ಕಿವುಡು ಕಾಂಚಾಣ

 ಲಭ್ಯವಿದ್ದ ಮಾಹಿತಿಗಳು ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಪೂರಕವಾಗಿರಲಿಲ್ಲ. ನಿರ್ಧಾರದ ನಿರೀಕ್ಷೆಯಲ್ಲಿದ್ದವರು ಪದೇ ಪದೇ ಕರೆಮಾಡುತ್ತಿದ್ದರು. ವರ್ಷಗಳ ಕೆಳಗೆ ಕೆಲಸಕ್ಕೆ ಸೇರುವಾಗ Decision Making ಬಗ್ಗೆ ಪುಂಖಾನುಪುಂಖವಾಗಿ ಇಂಟರ್ವ್ಯೂನಲ್ಲಿ ಕೊಚ್ಚಿಕೊಂಡಿದ್ದು ಪೇಲವವೆನಿಸಿತು. ಈ ಇಳಿಸಂಜೆಯಲ್ಲಿ ಬಿಸಿಲುಕೋಲು ಕೀಬೋರ್ಡು ಹಾಗು ಅದಕ್ಕಂಟಿದ  ಕೈಗಳ ಮೇಲೂ ಹಾದುಹೋಗಬಾರದೇಕೆ ಎಂದುಕೊಳ್ಳುತ್ತಿದ್ದೆ. ಮೂರ್ನಾಲ್ಕು ಸಾರಿ ಗ್ರಾಮರ್ರು ನೋಡಿ ಒಂದು ಮೇಲು ಕಳುಹಿಸಿ ಹೊರಡಲು ಸಿದ್ಧನಾದೆ. ನಾ ಬರೆದದ್ದು ಓದುವರರ ತೆಕ್ಕೆಗೆ ಹಾಕುವವರೆಗೂ ನಾನು ಚಿಂತಿತ. ಆಮೇಲೆ ಸರಾಗ. ಬರೆದದ್ದನ್ನ ಜೊತೇಲಿ ಕಾಪಿಟ್ಟುಕೊಳ್ಳೋದಾದರೂ ಎಂತಕ್ಕೆ, ಹಾಗೆ ಅತೀ  ಪೇರೆಂಟಿಂಗು ಮೂಡೋದು ಕೂಡ ಈ ಕಾಲದಲ್ಲಿ ಒಳ್ಳೆದಲ್ಲ ಅಲ್ವ.

 

 

 ಬರೆಯೋದರ ಬಗ್ಗೆ ಹೇಳ್ಬೇಕು. ಮೊದಲು ಏನಾದರೂ ಬರೆದರೆ ಹಂಚಿಕೊಳ್ಳುವಷ್ಟು ಧೈರ್ಯವಂತೂ ಇರಲಿಲ್ಲ. "ಇಷ್ಟು ಬಾಲಿಶವಾಗಿದ್ಯಲ್ಲ ಗುರು" ಅನಿಸಿ ಡಿಲೀಟು ಮಾಡಿ ಬಿಸಾಕಿದ್ದಿದೆ. ಹೇಗೋ ತೆವಳುತ್ತಾ ಸಾಗುತ್ತಾ ಇಲ್ಲಿಯವರೆಗೂ ಬಂದಿದ್ದೇನೆ. ಆಗಾಗ್ಗೆ ಏನಾದರೂ ಬರೀಬೇಕು ಅಂತ ಅಂದು ಕೊಳ್ತಾ ಇರ್ತಿನಿ. ಅವತ್ತು ಸಂಜೆ ನಾಲ್ಕು ಮುಕ್ಕಾಲು ಗಂಟೆಗೆ ಬ್ರಾಂಚಿನ ಗ್ರಿಲ್ ಗೇಟು ಬಡಿಯುತ್ತಾ ಮಗನಿಗೆ ಆಸ್ಪತ್ರೆಗೆ ದುಡ್ಡು ಬೇಕು ದಯವಿಟ್ಟು  ಕೊಡಿ ಎಂದು ಯಾವಾಗಲೋ ತಣ್ಣಗಾಗಿದ್ದ ತುಂಡು ಬೀಡಿ ಬಾಯಲ್ಲಿಟ್ಟುಕೊಂಡು ಗೋಗರೆಯುತ್ತಿದ್ದವನ ಕಡೆಯಿಂದ ಬರುತ್ತಿದ್ದ ಅಗ್ಗದ ಸಾರಾಯಿ ವಾಸನೆ ಬಗ್ಗೆ ಬರಿಬೇಕು ಎಂದು ಅನಿಸುತ್ತದೆ. ಎಫ್.ಡಿ. ನಾಮಿನೇಷನ್ನಿನ ವೇಳೆಯಲ್ಲಿ ಇದ್ದ ಮೂರು ಮಧ್ಯವಯಸ್ಕ ಮಕ್ಕಳ ಮುಂದೆ ಕೊನೆ ಮಗನ ಹೆಸರು ಬರೆಯಿರಿ ಎಂದ ವೃದ್ಧ ಪೋಷಕರ ಮುಂದೆಯೇ ಬನಿಯನ್ನು ಹರಿದುಹೋಗುವ ಹಾಗೆ ಬ್ರಾಂಚಿನೊಳಗೇ ಬಡಿದಾಡಿಕೊಂಡ ಮಕ್ಕಳ ಹೊಣೆಗೇಡಿತನದ ಬಗ್ಗೆ ಎರಡು ಲೈನಾದರೂ ಗೀಚಬೇಕು. ಬೇರೆಯವರ ಬಗ್ಗೆ ಯಾಕೆ. ಹೊಸದಾಗಿ ಸೇರಿದ್ದ ಫ್ರೆಶರ್ಸ್ ಉದ್ಧೇಶಿಸಿ ಮಾತಾಡುವಾಗ “ನಿಮ್ಮ ಗ್ರಾಹಕರು ಗ್ರಾಹಕರಷ್ಟೆ ನಿಮ್ಮ ಸಹೋದ್ಯೋಗಿಗಳು ಸಹೋದೋಗಿಗಳಷ್ಟೆ, ಏನೇ ಆದರು ಅವರು ನಿಮ್ಮ ಸ್ನೇಹಿತರಲ್ಲ ಸಂಬಂಧಿಗಳಲ್ಲ. ಕ್ಲೋಸ್ ಆಗಲೇಬೇಡಿ.‌‌...ಹತೋಟಿಯಲ್ಲಿರಿ...ವೃತ್ತಿಪರತೆ...ಶಿಸ್ತು....” ಎನ್ನುತ್ತಿದ್ದ ನಾನು ಹಳೆಯ ಸಹೋದ್ಯೋಗಿಯೊಬ್ಬರ ವೈಯಕ್ತಿಕ ಜೀವನದಲ್ಲಾದ ಪ್ರಗತಿಗೆ 500 ಕಿ.ಮೀ.ಗೂ ಮಿಕ್ಕಿ ಅವರಿದ್ದಲ್ಲಿಗೆ ಹೋಗಿ ಮನತುಂಬಿ ವಿಶ್ಶು ಮಾಡಿ ಬಂದಿದ್ದರ ಬಗ್ಗೆ ಬರೀಬೇಕು ಅಂತ ಕೂಡ ಅನಿಸುತ್ತದೆ.

 

ಹತ್ತೊಂಭತ್ತು ವರ್ಷಕ್ಕೆ ಎಕ್ಸಾಮ್ ಬರೆದು ಕೆಲಸಕ್ಕೆ ಸೇರಿದಾಗ ನನಗೆ ಇಪ್ಪತ್ತು ವರ್ಷ. ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಕೂತಿದ್ದ ನನ್ನನ್ನು ಕೌಂಟರ್ನಲ್ಲಿ ಯಾರಿಲ್ವೆನಪ್ಪಎಂದು ಕೇಳುತ್ತಿದ್ದರು. ಕೆಲವರು ಮತ್ತು  ಕೆಲವು ಘಟನೆಗಳು ವಿವಿಧ ಕಾರಣಕ್ಕೆ ಸ್ಮೃತಿಪಟಲದಲ್ಲಿ ಅಚ್ಚೊತ್ತಿದ ಹಾಗೆ ಉಳಿದುಕೊಂಡಿವೆ. ಯಾವುದೇ ಕಂಪ್ಲೆಂಟುಗಳಿಲ್ಲದೆ ಬದುಕಬೇಕು ಹಾಗೆ ಪೂರ್ವನಿರ್ಧರಿತವಾದ ಯೋಚನೆಗಳಿಲ್ಲದೆ ಭವಿಸೋ ಎಲ್ಲ ಅನುಭವಗಳಿಗೆ ಒಡ್ಡಿಕೊಳ್ಳಬೇಕು ಅಂತ ಸದಾಕಾಲ ಪ್ರಯತ್ನಮಾಡುತ್ತಾ ಇರ್ತಿನಿ.

 * * *

ಬುಧವಾರದ ಒಂದು ಇಳಿಸಂಜೆ ಪ್ರಾದೇಶಿಕ ಕಚೇರಿಯಿಂದ ಕರೆಮಾಡಿ ಹತ್ತಿರದ ಒಂದು ಬ್ರಾಂಚಿನಲ್ಲಿ ಗೊಲ್ಡು ಲೋನು ಸಾಲದ ಖಾತೆಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದೂ, ಸ್ಯಾಂಪಲ್ ಬೇಸಿಸಿನಲ್ಲಿ ಒಂದಷ್ಟು ಗೋಲ್ಡು ಪರಿಶೀಲಿಸಿ ನಾಳೆಯೇ ವರದಿ ಒಪ್ಪಿಸಬೇಕೆಂದು’ ಹೇಳಿದ್ದರು. ಕೆಲಸ ತುರ್ತಾಗಿದ್ದರಿಂದ ನಾ ಹೋಗಲೇಬೇಕಿತ್ತು. ನಾಳೆ ಬರಲು ಹೇಳಿದ್ದ ಗ್ರಾಹಕರಿಗೆಲ್ಲ ಕರೆಮಾಡಿ ಮಧ್ಯಾಹ್ನದ ಮೇಲೆ ಬನ್ನಿರೆಂದು ವಿನಂತಿಸಿಕೊಂಡೆ. ಅಲ್ಲಿ ಹೊಸದಾಗಿ ಬಂದಿದ್ದ ಮ್ಯಾನೇಜರು ಸಾಂಗವಾಗಿ ಪ್ರತಿಕ್ರಿಯಿಸುತ್ತಿದ್ದರಿಂದ ಲೋನುಗಳ ಸಂಖ್ಯೆ ಜಾಸ್ತಿಯಾಗಿತ್ತು. ಯಾವುದೇ ತೊಂದರೆ ಇರಲಿಲ್ಲ. ವಹಿಸಿದ್ದ ಕೆಲಸ ಮುಗಿಸಿ ಬ್ಯಾಂಕಿಗೆ ವಾಪಸ್ಸು ಬಂದಾಗ ಮ್ಯಾನೇಜರ್ ಕ್ಯಾಬಿನ್ನಿನ ತುಂಬಾ ಜನ ನೆರೆದಿದ್ದರು. ಯಾರೋ ಮಹಿಳೆಯೊಬ್ಬರು ಕೂಗಾಡುತ್ತಿರುವುದು ಕಾಣಿಸಿತು. ಮ್ಯಾನೇಜರು ಅರೆಬರೆ ಕನ್ನಡದಲ್ಲಿ ಏನನ್ನೋ ಹೇಳೋಕೆ ಪ್ರಯತ್ನಿಸಿ ಸೋಲುತ್ತಿರುವುದನ್ನು ಗಮನಿಸಿದೆ.

 

ನಾ ಹೋಗಿ ಮ್ಯಾಡಮ್ ಏನಾಯ್ತು ಅಂತ ಹೇಳಿ. ಯಾಕೆ ಕೊಗಾಡ್ತಾ ಇದ್ದಿರಾ' ಎಂದು ನಿಧಾನಕ್ಕೆ ಕೇಳಿದೆ. ನನ್ನ ಮೇಲೂ ರೇಗಾಡುವುದಕ್ಕೆ ಶುರು ಮಾಡಿದರು. ನೋಡಿ, ನೀವು ಜೋರಾಗಿ ಕೂಗಾಡ್ತಾ ಇದ್ದಿರಾ ಎಂದ ಮಾತ್ರಕ್ಕೆ ನೀವು ಸರಿ ಅಂತ ಅಲ್ಲ. ದಯವಿಟ್ಟು ಏನಾಗ್ಬೇಕು ಅಂತ ಹೇಳಿ. ನಮ್ ಕಡೆಯಿಂದ ತಪ್ಪಾಗಿ, ತಿದ್ದಿಕೊಳ್ಳುವುದೇನಾದರೂ ಇದ್ದರೇ ಹೇಳಿ ನಾವ್ ರೆಡಿ ಇದ್ದೆವೆ.' ಒಂದು ಕ್ಷಣ ಮೌನ ಆವರಿಸಿತು. ಪಕ್ಕದಲ್ಲಿದ್ದ ಕೆಲವು ಗ್ರಾಹಕರು ಅವರಿಗೆ ಬುದ್ಧಿ ಹೇಳಿದರು. ಸ್ವಲ್ಪ ತಣ್ಣಗಾದಂತಾದ ಅವರು ಶುರು ಮಾಡಿದ್ರು  ನಾನು ಬೆಂಗಳೂರಿಂದ ಬಂದಿದ್ದೇನೆ. ಸಾಫ್ಟ್ವೇರ್ ಎಂಜಿನಿಯರ್. ನನ್ನ ತಮ್ಮನಿಗೆ ತುಂಬಾ ಸಿರಿಯಸ್ ಆಗಿದೆ ಎರಡು ದಿನದಲ್ಲಿ ಸಾಯುತ್ತಾನೆ ಅಂತ ಹೇಳಿದ್ದಾರೆ. ಇದ್ದ ಎಫ್.ಡಿ.ಗೆ ನನ್ನ ಹೆಸರನ್ನು ನಾಮಿನೇಶನ್ನು ಮಾಡಿ ಎಂದರೆ ಇವರು ಏನೆನೋ ಹೇಳ್ತಾ ಇದ್ದಾರೆ.. ನಾನು ಪಾಸ್ ಬುಕ್ಕು ಪಡೆದು ಚೆಕ್ ಮಾಡಿದೆ. ಅಕೌಂಟಿನಲ್ಲಿ ಸ್ವಲ್ಪ ಹೆಚ್ಚೇ ಅನ್ನೋವಷ್ಟು ದುಡ್ಡು ಇತ್ತು. ಖಾತೆ ನಾಲ್ಕೈದು ವರ್ಷದಿಂದ ಬಳಸದೇ ನಿಷ್ಕ್ರಿಯಗೊಂಡಿತ್ತು. ಸಹಿ ಕೂಡ ಹೊಂದುತ್ತಿರಲಿಲ್ಲ ಸಹಜವಾಗೆ ಅವರಿಗೆ ಅನುಮಾನ ಬಂದಿತ್ತು.

 

ಈಗ ನಿಮ್ಮ ತಮ್ಮ ಎಲ್ಲಿದ್ದಾರೆ

 ಮನೆಯಲ್ಲಿ ಇದ್ದಾನೆ. 3 ಕಿಲೋ ಮೀಟರ್ ಆಗತ್ತೆ. ಮೂವ್ ಕೂಡ ಆಗೋದು ಕಷ್ಟ. ಪ್ಲೀಸ್ ಚೆಂಜ್ ಮಾಡಿ ಅವರ ಕಣ್ಣ ತುಂಬಾ ನೀರು ತುಂಬಿತ್ತು.

 ದಯವಿಟ್ಟು ಕ್ಷಮಿಸಿ Inoperative  ಆಗಿರುವ ಖಾತೆಗೆ ಯಾವುದೇ ಬದಲಾವಣೆ ಮಾಡಿಸೋದಿದ್ರು ಅವರು ಬರಲೇಬೇಕು. ಹಾಗೆ ನಾವೇನಾದರೂ ಮಾಡಿದರೆ ತಪ್ಪಾಗುತ್ತೆ. ಇರಲಿ. ಸ್ವಲ್ಪ ಹೊತ್ತು ಕುಳಿತುಕೊಳ್ಳಿ ನನ್ನ ಮುಂದೆ ಇರುವ ಜನರನ್ನ ವಿಚಾರಿಸಿ ನಾನೆ ಮನೆಗೆ ಬಂದು ಸಹಿ ತಗೋತಿನಿ

 

ಸ್ವಲ್ಪ ಸಮಾಧಾನವಾದಂತೆ ಕಂಡರೂ ಅವರು ಏನೋ ಹೇಳೋಕೆ ಟ್ರೈ ಮಾಡ್ತಿದಾರೆ ಅನಿಸಿತು. ಹೇಳಿದ್ದ ಗ್ರಾಹಕರು ಬಂದಿದ್ದರು. ಅವರಿಗೆ ಆಗಬೇಕಿದ್ದ ಕೆಲಸಗಳು ಮುಗಿಸಿ. ಬ್ರಾಂಚ್ ಅಟೆಂಡರ್ ಜೊತೆ ಅವರ ಹಿಂದೆಯೆ ಬೈಕಿನಲ್ಲಿ ಹೊರಟೆವು.

 

ಮರದ ಗೇಟಿನ ಮನೆ. ಅಲ್ಲಲ್ಲಿ ಹಸಿರು ಪಾಚಿಕಟ್ಟಿದ ಮನೆಯ ಹೆಂಚುಗಳು. ಮನೆಯ ಮುಂದೆ ಇದ್ದ ತೆಂಗಿನ ಮರದಿಂದ ಕಾಯಿಬಿದ್ದು ಅರೆಬರೆ ಹೆಂಚು ನೆರಕೆಗಳಿಗೆ ಆತುಕೊಂಡಂತಿದ್ದವು. ಒಳಗೆ ಕಾಲು ಇಡುತ್ತಿದ್ದಂತೆ ಮಾತ್ರೆಗಳ ಕಮಟು ವಾಸನೆ ಮೂಗಿಗೆ ಬಡಿಯಿತು. ಆಚೆ ಮರದ ಮಂಚದ ಮೇಲೆ ಅವರ ತಮ್ಮ ಮಲಗಿದ್ದರು. ಅವರಕ್ಕನೇ ಹೋಗಿ ಎಚ್ಚರಿಸಿದರು. ನಾನು ಎಲ್ಲಾ ವಿಷಯ ಹೇಳಿ ನಿಮ್ಮ ಒಪ್ಪಿಗೆ ಇದೆ ಅಲ್ವ ಅಂದೆ. ದೂರದಲ್ಲಿ ನಿಂತಿದ್ದ ಅವರಕ್ಕ ಜೋರಾಗಿ ಅಳಲು ಶುರುಮಾಡಿದರು. ನನಗೆ ವಿಚಿತ್ರವೆಸಿತು. ತುಂಬಾ ಸಣ್ಣದನಿಯಲ್ಲಿ ಮಾತಾಡುತ್ತಾ ಇದ್ದುದರಿಂದ ಸ್ವಲ್ಪ ಲಕ್ಷ್ಯಗೊಟ್ಟು ಕೇಳಬೇಕಿತ್ತು. ಎಫ್.ಡಿ. ಮುರಿಯದೇ ನಾಮಿನೆಶನ್ಗೆ ಒಪ್ಪಿಗೆ ಇದೆ ಎಂದರು. ಸಹಿ‌ ಪಡೆದು. ವಾಪಾಸ್ಸು ಬರೋವಾಗ ಟೀ ಮಾಡಿರಿ ಎಂದು ಕೆಲಸದವರಿಗೆ ಹೇಳ್ತಾ ಇರೋದು ಗಮನಿಸಿದೆ‌. ಕೆಲಸವಿದೆ‌ ಎನ್ನುತ್ತಾ ಇಬ್ಬರೂ ವಾಪಾಸ್ಸು ಬಂದೆವು. ಎರಡು ದಿನದಲ್ಲಿ‌ ಸಾಯುವಂತ ಯಾವ ಲಕ್ಷಣಗಳೂ ನನಗೆ ಗೋಚರಿಸಲಿಲ್ಲ. ನಮ್ಮ ಹಿಂದೆಯೇ ಅವರೂ ಬಂದಿದ್ದರು. ನಾಮಿನೇಷನ್ ಹಾಕಿ Acknowledgement ಕೂಡ ಕೊಟ್ಟಿದ್ದಾಯ್ತು. ಥ್ಯಾಂಕ್ಸ್ ಹೇಳಿ ಹೊರಡುವ ವೇಳೆಯಲ್ಲಿ 'ನಿಮ್ಮ ತಮ್ಮ ಬೇಗ ಹುಷಾರಾಗಲಿ‌' ಎಂದೆ. ಅದಕ್ಕವರು ಅಷ್ಟು ಪ್ರತಿಕ್ರಿಯೆ ಕೊಡಲಿಲ್ಲ. ಫೋನಿಡಿದುಕೊಂಡು  ದರದರನೆ ಆಚೆ ಹೊರಟರು.


ಸ್ವಲ್ಪ ಹೊತ್ತಿನಲ್ಲಿ‌ ಮರಳಿಬಂದ ಅವರು ತುಸು ಸಂಕೋಚದಿಂದ ' ಡೆತ್ ಕ್ಲೈಮ್ ಫಾರ್ಮೇಟುಗಳು ಇದ್ದರೆ ಕೊಡಿ. ನಾನು‌ ಬೆಂಗಳೂರಿನಿಂದ ಎರಡು ದಿನವಾದ ಮೇಲೆ ಬಂದು ಒಂದೆ ಸಲ ಕೆಲಸ ಮುಗಿಸಿಕೊಂಡು ಹೋಗ್ತಿನಿ' ಎಂದು ತಣ್ಣಗೆ ಅಂದರು. ಒಂದು ಕ್ಷಣ ನಾನು ತಬ್ಬಿಬ್ಬುಗೊಂಡೆ. ಏನು ಮಾತಾಡಬೇಕು ಅಂತ ತಿಳಿಯಲಿಲ್ಲ. ' ನೋಡಿ ಇದು ಮ್ಯಾನೆಜರ್ ಕಾರ್ಡು. ತಗೋಳಿ. ಕೆಳಗಡೆ ಇರೋದು ನನ್ನ ನಂಬರು. ಏನಾದರೂ ಸಮಸ್ಯೆ ಆದರೆ ಕರೆಮಾಡಿ ನಾ ಹೇಳ್ತೆನೆ ಏನ್ ಮಾಡ್ಬೇಕು ಅಂತ' ಎನ್ನುತ್ತಾ ಅವರನ್ನು ಸಾಗ ಹಾಕಿದೆ‌. ಮಲಗಿ ಏಳೋಕು ಕಷ್ಟ ಪಡುತ್ತಿದ್ದ ಅವರು ನನಗೆ ಅಲ್ಲಿದ್ದ ಯಾವ‌ ಕ್ಷಣದಲ್ಲೂ ಸಾಯುತ್ತಾರೆ ಎಂದು ಅನಿಸಿರಲಿಲ್ಲ. ಆದರೂ‌‌‌ ನಾನೇನು‌ ಡಾಕ್ಟರಲ್ಲ. ಡಾಕ್ಟರು ಇವರಿಗೆ ಏನು ಹೇಳಿದ್ದಾರೆ ನನಗೂ ಗೊತ್ತಿಲ್ಲ. ಮನಸ್ಸಲ್ಲಿ ಮೂಡುತ್ತಿದ್ದ ಯೋಚನೆಗಳ ಸುನಾಮಿಗೆ ತಾತ್ಕಾಲಿಕ ತಡೆಗೋಡೆ ನಿರ್ಮಿಸೋಕೆ ಪ್ರಯತ್ನಿಸುತ್ತಾ ಇದ್ದೆ.

 ಅದಾಗಿ ಎರಡೇ ದಿನಕ್ಕೆ ಅಂದರೆ ಶನಿವಾರ ಸಂಜೆ Unknown ನಂಬರಿನಿಂದ ಕರೆ ಬಂತು. ಸ್ವಿಕರಿಸಿದೆ. ಅವರು ಮಾತಾಡುತ್ತಿದ್ದರು. ತಮ್ಮ ಹೇಗಿದ್ದಾರೆ ಎಂದೆ. 'ಬೆಳಗಿನ ಜಾವ ಹೋಗ್ಬಿಟ್ಟ ಸಾರ್' ಅಸ್ಪಷ್ಟ ದನಿಯಲ್ಲಿ ಮಾತುಗಳು ಕೇಳುತ್ತಿದ್ದವು. ಅಯ್ಯೋ ಅನಿಸಿತು 'ಸಾರಿ ಮ್ಯಾಡಮ್' ಅಂದೆ. ನನ್ನ ಮಾತು ಪೂರ್ಣ ಮಾಡೋಕು ಕಾಯದೇ 'ಸಾರ್ ಫಾರ್ಮಾಟುಗಳನ್ನು ಕಳುಹಿಸಿ. ಡೆತ್ ಸರ್ಟಿಫಿಕೇಟು ನಾಳೆಗೆ ಅರ್ಜಿ ಹಾಕ್ಬೇಕು. ಇನ್ನೆರಡು ದಿನದಲ್ಲಿ ಸಿಗತ್ತೆ. ಎಲ್ಲವನ್ನೂ ಒಂದೆ ಸಲ ಬಂದು ಕೆಲಸ ಮುಗಿಸಿಕೊಂಡು ಹೋಗ್ತಿನಿ' ಎಂದು ಒಂದೇ ಸ್ವರದಲ್ಲಿ ಹೇಳತೊಡಗಿದರು. ನಾನು‌ ದಿಗ್ಮೂಢನಾದೆ. ಮತ್ತದೆ ಮೊನ್ನೆ ಅನುಭವಿಸಿದ ಶೂನ್ಯ ಭಾವ. ಎರಡು‌ ದಿನ ಅನ್ನೊದು ನನ್ನ ಮೆದುಳಿನಿಂದ ತುಂಬಾ ದಿನಗಳವರೆಗೆ ಹೊರಹೋಗುವ ಲಕ್ಷಣಗಳಂತೂ ಕಾಣಲಿಲ್ಲ.ಎಂತಹ ನಿರೀಕ್ಷೆಯ ಸಾವಾದರೂ ಕೆಲವು ಸ್ತರದ ಭಾವಶೂನ್ಯತೆಯನ್ನ ಗಮನಿಸಿ ಅರಗಿಸಿಕೊಳ್ಳೋಕೆ ಆಗಲ್ಲ.  ಅಲ್ಲೇನಾಗಿದೆಯೋ ಕಣ್ಣುಗಳಂತೂ ಪ್ರತ್ಯಕ್ಷವಾಗಿ ಕಂಡಿಲ್ಲ ಆದರೂ ನಮ್ಮ ಗ್ರಹಿಕೆ ಎಂತದೋ ಅನುಚಿತವಾದದ್ದು ಘಟಿಸಿದೆ ಎಂದು ನನ್ನ ನಂಬಿಸೋಕೆ ಪ್ರಯತ್ನಿಸುತ್ತಾ ಇರತ್ತೆ. ನ್ಯೂಟ್ರಲ್ಲಾಗಿ ಅಂದ್ರೆ ತಟಸ್ಥರಾಗಿ ವಿಷಯ ಗ್ರಹಿಸೋಕೆ ಅಗಾಧ ಜೀವನಾನುಭಾವ ಬೇಕು.  ಶಾಮಿಯಾನಗಳನ್ನ ಗಮನಿಸಿ ನಾಳೆ ಮದುವೆಯೋ ನಾಮಕರಣವೋ ಗೃಹಪ್ರವೇಶವೋ ಶೋಕದಮನೆಯ ತೋರಣವೋ. ಹೋದ ಕಡೆ ಮೈ ಚಾಚಿ ಹರಡಿ ನಗು ಅಳುವಿನಲಿ ಒಗ್ಗೂಡುತ್ತವೆ. ಒಪಿನಿಯನ್ನು‌ ಕಟ್ಟಿಕೊಳ್ಳದೇ ವಹಿಸಿದ ಕೆಲಸ ಮಾಡೋದು, ನಿರ್ಭಾವುಕರಾಗಿ ಒದಗಿ ಬರುವ ಜವಾಬ್ದಾರಿಗಳನ್ನ ನಿಭಾಯಿಸೋದು ಅಷ್ಟು ಸುಲಭವಲ್ಲ.

 ಹೇಳಿದ ಹಾಗೆ ಅವರು ಬಂದು ಎಲ್ಲಾ ಮುಗಿಸಿ ಉಳಿದ ಮೊತ್ತ ತಮ್ಮ ಖಾತೆಗೆ ಬರಲು ಎಲ್ಲಾ ವ್ಯವಸ್ಥೆ ಮಾಡಿಕೊಂಡರು. ಹೋಗುವಾಗ ಮರೆಯದೆ ಥ್ಯಾಂಕ್ಸ್ ಕೂಡ ಹೇಳಿ ಹೋದರು. ಅವರು ಹಾಗೆ ಇವರು ಹೀಗೆ ಅಂತ ನನ್ನಲ್ಲಿ ಒಪಿನಿಯನ್ನು ರೂಪುಗೊಂಡಿಲ್ಲ ಅಂತ ಹೇಳುವಷ್ಟು ಧೈರ್ಯ ನನಗಿಲ್ಲ. ಹಾಗೆ ಕಟ್ಟಿಕೊಂಡು ಯೋಚಿಸುವ ನಿರರ್ಥಕತೆಯ ಅರಿವೂ ಇದೆ. ಇದೆಲ್ಲವನ್ನು ಮೀರಿ ಕೆಲಸ ಮಾಡುವ, ಡೆಬಿಟ್ಟು ಕ್ರೆಡಿಟ್ಟು ಸರಿದೂಗಿಸುವ ನಿತ್ಯ ಕೆಲಸವಂತೂ ನಡೆಯಲೇಬೇಕು. ಅಗೋಚರ ಜಾಗದಲ್ಲಿ ಕೂತು ಅದ್ಯಾರೋ ನಮ್ಮಗಳ ಡೆಬಿಟ್ ಕ್ರೆಡಿಟ್ಟು ಪ್ಲಸ್ಸು-ಮೈನಸ್ಸು ಕೂಡ ಸರಿ ಮಾಡ್ತಿರಬೋದು ಗೊತ್ತಿಲ್ಲ.

 ಸಂಜೆ ಕೆಲಸ ಮುಗಿಸಿ ಕ್ಯಾಷು ವಾಲ್ಟಿನ ಒಳಗೆ ಹಾಕೋವಾಗ ಒಮ್ಮೊಮ್ಮೆ ನೋಟುಗಳೆಲ್ಲ ನನ್ನ ಪಕ್ಕೆ ತಿವಿದು ಒಂದಷ್ಟು ಮಾತುಗಳನ್ನ ಹೇಳುತ್ತವೆ, ಹಾಗೆ ಕೇಳುತ್ತವೆ. ಈ ಸಂಭಾಷಣೆ ಕೊನೆಯಾಗೋದು 'ಕೆಲವು ಕಡೆ ಕುರುಡನಾಗಿ ಕೆಲವು ಕಡೆ ಕಿವುಡನಾಗಿ ಮೂಗನಾಗಿ ನಿನ್ನ ಕೆಲಸ ನೀನು ಮಾಡ್ಕೊಂಡು ಹೋಗು ಗುರು' ಅನ್ನೋದರೊಂದಿಗೆ.

ಕಾಮೆಂಟ್‌ಗಳು

  1. ಪ್ರತ್ಯುತ್ತರಗಳು
    1. ಹೌದು! ತುಂಬಾ 'ಅರ್ಥ'ಗರ್ಭಿತವಾಗಿತ್ತು.🔥

      ಅದೆಷ್ಟು ಬಾರಿ ಮನ ಕಲಕಿ, ಕುಲಕಿ ಹೃದಯವ ಹಿಂಡಿ ಹಿಂಡಿ ಹಾಕುತ್ತಿದ್ದ ಘಟನೆಗಳು ಘಟಿಸಿದರು,. ನಗುವಿನ ಯಾಂತ್ರಿಕ ಜೀವಿಗಳಂತೆ ಮೊರೆಯನಿಟ್ಟು " ಹೇಳಿ, ಏನು ಸಮಸ್ಯೆ ಅಂತ ಕೇಳುವ ಬ್ಯಾಂಕಿನವರೀಗೆ ಒಂದು ದೊಡ್ಡದೊಂದು ನಮಸ್ಕಾರ.
      ಒಳ್ಳೆದು ಆಗ್ಲಿ ಅವ್ರಿಗ🙌

      ಅಳಿಸಿ
    2. ತುಂಬಾ ಥ್ಯಾಂಕ್ಸ್ ನಿಮ್ಮ ಮಾತುಗಳಿಗೆ

      ಅಳಿಸಿ
  2. ಬ್ಯಾಂಕ್ ಕೌಂಟರ್ ಅಲ್ಲಿ ಕುಳಿತಾಗ ಸಿಗುವ ಪಾಠ ತುಂಬಾ ದೊಡ್ಡದು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

The Stillness Between Two Trees

ಆಲ್ ವಿ ನೀಡ್ ಇಸ್ ಚೇಂಜ್

ಅಪ್ಪ ನೀನ್ಯಾಕೆ ಹೀಗೆ....?