ ಸಮಯದಲ್ಲಿ ಜನರು ತಮ್ಮ
ಭಾವನೆಗಳನ್ನು ಪ್ರೀತಿ ಪಾತ್ರರಿಗೆ ಹೇಳಲು ನದಿ ದಡದಲ್ಲಿ ದೊರೆಯುವ ಬೆಣಚುಗಲ್ಲುಗಳನ್ನು ಬೇರೆಯವರಿಗೆ ಕೊಡುತ್ತಿದ್ದರು” ಅವನು ಕೊಬಯಾಶಿ.
ಹೆಂಡತಿ ಮಿಕಾ ಪ್ರಶ್ನಾರ್ಥಕವಾಗಿ ಅವನೆಡೆ ನೋಡುತ್ತಾಳೆ.
“ಅಂದ್ರೆ ಕಲ್ಲಿನ ಮೇಲ್ಪದರದ ಆಧಾರದ ಮೇಲೆ ಒಬ್ಬರ ಮನಸು ಅರ್ಥ ಆಗ್ತಾ ಇತ್ತು.
ನುಣುಪು ಬೆಣಚುಕಲ್ಲುಗಳು ಶಾಂತ ಮನಃಸ್ಥಿತಿಯ ಪ್ರತೀಕ. ಒರಟಾಗಿದ್ದರೆ ಮತ್ತೊಬ್ಬರೆಡೆಗಿನ ಅವರ
ಕಾಳಜಿಯನ್ನ ಹೇಳ್ತಾ ಇತ್ತು.”
ಕಲ್ಲು ಕೈಲಿಡಿದು ಎದೆಗವುಚಿ ಅವಳು ನಿಲ್ಲುತ್ತಾಳೆ.... ಮೌನ....
“THANK YOU” ಮಿಕಾ ಹೇಳುತ್ತಾಳೆ.
“ನಿಂಗೆ ಏನ್ ಅನಿಸ್ತಾ ಇದೆ ನಾ ಕೊಟ್ಟ ಕಲ್ಲಿನ ಬಗ್ಗೆ”
“ಅದು ಸಿಕ್ರೆಟ್” ಅವಳು ನಗುತ್ತಾಳೆ.”ತುಂಬಾ ಒಳ್ಳೆ ಕಥೆ. ಯಾರು ಪರಿಚಯ ಮಾಡಿ
ಕೊಟ್ಟದ್ದು ನಿನಗೆ”
“ಅದೇ ಹಳೆ ಮುದುಕ” ಅವನು ಮೌನಕ್ಕೆ ಜಾರುತ್ತಾನೆ.
“ಅಂದ್ರೆ ಆ ನಿನ್ನ ಬಳಿ ಇರೋ ದೊಡ್ಡ ಒರಟು ಕಲ್ಲು.....?”
“ ಹೌದು. ನಮ್ಮ ಅಪ್ಪ ಕೊಟ್ಟಿದ್ದು. ಪ್ರತೀ ವರ್ಷ ಇಬ್ಬರೂ ಒಬ್ಬರಿಗೊಬ್ಬರು
ಕಲ್ಲಿನ ಪತ್ರ ಕೊಡಬೇಕು ಅಂತ ಮಾತಾಡಿ ನನ್ನ ಬಿಟ್ಟು ಹೋದ. ಅಂತ ಮನುಷ್ಯ ಅವನು”
ದೃಶ್ಯ 2
ಚಿಕ್ಕವಯಸ್ಸಿನಲ್ಲೆ ತೊರೆದು ಹೋದ ತಂದೆಯ ಸಾವಿನ ಸುದ್ದಿಯ ಟೆಲೆಗ್ರಾಮ್ ಬಂದಿದೆ.
ಮಗ, ಸಿಟ್ಟು ಅಸಹನೆ ಗೊಂದಲದಲ್ಲಿದ್ದಾನೆ. ಹೋಗಲೇ ಬಾರದು ಅಂತ ತೀರ್ಮಾನ ಮಾಡಿದ್ದಾನೆ.
ಸಹೋದ್ಯೋಗಿ ಶುರುಮಾಡುತ್ತಾಳೆ.
“ನಿನ್ನ ಕೈಮುಗಿದು ಬೇಡ್ಕೋತಿನಿ. ದಯವಿಟ್ಟು ಹೋಗಿ ಬಾ..”.
ಮತ್ತದೆ ಮೌನ
ಮತ್ತೆ ಅವಳೆ “ ನನ್ನ ಮಗನಿಗೆ ಆರು ವರ್ಷ. ನಾನವನನ್ನು ತೊರೆದು ನಾನು
ಪ್ರೀತಿಸಿದವನನ್ನು ನಂಬಿ ಬಂದಾಗ. ಅಮ್ಮ ಅಮ್ಮ ಅಂತ ಅವ ಗೋಗರೆಯುತ್ತಿದ್ದ. ಅವನ ಪುಟ್ಟ ಕೈಗಳನ್ನು
ಬಿಸುಟು ನಾ ಬಂದಿದ್ದೆ.”
“ ಮಗನನ್ನ ಮತ್ತೆ....”
“ ಅವನ್ನ ಮತ್ತೆ ನೋಡ್ಬೆಕು ಅನಿಸುತ್ತಾ ಇತ್ತು. ಆದರೆ ನನ್ನಿಂದ
ಸಾಧ್ಯವಿರಲಿಲ್ಲ....”
“ ಯಾಕೆ!...ನೋಡ್ಬೆಕು ಅನಿಸಿದ್ರೆ ಹೋಗಿ ನೋಡಬಹುದಿತ್ತಲ್ಲ”
ಅವಳು ತೆಲೆ ಅಲ್ಲಾಡಿಸುತ್ತಾ ಕೂರುತ್ತಾಳೆ. ವಿಷಣ್ಣನಾಗುತ್ತಾಳೆ.
ಅವನು “ ಮಕ್ಕಳನ್ನು ತೊರೆದು ಬರೋ ಪೋಷಕರೆಲ್ಲಾರು ಹೀಗೆನಾ....”
“ನೀವೆಲ್ಲಾ ಹೊಣೆಗೇಡಿಗಳು..” ಅರಚುತ್ತಾನೆ.
ಮತ್ತದೆ ಮೌನ
ಅವಳೆ ಬಂದು “ ದಯವಿಟ್ಟು ಹೋಗು. ಅಂತಿಮ ದರ್ಶನ ಮಿಸ್ ಮಾಡ್ಕೋಬೇಡ”
ಸಿಟ್ಟಿಗೆದ್ದು ಏನೊಂದು ಮಾತಾಡದೆ ಅವ
ಆಚೆ ಹೊರಡುತ್ತಾನೆ.
**
ಸಿನಿಮಾಗಳೆಂದರೆ ಒಳ್ಳೆ ಫೈಟ್,
ಹಾಡುಗಳು, ಮಧ್ಯೆ ಮಧ್ಯೆ ಕಾಮಿಡಿ ಸೀನುಗಳು ಇಷ್ಟು ವ್ಯಾಕರಣಗಳಷ್ಟೆ ಸಿನಿಮಾ ಅಲ್ಲ ಅಂತ ಬೇರೆ ದೇಶದ
ಸಿನಿಮಾಗಳನ್ನು ನೋಡಲು ಶುರುಮಾಡಿದಾಗ ಅರ್ಥ ಮಾಡಿಕೊಂಡಿದ್ದೆ. ಇರಾನ್ ಜಪಾನ್ ಚೈನೀಸ್ ಕೊರಿಯನ್ ಸಿನಿಮಾಗಳಲ್ಲಿ ಬರುವ
ದೃಶ್ಯಾಭಿವ್ಯಕ್ತಿಯು ನಮ್ಮ ಕಡೆಯ ಜೀವನ ಶೈಲಿಗೆ ಬಹುಪಾಲು ಹೊಂದುತ್ತವೆ.ಆ ದೇಶಗಳು ನಮ್ಮ ಅಕ್ಕಪಕ್ಕವೇ
ಇರೋದು ಒಂದು ಕಾರಣ ಇರಬಹುದು. ಆಫ್ರಿಕನ್ ಹಾಗು ಯುರೋಪಿಯನ್ ಸಿನಿಮಾಗಳ ಬಗ್ಗೆ ಈ ಮಾತು ಹೇಳೋಕೆ ಆಗಲ್ಲ.
ತುಮಕೂರು ಗ್ರಾಮಂತರದ ಓಬಳಾಪುರದ ಇಟ್ಟಿಗೆ ಫ್ಯಾಕ್ಟರಿಯಲ್ಲಿ MSME ಲೈಸೆನ್ಸ್ ಇಲ್ಲದೇ ಕೆಲಸ ಮಾಡೋ ಆಗಿಲ್ಲ ಎಂದು ಬಾಗಿಲು ಮುಚ್ಚಿದಾಗ ಉಂಟಾಗೋ
ತಳಮಳಗಳು, ಜಪಾನ್ ದೇಶದ ಕಲಾತಂಡ ಯಾವುದೋ ಕಾರಣಕ್ಕೆ ಮುಚ್ಚಬೇಕಾದಾಗ ಕಲಾವಿದರಲ್ಲಿ ಉದ್ಭವಿಸೋ ಚಡಪಡಿಕೆಗೂ
ಸಾಮ್ಯತೆ ಇದೆ. ಆದು ನಾಳೆಯ ಹಸಿವನ್ನೂ, ಬದುಕಿನ ಅನಿಶ್ಚಿತತೆಗೆ ಎದೆ ಕೊಡಬೇಕಾದಾಗ ಉಂಟಾಗೋ
ಆತಂಕಗಳು. ನನಗೆ ಎರಡೂ ಪಕ್ಕದ ಮನೆಯಲ್ಲಿ ಆದವೇನೋ ಅನ್ನೋವಷ್ಟು ಹತ್ತಿರ ಅನಿಸುತ್ತದೆ.
ಸಾವು,ಹಸಿವು ಹಾಗೂ ಅನಿಶ್ಚಿತತೆ
ಇವು ಬದುಕನ್ನು ವಿಶಿಷ್ಟಗೊಳಿಸಿರುವ ಅಂಶಗಳು. ಜಗತ್ತಿನಲ್ಲಿ ಹಸಿವು ಇಲ್ಲದೇ ಹೋಗಿದ್ದರೆ ಇಷ್ಟು
ಸುಂದರವಾಗಿರಲು ಸಾಧ್ಯವೇ ಇಲ್ಲ ಅಂತ ಎಲ್ಲೋ ಓದಿದ ನೆನಪು. ಏನೇ ಇರಲಿ ಇಷ್ಟೆಲ್ಲಾ ಪೀಠಿಕೆ
ಹಾಕಿದ್ದು ನಾನು ಸುಮಾರು ಹತ್ತು ವರ್ಷಗಳ ಹಿಂದೆ ನೋಡಿದ್ದ ಒಂದು ಸಿನಿಮಾ ಬಗ್ಗೆ. ಮೂವಿ ಹೆಸರು Departures (2008) ಜಪಾನ್ ದೇಶದ ಸಿನೆಮಾ. ಒಂದು ಕಾಲದಲ್ಲಿ ಮೂವಿ ಚನಾಗಿದೆ ಅಂತ ಗೊತ್ತಾದರೆ ಸಾಕು SUBTITLE ಇರಲಿ ಬಿಡಲಿ ನೋಡೆ ಬಿಡುವ ಅಂತ ನುಗ್ಗಿ ನನಗೆ ಒಂದಷ್ಟು
ಅಮೂಲ್ಯ ರತ್ನಗಳ ಸಿಕ್ಕವು. ಅವುಗಳಲ್ಲಿ ಇದು ಒಂದು.
ಒಬ್ಬರ ಮರಣಾನಂತರ ಬೇರೆಯವರಿಗೆ ಒಂದು ನಿರ್ಜೀವ ದೇಹವಾಗಿ ಕಾಣುವುದು
ಪ್ರೀತಿಪಾತ್ರರಿಗೆ ಮಾತ್ರ ಜೀವನಪೂರ್ತಿ ಪ್ರೀತಿ ನಂಬಿಕೆ ವಿಶ್ವಾಸಗಳ ಸಾಕರಮೂರ್ತಿಯಂತೆ ತೋರುತ್ತದೆ. ಜೊತೆ ಇರುವವರೊಂದಿಗೆ
ಜೀವನ ಸವೆಸಿ ಬಿಟ್ಟು ಹೋದಾಗ, ಅಂತಹ ಸಂದರ್ಭದಲ್ಲಿ ಆ ದೇಹವನ್ನು ಪ್ರೀತಿಯಿಂದಲೂ ಗೌರವದಿಂದಲೂ
ಕಾಣಬೇಕು ಹಾಗೆ ಕಳುಹಿಸಿಕೊಡಬೇಕು ಅನ್ನೋದು ಒಟ್ಟಾರೆ ಸಿನಿಮಾದ ಆಶಯ.
ಶವ ಸಂಸ್ಕಾರಕ್ಕೂ ಮುನ್ನ ದೇಹಾಲಂಕಾರ ಮಾಡಿಸಿ ಕಳುಹಿಸಿಕೊಡೋದು ಜಪಾನ್ ದೇಶದಲ್ಲಿ
ಪ್ರಚಲಿತದಲ್ಲಿರುವ ಪದ್ದತಿ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಗೂಗಲ್ಲಿನಲ್ಲಿ ಸಿಗಬಹುದು. ಜಪಾನಿನ
ಸಾಂಪ್ರದಾಯಿಕ ಪದ್ದತಿ ಸತ್ತವರ ಪ್ರೀತಿ ಪಾತ್ರರಲ್ಲಿ ಒಂದು ತೆರನಾದ ಸಮಾಧಾನ ತರುವ ಸಂಗತಿ
ಅನ್ನೋದು ಗಮನಾರ್ಹ. ಸಿನಿಮಾದಲ್ಲಿ ಮೇಲೆ ಉಲ್ಲೇಖಿಸಿರುವ ದೃಶ್ಯಗಳಂತೆ ಮೌನ ಹೆಚ್ಚು-ಮಾತುಗಳು
ಕಡಿಮೆ. ಸಂಬಂಧಗಳು ಮೌನದಲ್ಲೂ ಅರ್ಥ ಆಗುವಷ್ಟು ಪಕ್ವವಾಗಬೇಕು.(Relationshipಗಳಲ್ಲಿ Communication is the Key ಅಂತಾರೆ. ಮೌನವೂ ಕೂಡ ಒಂದು ತೆರನದ ಕಮ್ಯೂನಿಕೇಶನ್ನೆ) ಮಾತುಗಳು ಕಡಿಮೆ ಇರೋದ್ರಿಂದ
ಸಿನಿಮಾ ವ್ಯಾಕರಣ ಬದ್ಧವಾಗಿ ಇಲ್ಲದೇ ಇರೋ ಕಾರಣಕ್ಕೆ ಕೆಲವು ಕಡೆ ಬೋರಿಂಗ್ ಅನಿಸಬಹುದು. ತಂದೆ
ತನ್ನ ಮರಣ ನಂತರ ಮಗನಿಗೆ ಸಿಗೋ ಅಂಶ ಹೃದಯವನ್ನ ಖಂಡಿತಾ ಭಾರವಾಗಿಸದೇ ಇರದು.
ಮಾನವ ಸಂಬಂಧಗಳು, ಸಾವು, ಬದುಕಿನ
ಅನಿಶ್ಚಿತತೆ, ಸಂಬಂಧಗಳಲ್ಲಿ ಬೇಕಾದ ಕ್ಷಮಾಗುಣ ಇವೆಷ್ಟು ಮುಖ್ಯ ಅನ್ನೋದನ್ನ ಅಷ್ಟೆ ಸೂಕ್ಷ್ಮವಾಗಿ
ಸಿನಿಮಾದಲ್ಲಿ ತೋರ್ಸಿದಾರೆ. ಇದು ನೋಡಿದ ಮೇಲೆ ನಂಗೆ ಗೊತ್ತಾಗಿದ್ದು ಇದಕ್ಕೆ Academy Best Foreign
Language Film (2009) Award ಕೂಡ ಸಿಕ್ಕಿದೆ ಅಂತ.
ಸೀಟಿನ ತುದಿಯಲ್ಲಿ ಕೂತು ನೋಡೋ ಮೂವಿ ಇದಲ್ಲ. ಮೌನವೇ ಪ್ರಧಾನವಾದ ಮೌನದಲ್ಲೆ ಆಸ್ವಾದಿಸೋ ಮೂವಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ