ಕ್ರಿ.ಪೂ.ದ ಕತೆಗಳು

ಕ್ರಿ.ಪೂ ಸುಮಾರು 500-600 ವರ್ಷಗಳಿರಬೇಕು. ಸಾಮ್ರಾಜ್ಯದ ಎಲ್ಲೆಡೆ ಕೋಲಾಹಲ. ಪ್ರಜೆಗಳಿಗೆ ಏನೂ ಮಾಡಬೇಕೆಂದು ತಿಳಿಯುತ್ತಿಲ್ಲ. ರಾಜನ ಆಸ್ಥಾನಕ್ಕೆ ಲಗ್ಗೆ ಇಟ್ಟರು. ಕೈಮುಗಿದು ಬೇಡಿಕೊಂಡರು. 'ಬೆಳೆದ ಬೆಳೆಗಳನ್ನೆಲ್ಲಾ ಸಸ್ಯಹಾರಿ ಪ್ರಾಣಿಗಳು ತಿಂದು ಹಾಕುತ್ತಿವೆ. ಸಾಕು ಪ್ರಾಣಿಗಳನ್ನು ಕಾಡುಮೃಗಗಳು ನಾಡಿಗೆ ಬಂದು ಕದ್ದೊಯ್ಯುತಿವೆ' ಇದಕ್ಕೆ ಪರಿಹಾರ ಮಾಡಿಕೊಡಿರೆಂದು ಕೇಳಿದರು. ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದ ಯುವರಾಜನಿಗೆ ತಲೆಕೆಟ್ಟು ಹೋಯಿತು. ಇದಕ್ಕೆಲ್ಲಾ ಪರಿಹಾರ ಮಾಡ್ಬೇಕು ಅಂತ ನಿರ್ಧರಿಸಿ, ಪ್ರಾಣಿಗಳ ವಧಿಸಬೇಕೆಂದು ತೀರ್ಮಾನಿಸಿದ. ಸೈನ್ಯದಲ್ಲಿ ನಿಪುಣಾತಿ ನಿಪುಣರನ್ನು ಸೆಲೆಕ್ಟ್ ಮಾಡಿದ್ದಾಯ್ತು. ಆಗಿನ್ನೂ ಅಧಿಕಾರ ಹಸ್ತಾಂತರಿಸಿದ್ದ ಮಹಾರಾಜ ಕೂಡ ಜೋತೆಲಿ ಬರ್ತೀನಿ ಅಂದ.

 

ಮಧ್ಯಾಹ್ನದೊಟ್ಟಿಗೆ ಪ್ರಾಣಿ ವಧೆ ಒಂದಷ್ಟು ಹದಕ್ಕೆ ಬಂತು. ಕಾಡು ಮೇಡು ಅಲೆಯುತ್ತಾ ಮಹಾರಾಜ ಒಂದು ಸುಂದರ ಸರೋವರದ ಬಳಿ ಕುಳಿತ. ಅದು ಅಂತಿಂಥ ಸರೋವರವಲ್ಲ ಅದರ ಸುತ್ತ ಇದ್ದ ಎಲ್ಲಾ ನಿರ್ಜೀವ ವಸ್ತುಗಳು ತಮ್ಮ ತಮ್ಮಲ್ಲೆ ಮಾತಾಡಿಕೊಳ್ಳುತ್ತಿದ್ದವು. ಮಹಾರಾಜನಿಗೆ ಆಶ್ಚರ್ಯವಾಯಿತು. ಸೂಕ್ಷ್ಮವಾಗಿ ಗಮನಿಸಿದ. ಸಣ್ಣ ಗಿಡ ಗೆಂಟೆಗಳು ಬೃಹದಾಕರವಾಗಿ ಬೆಳೆದಿದ್ದ ಮರಗಳ ವಿರುದ್ಧ ಮಹಾರಾಜನಲ್ಲಿ ದೂರಿತ್ತವು. “ಬೆಳೆದು ದೊಡ್ಡವಾದ ಮೇಲೆ ಮರಗಳು ಮೇಲಿನಿಂದ ಮಾತಾಡುವುದು ನಮಗೆ ಕೇಳಿಸುವುದಿಲ್ಲ ಆದಾಗ್ಯೂ ಹೋಗಲಿ ಅಂತ ಒಂದು ಕಥೆಯನ್ನೂ ಕೂಡ ಯಾರು ಹೇಳುವುದಿಲ್ಲ. ಹಾಗೆ ನಮ್ಮ ಕೀರಲು ಧ್ವನಿಯ ಮಾತುಗಳು ಅವುಗಳಿಗೂ ಕೇಳಿಸುವುದಿಲ್ಲಸಣ್ಣ ಸಣ್ಣ ಬೆಣಚು ಕಲ್ಲುಗಳು ದೊಡ್ಡ ದೊಡ್ಡ ಬಂಡೆಗಳ ಮೇಲೂ ದೂರಿತ್ತವು. ಮಹಾರಾಜ ಸಾವರಿಸಿಕೊಂಡು ಮೆಲ್ಲನೆ ನೀರು ಕುಡಿದು ಸುಧಾರಿಸಿಕೊಂಡು 'ನೋಡಿ ನಿಮ್ಮ ದು:ಖ ದುಮ್ಮಾನಗಳನ್ನೂ ನಾನು ಪೂರ್ಣ ಪ್ರಮಾಣದಲ್ಲಿ ನಿವಾರಿಸೋಕೆ ಆಗುವುದಿಲ್ಲ ಆದರೆ ಕತೆಯನ್ನು ಹೇಳಬಹುದು.' ಗಿಡಗಳು ಕಲ್ಲುಗಳೆಲ್ಲ ಗಲ್ಲದಮೇಲೆ ಕೈಇಟ್ಟು ಆಲಿಸತೊಡಗಿದವು. ರಾಜ ಶುರುಮಾಡಿದ ಮುಂದೆ ಕ್ರಿಸ್ತ ಶಕ ಶುರುವಾಗಿ ಎರಡು ಸಾವಿರ ವರ್ಷಗಳಾದ ಮೇಲೆ  ಜನರು "ಒಂದಾನೊಂದು ಕಾಲದಲ್ಲಿ ರಾಜನಿದ್ದ.." ಅಂತ ನಮ್ ಕಥೆ ಹೇಳ್ತಾರೆ. ಆದರೆ ನಮ್ಮ ಕಥೆನಾ ನಾವೇ ಹೇಳಿಕೊಂಡರೆ ಸ್ವಾರಸ್ಯ ಇರಲ್ಲ. ಅದಕ್ಕೆ ಭವಿಷ್ಯದ ಕತೆಗಳನ್ನ ನಾನು ಹೇಳ್ತಿನಿ. ಇದನ್ನ ಓದುವವರು ಕೂಡ ಭವಿಷ್ಯದಲ್ಲಿ ಇರ್ತಾರೆ. ಕತೆನಾ ಹ್ಞೂ ಗುಟ್ಟುತ್ತಾ ಕೇಳ್ಬೇಕು 

 

ಹ್ಞೂ...ಹ್ಞೂ... ಹ್ಞೂ...

 

 

***

 

.ಕೆಂಪಿಂಕು

"ಚಾಲಕನು ಅತಿವೇಗ ಹಾಗೂ ಅಜಾಕರೂಕತೆಯಿಂದ ವಾಹನ ಚಲಾಯಿಸಿ ರಸ್ತೆ ದಾಟುತ್ತಿದ್ದ ಇಬ್ಬರು ಪಾದಚಾರಿಗಳಿಗೆ ಅಪಘಾತವೆಸಗಿ ವಾಹನ ಅಲ್ಲೆ ಬಿಟ್ಟು ಪರಾರಿಯಾಗಿರುತ್ತಾನೆ". ಟಪಾಲು ವಿಭಾಗದಿಂದ ಕರೆಸಿದ್ದ PC ಎ ರಾಜು ಬರೆದುಕೊಳ್ಳುತ್ತಿದ್ದರು. ಅವರ ಮುಖಭಾವ ವಿಷಣ್ಣತೆಯಿಂದ ಕೂಡಿತ್ತು.ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಂತಿದ್ದ ಠಾಣೆಯ ಸರಹದ್ದಿನಲ್ಲಿ ವಾರಕ್ಕೆ ಏನಿಲ್ಲವೆಂದರೂ ಎರಡೂ ಮೂರು ಅಪಘಾತ ಪ್ರಕರಣಗಳು ದಾಖಲಾಗುತ್ತಿದ್ದವು.ಅಂದು ಎರಡನೇ ಪ್ರಕರಣ ದಾಖಲಾಗಿತ್ತು.ಹೊಸದಾಗಿದ್ದರಿಂದಲೋ ಏನೋ ರಸ್ತೆಯಲ್ಲಿ ಹರಡಿದ್ದ ರಕ್ತ, ಶವದ ಬಳಿ ಸಂಬಂಧಿಗಳ ಆಕ್ರಂದನ ಕಸಿವಿಸಿಗೊಳಿಸಿತ್ತು. ಕೆಂಪು ಬಣ್ಣ ಕಣ್ಣಿಗೆ ಕಟ್ಟಿದಂತಿತ್ತು.ಬರೆಯುತ್ತಾ ಪೆನ್ನಿನ ಇಂಕು ಖಾಲಿಯಾಯ್ತು.ಅತ್ತಿತ್ತ ಹುಡುಕಿದಾಗ ನೀಲಿ ಬಣ್ಣದ ಪೆನ್ನು ಸಿಗಲಿಲ್ಲ.ಸಿಕ್ಕ ಕೆಂಪುಶಾಹಿಯಲ್ಲಿ ಬರೆಯಲು ಮನಸೇಕೋ ಒಪ್ಪಲಿಲ್ಲ.

 

 

 

***

.ಪ್ರಣಾಳಿಕೆ

 ಆ ರಸ್ತೆಯ ಮೈಮೆಲೆಲ್ಲಾ  ಗುಂಡಿಗಳು ಅವೈಜ್ಞನಿಕ ರಸ್ತೆ ಉಬ್ಬುಗಳೇ ತುಂಬಿದ್ದವು. ಆಗಾಗ ತೇಪೆ ಹಾಕುತ್ತಿದ್ದರಾದರೂ ಅದು ಕೂಡ ಸ್ವಲ್ಪ ದಿನದಲ್ಲೆ ತನ್ನ ಸೋಲನ್ನು ಒಪ್ಪಿಕೊಂಡಿರುತ್ತಿತ್ತುಪರಿಣಾಮ ಹಲವಾರು ಜನ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದರು. ಮುರಿದ ಕೈಕಾಲುಗಳಿಗೆ ಲೆಕ್ಕವೇ ಇಲ್ಲ. ಇಂತಹ ಸಂದರ್ಭದಲ್ಲಿ ಸಾವು-ನೋವುಗಳಿಗೆ ಶಾಶ್ವತ ಪರಿಹಾರ ಮಾಡಿರೆಂದು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಲಾಯ್ತು. ಸದ್ಯದಲ್ಲೇ ನೋಡ್ತಿನಿ ಅಂತ ಸುಮ್ಮನಾಗಿದ್ದರು.

ಇಂತಿಪ್ಪ ಎಲೆಕ್ಷನ್ನು ಕೂಡ ಹತ್ತಿರ ಬಂತು. ಮೊದಲ ಮನವಿಯ ಜ್ಞಾಪಕಾರ್ಥ ಒಂದು ಪತ್ರ ಬರೆದು ಊರವರೆಲ್ಲಾ ಮರು-ಮನವಿ ಸಲ್ಲಿಸಿದರು. ಚುನಾವಣೆಯಲ್ಲಿ ಗೆದ್ದರೇ Solution ಮಾಡಿಕೊಡುವುದಾಗಿ ಘಂಟೆ ಬಸವಣ್ಣನ ಮುಂದೆ ಪ್ರಮಾಣ ಮಾಡಿದರು. ಕೊನೆಗೂ ಗೆದ್ದರು. ಸರ್ವೆ ಮಾಡುವವರು ಬಂದು ಅಳತೆಗೋಲು ಇಟ್ಟು ಏನೆನೋ ಬರೆದುಕೊಂಡು ಹೋದರು. ಊರಲ್ಲೆಲ್ಲಾ ಸಂತಸ ಮನೆ ಮಾಡಿತ್ತು. ನೋಡ ನೋಡುತ್ತಿದ್ದಂತೆಯೇ ಅಲ್ಲೊಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಅಪಘಾತ  ಚಿಕಿತ್ಸಾ ಆಸ್ಪತ್ರೆ ನಿರ್ಮಾಣವಾಯಿತು. ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾದಾಗ ಇನ್ನೊಂದು ಆಸ್ಪತ್ರೆ ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಿತು

ಈಗ್ಗೆ ಮಳೆಬಂದ ಮಾರನೆದಿನ ರಾಷ್ಟ್ರಪತಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಊರ ಮೇಲೆ ಹಾದು ಹೋಗುತ್ತಿತ್ತು. ಬಗ್ಗಿ ನೋಡಿದರು. ರಸ್ತೆ ಗುಂಡಿಗಳ ತುಂಬ ನೀರು ತುಂಬಿ ಸಮತಟ್ಟಾಗಿ ಕಾಣತೊಡಗಿತು.

 

* * *

೩.ಡೆಸಿಬಲ್

'ಏನ್ರಿ ನೀವ್ ಹೇಳ್ತಿರೋದು. ನಂಗೆ ಕಿವಿ ಕೇಳಿಸದೇ ಇರಬಹುದು. ಬುದ್ಧಿಮಂದ ಅಲ್ಲ...' ತರಂಗನ ಧ್ವನಿ ನಿಧಾನವಾಗಿ ಏರುತ್ತಿತ್ತು. ಫ್ರಂಟ್ ಡೆಸ್ಕಿನಲ್ಲಿ ಕೂತಿದ್ದ ಇನ್ನೂ ಮೂಸೆ ಮೂಡದ ಹುಡುಗರು ಇವನ ಪ್ರತಾಪಕ್ಕೆ ತಡಬಡಿಸುತ್ತಿದ್ದರು.

'ಸಾರ್ ಹಾಗಲ್ಲ...'

'ಸತ್ತಿರೋ ನನಗೆ ಗೊತ್ತು ಹೇಗೆ ಸತ್ತೆ ಅಂತ. ಹಾರ್ಟ್ ಅಟ್ಯಾಕು. ನಿಮ್ಮ ಡೇಟಾಬೇಸಿನಲ್ಲಿ ತಾಳೆಯಾಗಲ್ಲ ಅಂದ್ರೆ ಏನರ್ಥ. ಒನ್ನವರ್ ಆಯ್ತು ಲೈನಲ್ಲಿ ನಿಂತು..' 

'ಇಲ್ಲಿ Record Not Matching ಅಂತ ಬರ್ತಾ ಇದೆ...'

'ನಿಮ್ಮ ಸಿಸ್ಟಮ್ಮಿನಲ್ಲಿ ಪ್ರಾಬ್ಲೆಮ್ ಇರ್ಬೇಕು. ಹೋಗಿ ನಿಮ್ಮ ಮೇಲಾಧಿಕಾರಿ ಕೇಳಿ...'

ಅವರು ರಿ-ವೆರಿಫಿಕೇಶನ್ ಟೀಮಿಗೆ ರಫ್ತು ಮಾಡಿರೆನ್ನುತ್ತಾ ಕೈತೊಳೆದುಕೊಂಡರು. 'ಈ ಸತ್ತವರ ಜೊತೆ ವ್ಯವಹರಿಸುತ್ತಾ ನನಗೂ ಸಾಯುವ ಹಾಗೆ ಆಗಿದೆ..' ಮನಸ್ಸಿನಲ್ಲೆ ಬೈದುಕೊಂಡ.

-ಹಿಂದಿನ ದಿನ

ಉಣ್ಣುತ್ತಿದ್ದ ಮುದ್ದೆ ಗಂಟಲೊಳಗೆ ಇಳಿಯುವ ಮುನ್ನವೇ 'ಹಾರ್ಟ್ ಅಟ್ಯಾಕ್ ಅಂತೆ ಎಮರ್ಜೆನ್ಸಿ. ದೊಡ್ಡಾಸ್ಪತ್ರೆಗೆ ಹೊರಡಿ' ಎನ್ನುತ್ತಾ ಕೈಗೆ ಆಂಬ್ಯುಲೆನ್ಸ್ ಕೀ ಯೊಂದ ಇಟ್ಟರು. ಸೈರನ್ನು ಆನ್ ಮಾಡಿಕೊಂಡು ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ಕಲ್ಲಿ ನಿಂತಾಗಲೇ ಡ್ರೈವರನಿಗೆ ಗೊತ್ತಾಗಿದ್ದು ಅದು ರಿಪೇರಿಗೆ ಬಿಟ್ಟಿದ್ದ ಗಾಡಿಯೆಂದು. ಆಸ್ಪತ್ರೆ ರಸ್ತೆಯಲ್ಲಿ  ಅಂಬ್ಯುಲೆಂನ್ಸುಗಳು ಬಂದೋಗುತ್ತಿದುದರಿಂದಲೋ ಎಮರ್ಜೆಂನ್ಸಿ ಇದ್ದುದರಿಂದಲೊ ಏನೋ ಸೈರನ್ನು ತಮ್ಮ ಗಾಡಿಯದಾ ಎಂದು ಗ್ರಹಿಸಲು ಆಗಿರಲಿಲ್ಲ. ಅತ್ತ ರಸ್ತೆ ಬರುವಾಗ ಖಾಲಿ ಇದ್ದುದರಿಂದ ಹಾರನ್ನು ಕೂಡ ಸರಿಯಿಲ್ಲದಿರುವುದು ಗಮನಕ್ಕೆ ಬರಲಿಲ್ಲ. ಕೊನೆಗೆ ಮುಕ್ಕಾಲು ಗಂಟೆ ಅಸಹಾಯಕರಾಗಿ ಟ್ರಾಫಿಕ್ಕಿನಲ್ಲಿ ಕಾದು ಆಸ್ಪತ್ರೆ ತಲುಪಿದಾಗ ಡಾಕ್ಟರು ಅಂದರು 'ಹತ್ತು ನಿಮಿಷ ಮುಂಚೆ ತಂದಿದ್ದರೇ ಉಳಿಸಬಹುದಿತ್ತು. ಯಾವೋನ್ರಿ ಅವ್ನು ಮೆಕಾನಿಕ್ಕು..'. ಗಾಡಿಯೊಳಗೆ ತುಂಬಿಸುವ ಭರದಲ್ಲಿ  ರೋಗಿಯ ಶ್ರವಣ ಸಾಧನ ಎಲ್ಲೋ ಎಗರಿ ಹೋಗಿತ್ತು. ಜೀವಜ್ಯೋತಿ ಆರುವವರೆಗೂ ಅವನು ಅರೆಪ್ರಜ್ಞಾವಸ್ಥೆಯಲ್ಲೇ ಇದ್ದ.

 ಮರು ಪರಿಶೀಲನ ಇಲಾಖೆ ಕಳುಹಿಸಿದ್ದ ಕಡತ ತದೇಕಚಿತ್ತದಿಂದ ಓದಿದ ಹುಡುಗರು ಕೊನೆಗೂ ನಿಟ್ಟುಸಿರು ಬಿಟ್ಟರು.

* * *

.ಕರೆನ್ಸಿ

 

ಹುಡ್ಗಿ ತರ ಅಳಬೇಡ. ಏನ್ ನಿನ್ನ ಸಮಸ್ಯೆ ಹೇಳುನಾ ಅಳು ನಿಲ್ಲಿಸಲು ಆ ಮಾತು ಸಾಕಗಿರಲಿಲ್ಲ.’ ಹುಡ್ಗಿ ಅಂದ್ರೆ ಏನರ್ಥ. ದು:ಖ ಅನ್ನೋದು ಲಿಂಗಾಧಾರಿತವಾಗಿ ವ್ಯಕ್ತವಾಗುವುದಿಲ್ಲ. ಅಷ್ಟೆ ಏಕೆ. ಅದು ಮನುಷ್ಯ ಸೀಮೀತವಲ್ಲ ಕೂಡನಾನು ಅಳು ನಿಲ್ಲಿಸಿ ತಿರುಗೇಟು ನೀಡಿದೆ.

 ಆಯ್ತಪ್ಪ ರಾಜ್ ಕುಮಾರ. ನಿನ್ನ ಪ್ರಾಬ್ಲೆಮ್ ಏನ್ ಹೇಳು. ಅವಾಗಿಂದ ನೀನು ಅಳು ನಿಲ್ಲಿಸ್ತಿಯಾ ಅಂತ ಕಾಯ್ತ ಇದ್ದೆ. ಸಹಿಸೋಕೆ ಆಗದೇ ಕೇಳ್ತಾ ಇದ್ದಿನಿ ಹೇಳು.’

ಹೇಳ್ತಿನಿ ಅಜ್ಜ ನಾನು ಹುಟ್ಟಿದ ತಕ್ಷಣವೆ  ಎಲ್..ಸಿ ಆಫಿಸಿಗೆ ತಂದು ಹಾಕಿದ್ರು. ಅಟ್ಲಿಸ್ಟ್ ತಮ್ಮವರ ಕಳೆದುಕೊಂಡವರಿಗೆ ದು:ಖದಲ್ಲೂ ನನ್ನಿಂದ ಅಲ್ಪ ಸಮಾಧಾನವಾಗುತ್ತದೆ ಅಂದುಕೊಂಡಿದ್ದೆ. ಹಾಗೆಯೇ ಗಂಡನನ್ನುಕಳೆದುಕೊಂಡ ಮಡದಿಯ ಮಕ್ಕಳ ಮಡಿಲಿಗೆ ನನ್ನನ್ನು ಹಾಕಿದ್ರು. ಅಲ್ಲಿಂದ ಅವರ ಮನೆಯ ಖಜಾನೆಗೆ ಬಂದು ತಲುಪಿದೆ . ಒಂದಷ್ಟು ದಿನದ ಖುಷಿಯ ನೀರಿನ ಗುಳ್ಳೆ

ಆಗತಾನೆ ಹೊಸ ನೂರು ರುಪಾಯಿ ನೋಟಾಗಿ ಹುಟ್ಟಿ  ಎಂತ ಒಳ್ಳೆ ಪರ್ಪಸ್ಸಿಗೆ ಬಳಕೆ ಆಗಿದ್ಯಾ. ಇದ್ರಲ್ಲಿ ಅಳೋದು ಏನಿದೆ ಹುಡ್ಗ

ಕೇಳಿ ಇಲ್ಲಿ ಪೂರ್ತಿ. ಆ ಮನೆಯಲ್ಲಿ ಹುಂಡಿಯೊಳಗೆ ಕೂಡಿಟ್ಟ ಕೆಲವು ನೋಟುಗಳು ನನ್ನ ಜೊತೆ ಸೇರಲಿಲ್ಲ. ಸಿಕ್ಕರೆ ಮುಖ ತಿರುಗಿಸೋದು. ಅವಮಾನಿಸೋದು ಮಾಡ್ತಾ ಇದ್ವುನನಗೂ ರೋಸಿಹೋಗಿ ಒಂದು ದಿನ ಕೇಳಿದೆ’. ಒಕ್ಕೂರಲಿಂದ ಕೂಡಿಟ್ಟ ನೋಟುಗಳು ಹೇಳಿದವು

ಆವಮ್ಮ ಮಕ್ಕಳು ಸೇರಿ ವಿಮೆ ದುಡ್ಡಿಗೆ ಒಂದು ತಡರಾತ್ರಿ ಹಾಸಿಗೆ ಹಿಡಿದಿದ್ದ ಗಂಡನನ್ನು ಸಾಯಿಸಿದ್ರು. ಅವನ ಆರ್ತನಾದ ಹುಂಡಿಯೊಳಗಿದ್ದರೂ ನಮಗೆ ಕೇಳುತ್ತಿತ್ತು. ಅಂತ ಹಣ ನೀನು. ನಮ್ಮ ಜೊತೆ ಸೇರಿ ನಮ್ಮ ನೆಮ್ಮದಿ ಹಾಳು ಮಾಡಬೇಡಅಷ್ಟು ನಿಷ್ಠುರದ ಮಾತುಗಳನ್ನು ನಾ ಕೇಳಿರಲಿಲ್ಲ. ಒಂದು ದಿನ ಹೆಂಡತಿ ನಿರ್ಧರಿಸಿ ಎಫ್.ಡಿ. ಮಾಡಲು ತಂದು ನನ್ನನ್ನು ಈ ಬ್ಯಾಂಕಿಗೆ ತಂದು ಹಾಕುವವರೆಗೂ ಅಲ್ಲಿಂದ ಯಾವಾಗ ಆಚೆ ಬರ್ತಿನೋ ಅಂತ ಹಪಹಪಿಸುತ್ತಿದ್ದೆ.,

ಈಗ ಇಲ್ಲಿ ಬಂದಿದ್ಯಾ. ಕ್ಯಾಷಿಯರು ಊಟಕ್ಕೆ ಹೋಗಿದಾನೆ. ಬರ್ತಿದ್ದಂಗೆ ಇನ್ನೊಂದು ಕಡೆ ಹೋಗೋದು ಬೆಲೆಯಂತೂ ಇದ್ದೆ ಇರತ್ತೆ. ಯೋಚ್ನೆ ಮಾಡ್ಬೆಡ ನನ್ನೆ ನೋಡು ಹಳೆ ನೂರು ರೂ ನೂಟಾದ್ರು ಕಂಡ ಕಂಡವರ ಕೈಯಿಂದ ಜಿಗಿಯುತ್ತ ಜೀವನ ದೂಡ್ತಾ ಇಲ್ವ. ಅಂದ ಹಾಗೆ ಹೊಟ್ಟೆ ಮೇಲೆಲ್ಲಾ ಯಾಗೆ ಟೇಪು ಹಾಕಿಕೊಂಡಿದ್ಯ

ಅದೇ ಬಂದಿರೋದು ಸಮಸ್ಯೆ. ಒಮ್ಮೆ ಯಾವಾಗಲೋ ನೋಟು ಕೌಂಟಿಂಗ್ ಯಂತ್ರದಲ್ಲಿ ಸಿಕ್ಕು ನಜ್ಜುಗುಜ್ಜಾದ ನನ್ನನ್ನು ಯಾರು ತಗೋಳ್ತ ಇಲ್ಲ ಇವತ್ತೇನಾದರೂ ಯಾರೂ ಸ್ವಿಕರಿಸದೆ ಇದ್ರೆ. ಸಾಯಿಲ್ ನೋಟು ಬಂಡಲಲ್ಲಿ ಹಾಕ್ತಾರೆ. ಅಲ್ಲಿಗೆ ನನ್ನ ಆಯಸ್ಸು ಮುಗಿತು

ಅಯ್ಯೊ, ಹೆದರಬೇಡ ಸಂಜೆಗೆ ಕುಡುಕರು ಬರ್ತಾರೆ ಯಾವ ನೋಟು ಕೊಟ್ಟರೂ ತಗೋತಾರೆ. ಅಗೋ ನೋಡು ಊಟಕ್ಕೆ ಹೋಗಿದ್ದ ಕ್ಯಾಷಿಯರ್ ಬರ್ತಿದಾನೆ...’

ಬಂದ ಕ್ಯಾಷಿಯರ್ ಕೌಂಟಿಂಗು ಮಷಿನ್ ಮರುಪ್ರಾರಂಭಿಸಿದ. ಯಂತ್ರದೊಳಗಿನ ಯು.ವಿ ಬೆಳಕು ಎಲ್..ಡಿ ಪರದೆ ಮಿನುಗತೊಡಗಿತು.

 * * *


ಕಾಮೆಂಟ್‌ಗಳು

  1. ಅ ' ಒಂದಾನೊಂದು ಕಾಲದಲ್ಲಿದ್ದ ರಾಜ ' ಕಥೆ ಹೇಳುವಾಗ ಗಿಡ ಮರ, ಕಲ್ಲು ಕಡ್ಡಿಗಳು ಪ್ರತಿ ಕಥೆ ಕೇಳುವಾಗ ಕುತೂಹಲಕ್ಕಾದ್ರು ಒಮ್ಮೆ ಉಪ್ಪಿದಾದ MBBS's ಆನಂದ ಅಣ್ಣನ ತರ " ಮುಂದೇನಾಯ್ತು " ಅಂತ ಕೇಳಬೇಕಿತ್ತು.🥲
    ಕೇಳಿದ್ದಿದ್ರೆ ಇನ್ನಷ್ಟು ರಸವತ್ತಾಗಿ ಇರುತ್ತಿದ್ದು ಓದಿದ ದಿನವೆಲ್ಲಾ.

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

The Stillness Between Two Trees

ಆಲ್ ವಿ ನೀಡ್ ಇಸ್ ಚೇಂಜ್

ಅಪ್ಪ ನೀನ್ಯಾಕೆ ಹೀಗೆ....?