ಪ್ರಮೇಯಾ
ಅಲಾರಮ್ ಆಗಲೇ ನಾಲ್ಕೈದು ಬಾರಿ ಬಾಯ್ ಬಡಿದುಕೊಂಡಿತ್ತು. ಎದ್ದು ಅರಸಿಕೆರೆಯ ಸರ್ಕಾರಿ ಪಿಯು ಕಾಲೇಜಿನ ಮೈದಾನದ ಸುತ್ತಾ ಏಳೆಂಟು ಸುತ್ತು ಹೊಡೆಯುವುದರೊಳಗೆ ಏದುಸಿರು ಬಿಡುವಂತಾಗಿತ್ತು. ಆಗತಾನೆ ಮೈದಾನಕ್ಕೆ ಕಂಪೌಂಡು ಕಾಮಗಾರಿ ನಡೆಯುತ್ತಿದೆ. ಪುಟ್ಟ ಪುಟ್ಟ ಭರ್ಜಿಯಾಕಾರದಲ್ಲಿದ್ದ ಚೂಪಾದ ಕಂಬಿಗಳನ್ನು ಆಗಿನ್ನು ಮಡ್ಡಿಕಲಸಿ ನಿರ್ಮಿಸಿದ್ದ ಗೋಡೆಯ ಹೊಟ್ಟೆ ಬಗೆದು ನೆಡುತ್ತಿದ್ದರು. ಮೈದಾನದ ಗೇಟಿನ ಬಳಿ ಕೆಲವು ಹಿರಿಯ ನಾಗರಿಕರಿಗೆ ಅದ್ಯಾರೋ ತರುಣಿ ವೈದ್ಯರಂತೆ ಬಿಳಿ ಬಟ್ಟೆ ತೊಟ್ಟು ಮೈಕಿಡಿದು ಇದಾವುದೋ ನೀಲಿಕಲರಿನ ಮುಲಾಮು ಹೇಗೆ ಮಂಡಿನೋವನ್ನು ಶಮನಗೊಳಿಸಿತು ಎಂದು ಸವಿವರವಾಗಿ ಕೇಳುತ್ತಿದ್ದಳು. ಪಕ್ಕದಲ್ಲೆ ವೃತ್ತಾಕಾರದಲ್ಲಿದ್ದ ಕಸದ ಸಿಮೆಂಟು ಬ್ಲಾಕ್‌ಗೆ ತುಂಬಾ ದಿನವಾದ್ದರಿಂದಲೋ ಏನೋ ತುಂಬಿಹೋಗಿದ್ದ ಕಸದ ರಾಶಿ ತನ್ನ ಇರುವಿಕೆಯನ್ನು ಸುತ್ತಾ ನೂರಾರು ಮೀಟರ್‌ಗಳವರೆಗೂ ಸಾರಿ ಹೇಳುತ್ತಿತ್ತು.ನೋಡನೋಡುತ್ತಲೆ ಚಂಗನೆ ಅದರ ಮೇಲೆ ಎಗರಿದ ಬೀದಿನಾಯಿಗಳು ಕಪ್ಪುಬಣ್ಣದ ಕವರನ್ನು ಕಚ್ಚಿಕೊಂಡು ರಪರಪನೆ ತಲೆಬಡಿದು ಅದರಲ್ಲಿ ಬೆಚ್ಚಗೆ ಕೂತಿದ್ದ ಡಯಪರುಗಳನ್ನು ಅರೆಕ್ಷಣದಲ್ಲಿ ರಸ್ತೆಯ ತುಂಬೆಲ್ಲಾ ಹರಡಿದವು. ಹರಿದು ಅರೆಜೀವವಾಗಿದ್ದ ಕವರನ್ನು ಹಿಡಿದು ನಾಯಿಯೊಂದು ಮಿನಿ ವಿಧಾನಸೌದದ ಕಡೆ ಓಡಿತು. ಅದರ ಹಿಂದೆ ಕಿಂದರಿಜೋಗಿಯ ಅನುಸರಿಸಿ ಹೊರಟ ಮಕ್ಕಳಹಿಂಡಿನಂತೆ ಉಳಿದ ನಾಯಿಗಳು ಕೂಡ ಹಿಂಬಾಲಿಸಿದವು. ರಸ್ತೆಯ ತುಂಬಾ ಹತ್ತಿ ಉಂಡೆಗಳಂತೆ ಮಕ್ಕಳ ಡಯಪರುಗಳು ಬಿದ್ದಿದ್ದವು. 8:00ಕ್ಕೆಲ್ಲಾ ಸ್ಮಾರ್ಟ್ ವಾಚು ನಿಂತಿದ್ದ ನನ್ನನ್ನು ಕದಲಿಸಿತು.
ಬಸ್ಟಾಂಡಿನ ಒಳಗೆ ಬೈಕು ನಿಲ್ಲಿಸಿ ಟೈಮು ನೋಡಿಕೊಂಡಾಗ ಅದಾಗಲೇ 9:00 ಗಂಟೆಯಾಗಿತ್ತು. ಚಿಕ್ಕಮಗಳೂರಿಗೆ ತುರ್ತಾಗಿ ಹೋಗಬೇಕೆಂದು ಮ್ಯಾನೇಜರು ನೆನ್ನೆಯೇ ಒಲ್ಲದ ಮನಸ್ಸಿನಿಂದ ಫರ್ಮಾನು ಹೊರಡಿಸಿದ್ದರು. ನಾ ಬರುವವರೆಗೂ ನನ್ನ ಅರಸಿ ಬರುವ ಕೆಲಸಗಳು ಶಬರಿಯಂತೆ ನನಗಾಗಿ ಕಾಯುತ್ತಿರುತ್ತವೆ ಅನ್ನೋದು ನನಗೆ ಸಣ್ಣ ಕಿರಿ-ಕಿರಿ. ನನಗೇನು ಚಿಕ್ಕಮಗಳೂರು ಹೊಸದೇನೂ ಅಲ್ಲ ನಮ್ಮ ಪ್ರಾದೇಶಿಕ ಕಛೇರಿ ಅಲ್ಲೆ ಇರುವುದರಿಂದ ತಿಂಗಳಿನಲ್ಲಿ ಒಂದೆರಡು ವಾರ ಅಲ್ಲೆ ಇರೋದು ವಾಡಿಕೆ. ನೇರ ಬಸ್ಸುಗಳು ಕಡಿಮೆ ಇರೋ ಕಾರಣಕ್ಕೆ ಅರಸಿಕೆರೆಯಿಂದ ಕಡೂರಿಗೆ ಹೋಗಿ ಅಲ್ಲಿಂದ ಮತ್ತೊಂದು ಬಸ್ಸಿಡಿದು ಹೋಗಬೇಕಿತ್ತು. ಸ್ಟಾಂಡಿಗೆ ಬಂದಾಗ 9 ರ ಬಸ್ಸು ಇನ್ನೂ ಬಂದಿರಲಿಲ್ಲ. ಈ ಬದಿಯಲ್ಲಿ ಶಿವಮೊಗ್ಗ ಕಡೆಗಿನ ಬಸ್ಸುಗಳಿದ್ದರೆ ಪಕ್ಕದಲ್ಲಿ ಚನ್ನಪಟ್ಟಣ ಗಂಡಸಿ ಕಡೆಗೆ ಅದರ ಪಕ್ಕದ ಹಾಸನದ ಕಡೆಗೆ ಕೊನೆಗೆ ಬೆಂಗಳೂರು ತಿಪಟೂರು ಕಡೆಗೆ. ತಿಪಟೂರು ಸ್ಟಾಂಡಿನಲ್ಲಿ ಮಂಗಳಮುಖಿಯರ ಗುಂಪೊಂದು ಕಂಡಿತು. ಧ್ವನಿ ನನಗೆ ಪರಿಚತವೇನೋ ಅನಿಸಿತು. ಕುತೂಹಲದಿಂದ ಆ ಕಡೆ ನೋಡಿದೆ. ಭಾಜ್ಯ ಅಲ್ಲಿದ್ದರು. ಮಾತಿಗೆ ಅನುವಾಗಲೆಂದು ಭಾಜ್ಯಕ್ಕಳಾಗಿ ಬರಬರುತ್ತಾ ಭಾಗ್ಯಕ್ಕಳಾಗಿ ಹೆಸರು ಬದಲಾಗಿ ತುಂಬಾ ದಿನವಾಗಿತ್ತು.
'ಹೇ ಇಜಿಕೋಳ್ಟು ಹೇಗೋ ಇದ್ದೀಯಾ. ಎರಡ್ಮೂರು ತಿಂಗಳಾಯ್ತಲ್ಲ ನಿನ್ನ ನೋಡಿ. ನೋಡು ಇವರೆಲ್ಲಾ ನಮ್ಮ ಗ್ರೂಪಿನವರು. ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಸಭೆಯಂತೆ, ಬನ್ನಿರೆಂದು ಕರೆಮಾಡಿಮಾಡಿದ್ದರು. ನಮ್ಮವರು ಕೆಲವು ಜನ ಹೋಗ್ತಿದಿವಿ' ಎಂದು ಮುಗುಳ್ನಗುತ್ತಾ ಹೇಳಿದರು. ಭಾಜ್ಯಕ್ಕ ನಂಗೆ ಪ್ರಮೇಯಳಿಂದ ಪರಿಚಯ.ನಾನು 'ಪ್ರಮೇಯಾ ಸಿಕ್ಕಿದ್ದಾಳ ನಿಮಗೆ?? ನೆನ್ನೆ ಬರ್ತಾ ಇದಿನಿ ಅಂತ ಕಾಲ್ ಮಾಡಿದ್ದೆ. ಕಡೂರು ಬಿಟ್ಟಾಗ ಜ್ಞಾಪಿಸು ಅಂದಿದ್ದಳು' ಅಂದೆ. ಪ್ರಮೇಯ ಹೆಸರು ಕೇಳಿ ಸುಮ್ಮನಾದರು. ಏನೋ ಹೇಳೋಕೆ ಪ್ರಯತ್ನಿಸ್ತಿದ್ದಾರೆ ಅನಿಸಿ ನಾನು ಅವರೇ ಹೇಳಲಿ ಅಂದುಕೊಂಡು ಕೇಳುವ ಗೊಡವೆಗೆ ಹೋಗಲಿಲ್ಲ. ಏನೋ ಜ್ಞಾಪಿಸಿಕೊಂಡವರಂತೆ ತಮ್ಮ ತೆಳುಗೋಧಿ ಬಣ್ಣದ ವ್ಯಾನಿಟಿ ಬ್ಯಾಗಿಂದ ಪುಳಿಯೋಗರೆ ಬಾಕ್ಸು ತೆಗೆದುಕೊಡುತ್ತಾ ' ಹದಿನೈದು ದಿನವಾಯ್ತು ನನ್ ಹತ್ರ ಮಾತಾಡಿ. ಕಾಲ್ ಮಾಡಿದ್ರು ರಿಸಿವ್ ಮಾಡಲ್ಲ. ನನ್ನ ಸಂಕಟ ಯಾರ ಬಳಿ ಹೇಳಲಿ. ಸಿಕ್ಕರೆ ಕಾಲ್ ಮಾಡಿ ಕೊಡು. ಮಾತಾಡಬೇಕು' ತುಸು ಹತಾಷೆ ಅವರ ಮಾತಲ್ಲಿತ್ತು. ಅವರು ಕೊಟ್ಟ ಅವಳಿಷ್ಟದ ಪುಳಿಯೊಗರೆ ಬಾಕ್ಸಿನ ಮೇಲೆ "ಅಹರ್ನಿಶಿ ಸ್ವಸಹಾಯ ಸಂಘ ಮಲ್ಲಂದೂರು ರಸ್ತೆ. ಚಿಕ್ಕಮಗಳೂರು" ಅಂತಿದ್ದ ಸ್ಟಿಕ್ಕರು ಪುಲಿಯೋಗರೆಯ ಎಣ್ಣೆಗೆ ತೋಯ್ದುಹೋಗಿತ್ತು. ಪ್ಲಾಸ್ಟಿಕ್ಕು ಬಾಕ್ಸಿನ ತುಂಬಾ ತೆಳುಪ್ಲಾಸ್ಟಿಕ್ಕು ಕವರನ್ನು ಹೀಟರ್ ಸಹಾಯದಿಂದ ಬಹುಶಿಸ್ತಿನಿಂದ ಪ್ಯಾಕು ಮಾಡಿದ್ದರು. ತುಮಕೂರು ಮಾರ್ಗದ ಬಸ್ಸು ಬಂದಾಗ ಮರಿಬೇಡ ಎನ್ನುತ್ತಾ ಭಾಜ್ಯ ಹೊರಟರು.ಕನ್ನಡ ಚಿತ್ರರಂಗದ ರೈಸಿಂಗ್ ಸ್ಟಾರ್ ರೋಹಿತ್ ಅಭಿನಯದ ಅಖಾಡ 2 ಸಿನಿಮಾ ಬ್ಯಾನರ್ ಹಿಡಿದು ಬಸ್ಸುಸ್ಟಾಂಡಿನ ಮುಂಭಾಗದ ಬಿ ಹೆಚ್ ರಸ್ತೆಯಲ್ಲಿ ಮೇಕೆಯೊಂದನ್ನು ಎಳೆದುಕೊಳ್ಳುತ್ತಾ ಅಭಿಮಾನಿಪಡೆ ಥಿಯೇಟರ್ ಕಡೆ ನುಗ್ಗುತ್ತಿತ್ತು.ಮೊದಲ ಭಾಗ 6 ತಿಂಗಳ ಹಿಂದೆ ಬಿಡುಗಡೆಯಾಗಿ ಪ್ರಚಂಡ ಪ್ರದರ್ಶನ ಕಂಡಿತ್ತು. ಪ್ರಮೇಯಾಳ ಬಗ್ಗೆ ನಿಮಗೆ ಹೇಳ್ಬೇಕು.ಹ್ಞಾ! ಇರಿ ಒಂದು ನಿಮಿಷ, ಶಿವಮೊಗ್ಗ ಬಸ್ಸು ಬಂತು. ಹತ್ಕೊಂಡು ಆಮೇಲೆ ಹೇಳ್ತಿನಿ.
ಬಸ್ಸು ನಿಂತ ಅರೆಕ್ಷಣವೇ ಎಂದಿನಂತೆ ಕಂಡಕ್ಟರು ಇಳಿದು ಹೋದರು. ಈ ಬಸ್ಸಲ್ಲಿ ಸೀಟು ಸಿಗೋದು ಒಂದು ಸಾಹಸ. ಅದರಲ್ಲೂ ಕಿಟಕಿ ಪಕ್ಕದ ಸಿಗೋದಕ್ಕೆ ಜೇನುಕಲ್ಲು ಬೆಟ್ಟಕ್ಕೆ ಹರಕೆ ಹೊತ್ತಿರ್ಬೇಕು. ಅದ್ಯಾವುದು ಮಾಡದೇ ಮುಂಪಕ್ತಿಯಲ್ಲಿ ಸೀಟು ಸಿಕ್ಕಿತ್ತು. ಅದೇ ಸ್ಪೀಡಲ್ಲಿ ಹಿಯರ್‌ಫೋನನ್ನು ಕಿವಿಗಳಿಗೆ ಸಿಕ್ಕಿಸಿ ಹಾಡು ಕೇಳುತ್ತಾ ಕೂತೆ. ವೀಕಿನ ಮೊದಲಲ್ಲೆ ವೀಕೆಂಡು(Weeknd) ತನ್ನ ಲಯದಲ್ಲೆ ಹಾಡುತ್ತಿದ್ದ. ಪಕ್ಕದಲ್ಲಿ ಇನ್ನೂ ಯಾರು ಬರದೇ ಇದ್ದುದರಿಂದ ಬ್ಯಾಗನ್ನು ಅಡ್ಡಡ್ಡ ಮಲಗಿಸಿದೆ. ಸ್ವಲ್ಪಹೊತ್ತಿನಲ್ಲೆ ಯಾರೋ ದೂರದಲ್ಲಿ ತಲೆಗೆ ಕುಟ್ಟುವಂತೆ ಶಬ್ದ ಕೇಳಿತು. ಎಡಕ್ಕೆ ನೋಡಿದೆ ಯಾರೋ ಕಿಟಕಿ ಗ್ಲಾಸಿಗೆ ಕೈ ಬೆರಳುಗಳಿಂದ ಬಡಿಯುತ್ತಿದ್ದರು. ಕಿಟಕಿ ಸರಿಸಿ ನೋಡಿದೆ. ಶೇಷಣ್ಣ ಇದ್ದರು. ಅವರು ನಿಂತ ಸಮಕ್ಕೆ ಸರಿಯಾಗಿ ಹಿಂದೆ ಗೋಡೆಯ ತುಂಬಾ ಬಹುದಿನಗಳಿಂದ ಪಾನು ಉಗುಳಿದ್ದ ಅಚ್ಚಳಿಯದ ಕಲೆಯಾಗಿದ್ದವು. ಅವರ ತಲೆಯ ಹಿಂದೆ ನೇರಕ್ಕೆ ಹರಡಿದ ಕಲೆಯು ಒಂದು ರೀತಿಯಲ್ಲು ವೃತ್ತಾಕಾರದ ಪ್ರಭೆಯಾಗಿ ಕಂಡಿತು. ಪಕ್ಕದಲ್ಲಿ ಸೀಟು ಹಿಡಿ ಎಂದು ಸನ್ನೆಮಾಡುತ್ತಾ ದುಡದುಡನೇ ಬಸ್ಸು ಬಾಗಿಲು ಬಗೆದು ಚಕ್ರವ್ಯೂಹ ಭೇದಿಸುವಂತೆ ಸಾಲುಗಟ್ಟಿದ್ದ ಜನರ ಮಧ್ಯದಿಂದ ಬಂದು ಕೂತು ನಿಟ್ಟುಸಿರು ಬಿಟ್ಟರು.
ವೀಕೆಂಡನಿಗೆ ಹಾಡೋದಕ್ಕೆ ಬಿಡುವು ಮಾಡಿಕೊಳ್ಳಪ್ಪ ಅಂತ ಹೇಳಿ ಬ್ಯಾಗಿನ ಬಾಯ್ತೆರೆದು ಹಿಯರ್‌ಫೋನನ್ನು ಅದರೋಳಗೆ ಹಾಕಿದೆ. ಶೇಷಣ್ಣ ಅಂದರೇ ಸ್ವಲ್ಪ ಆತ್ಮಿಯತೆ ಜಾಸ್ತಿ. ಇಬ್ಬರಿಗೂ. ಶೇಷಣ್ಣನನ್ನ ಸಿಡುಕುಮೋರೆಯಲ್ಲಿ ನಾ ನೋಡಿದ್ದೇ ಇಲ್ಲ. ಯಾವಾಗಲು ಮುಗುಳುನಗುತ್ತಾ ಇರ್ತಾರೆ. ಅವರು ಪರಿಚಯ ಆಗಿದ್ದು ಹೇಳಿದರೇ ಈ ಸಣ್ಣಕಥೇಲಿ ಅದೇ ಒಂದು ದೊಡ್ಡ ಕಥೆ ಆಗತ್ತೆ. ಚಿಕ್ಕಮಗಳೂರಿಗೆ ಹೋಗುವ ಬಹುಸಮಯ ನನ್ನ ಜೊತೆನೆ ಬಸ್ಸಿಗೆ ಬರ್ತಿರ್ತಾರೆ. ಬಾಣವಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಲ್ಲಿ ಇತಿಹಾಸ ಬೋಧಿಸುತ್ತಾರೆ. ಇನ್ನೆರಡು ವರ್ಷಗಳಲ್ಲಿ ರಿಟೈರ್‌ಮೆಂಟ್ ಕೂಡ ಇದೆ. ಅದು ಬರೋದರ ಒಳಗೆ ಮದುವೆ ಮಾಡುಸ್ತಿನಿ ಅಂತ ಮಗಳ ಮದುವೆಗೆ ನಾ ಕರೆತಂದಿದ್ದ ನಮ್ಮಪ್ಪ ಅಮ್ಮನ ಮುಂದೆ ಹೇಳಿದ್ದರು.
ಬಸ್ಸು ಅರಸಿಕೆರೆ ದಾಟಿತ್ತು. ನನ್ನ ಮುಂದೆ ಡ್ರೈವರ್ ಎಡಭಾಗದ ವಿರುದ್ಧ ದಿಕ್ಕಿಗೆ ಇದ್ದ ಮೂರು ಸೀಟರ್‌ನಲ್ಲಿ ಒಬ್ಬ ತಾಯಿ ಮುಗುವನ್ನು ತೊಡೆ ಮೇಲೆ ಕೂರಿಸಿಕೊಂಡು ಕೂತಿದ್ದರು. ವಯಸ್ಸಾದ ದಂಪತಿಗಳು ಪಕ್ಕದಲ್ಲಿ ಆಸೀನರಾಗಿದ್ದರು. ಬಸ್ಸು ಸಾಗ್ತಾ ಇದ್ರೆ ಈ ಗೇರು ಕಡ್ಡಿ, ನಭಕ್ಕೇರಿದ ಗಾಳಿಪಟದ ಬಾಲಂಗೋಚಿಯಂತೆ ಅಲ್ಲಾಡುವುದು ವಿನಾಕಾರಣ ನನ್ನಲ್ಲಿ ಸಣ್ಣಭಯ ಹುಟ್ಟಿಸುತ್ತದೆ. ಹಂಪನ್ನು ಏರಿಳಿಸುವಾಗ ಅದು ಚಿಮ್ಮುತ್ತಾ ಎಗರಿ ಬಿದ್ದು ಏನಾದರೂ ಅಲ್ಲೊಲ ಕಲ್ಲೊಲ ಆಗಬಹುದೆಂದೂ ಊಹಿಸಿ ಸಣ್ಣಗೆ ಕಂಪಿಸುತ್ತೇನೆ. ಅಡ್ಡದಿಡ್ಡಿ ಎದುರು ಬದಿಯಿಂದ ಬರುವ ಕಾರು ಬೈಕು ಆಟೋ ಕೊನೆಗೆ ಕೆಎಸ್ಸಾರ್ಟಿಸಿ ಬಸ್ಸಿನ ಡ್ರೈವರುಗಳಿಗು ನಮ್ಮ ಬಸ್ಸಿನ ಡ್ರೈವರು ತನ್ನದೆ ಲಯದಲ್ಲಿ ಬಯ್ಯುತ್ತಾ ಸ್ಟೇರಿಂಗ್ ಸೊಂಟ ಬಳಸಿ ಚಲಾಯಿಸುತ್ತಿದ್ದರು.
ಬಸ್ಸು ಜರ್ನಿ ಅಂದರೆ ನನಗೊಂತರ ಸಹ್ಯ ಅನುಭವ. ಬೆಳ್ಳಂಬೆಳಗ್ಗೆ ಗೂಡಿಂದ ರೆಕ್ಕೆಬಲಿತು ಹೊರಹೋಗೋ ಒಂದೊಂದೆ ಹಕ್ಕಿಗಳಂತೆ ಬಸ್ಸುಗಳು ಬಸ್ಸುಸ್ಟಾಂಡಿನಿಂದ ಹೊರಹೋಗುತ್ತಿರುತ್ತವೆ. ಸ್ಪರ್ಧೆಗೆ ಬಿದ್ದವರಂತೆ ಸ್ಟಾಪಿನಿಂದ ಹತ್ತಡಿ ದೂರದಲ್ಲಿ ನಿಲ್ಲೋ ಬಸ್ಸನ್ನು ಏರುವ ಓಡುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅಟೆಂಡನ್ಸ್ ಹೊತ್ತಾಯಿತು ಅಂದುಕೊಳ್ಳುವ ವೃತ್ತಿನಿರತರು ಮಾರುಕಟ್ಟೆಯಿಂದ ಸಗಟುದರದಲ್ಲಿ ತರಕಾರಿ, ಬಟ್ಟೆಗಳು, ವಾಹನದ ಬಿಡಿಭಾಗಗಳು, ಕಚ್ಛಾಪದಾರ್ಥ ಖರೀದಿಸೋ ವ್ಯಾಪಾರಿಗಳು. ದೇಶದ ಆರ್ಥಿಕತೆಯ ವಿವಿಧ ಸ್ತರಗಳು ರೂಪುಗೊಳ್ಳೋದು ನಮ್ಮ ನಿಮ್ಮಗಳ ನಡುವೆ ಅವ್ಯಕ್ತವಾಗಿ ಬೆಸೆದುಹೋಗಿರೋ ಇವರೆಲ್ಲರುಗಳಿಂದ. ತಿಂಡಿ ಮಾಡುತ್ತಾ ಕೂತರೆ ಟೈಮಾಗೋಗತ್ತೆ ಅಂದುಕೊಂಡು ಬಸ್ಸಲ್ಲೇ ಉಪಹಾರ ಕರ್ತವ್ಯ ಮಾಡುವವರ ಸಂಖ್ಯೆಯೇನು ಕಡಿಮೆಯಿಲ್ಲ. ಆಗಾಗ್ಗೆ ಹರಡೋ ಪುಳಿಯೋಗರೆ ಚಿತ್ರಾನ್ನಾ ಪಲಾವು ಕಾಯಿ ಚಟ್ನಿ ಕಂಪು ನನ್ನನ್ನು ಪುಳಕಿತಗೊಳಿಸುತ್ತದೆ. ಎಂತ ಪ್ರಚಂಡ ಮಂಡೆ ಬ್ಲೂಗಳನ್ನು ಒದ್ದು ಓಡಿಸುವ ಮಾಂತ್ರಿಕಶಕ್ತಿ ಇವುಗಳಿಗಿದೆ ಎಂದು ನಾ ನಂಬಿದ್ದೇನೆ. ಬೆಟ್ಟದಂತಹ ಬ್ಯಾಗು ಬೆನ್ನಿಗೇರಿಸಿಕೊಂಡು ಸೀಟಿನ ಎರಡೂ ಬದಿಗೆ ಕೂತವರಿಗೆ ತಾಗಿಸುತ್ತ ಹೋಗೋ ಚಿಣ್ಣರು ಅವರ ಲ್ಯಾಮಿನೇಟಾದ ಅಂಗೈಯಗಲ ಪಾಸು ಬೃಹತ್ ಬ್ಯಾಗಿನ ಎದೆಯ ಮೇಲಿನ ಸಣ್ಣ ಜಿಪ್ಪಿನಲ್ಲಿ ಅವಿತು ಕಂಡಕ್ಟರು ಬೇಡಿದಾಗ ಹೊರಬಂದು ಇಣುಕಿ ಮತ್ತೆ ತನ್ನ ಸ್ವಸ್ಥಾನ ಸೇರುತ್ತದೆ. ಅದು ಅಷ್ಟೆ ಸ್ಕೂಲು ಮಕ್ಕಳಷ್ಟೆ ವಿಧೇಯ ವಿದ್ಯಾರ್ಥಿ.
ಬಸ್ಸು ಬಾಣಾವಾರ ತಲುಪಿತ್ತು. ಅರಸಿಕೆರೆಯಿಂದ ಕೇವಲ ೧೫ ಕಿಲೋಮೀಟರ್ ದೂರ, ಒಮ್ಮೊಮ್ಮೆ ಇಲ್ಲಿ ತಿಂಡಿಗೆ ಬಸ್ಸುನಿಲ್ಲಿಸಿ ಲೇಟಾಯಿತೆನಿಸಿದರೆ ಮತ್ತೊಂದು ಬಸ್ಸಿಡಿದು ನೇರಾ ಹೋಗುತ್ತಿರುತ್ತೇನೆ ಅದು ಕಡೂರು ತಲುಪದೆ ಚಿಕ್ಕಮಗಳೂರಿಗೆ ಸಾಗುತ್ತದೆ. ಶೇಷಣ್ಣ ಬಸ್ಸು ಇಳಿದು ಹೋದರು. ಬಸ್ಸು ಕಡೂರು ತಲುಪಿದಾಗ ಪ್ರಮೇಯಾಳಿಗೆ ಮೆಸೇಜು ಎಸೆದು ಚಿಕ್ಕಮಗಳೂರು ಬಸ್ಸು ಹತ್ತಿದೆ. ಅದು ತುಂಬಿ ತುಳುಕುತ್ತಿತ್ತು. ಕಾಫಿ ಮ್ಯೂಸಿಯಮ್ ಬಳಿ ಹೋದಾಗ ಕಾಲು ಮಾಡಿದರಾಯಿತು ಅಂದು ಕೊಂಡು ಕಂಡಕ್ಟರ್ ಕೊಟ್ಟ ಟಿಕೇಟು ನೋಡಿಕೊಂಡೆ ಚಿಕ್ಕಮಂಗಳೂರು ಅಂತ ಬರೆದಿತ್ತು. ಮೊದಮೊದಲು ಚಿಕ್ಕಮಗಳೂರು ಅನ್ನದೆ ಇದ್ದುದಕ್ಕೆ ಅವಳೇ ತುಂಬಾ ತಿದ್ದಿ ಹೆಸರು ಸರಿ ಹೇಳೋ ಹಾಗೆ ಮಾಡಿದ್ದಳು. ವಾಚು ನೋಡಿಕೊಂಡೆ ಆ ಡಿಜಿಟಲ್ ವಾಚು 9-8-7 ಎಂದು ಎಣಿಕೆ ಶುರುಮಾಡಿತು. ಬಸ್ಟಾಂಡಿನಲ್ಲಿ ನೇತು ಹಾಕಿದ್ದ ಗಡಿಯಾರ ವಿರುದ್ಧ ದಿಕ್ಕಿನಲ್ಲಿ ಚಲಿಸತೊಡಗಿತು. ಬಸ್ಸಿನ ಚಕ್ರಗಳು ಕಳಚಿ ದಿಗ್ಗನೆ ಸಮಯದೊಟ್ಟಿಗೆ ಹಿಮ್ಮುಖವಾಗಿ ಓಡತೋಡಗಿದವು.
**
ಅವತ್ತು ಆಗಲೇ 10:30 ಆಗಿತ್ತು ಚಿಕ್ಕಮಗಳೂರಿನ ಆರ್.ಜಿ ರಸ್ತೆಯ ಅಂಚಿಗೆ ಇದ್ದ ಟೌನ್ ಕ್ಯಾಂಟಿನ ಒಳ ಹೊಕ್ಕೆ. ಸದಾ ಗಿಜಿಗುಡುತ್ತಿದ್ದ ಹೋಟೇಲ್ ತಿಂಡಿ ಅವಧಿ ಮುಗಿಯುತ್ತಾ ಬಂದಂತೆ ಜನರೂ ಕರಗುತ್ತಿದ್ದರು. ಬೆಳಗ್ಗೆಯಿಂದ ಬ್ಯುಸಿ ಇದ್ದ ಕಾರಣಕ್ಕೋ ಏನೋ "ಇಂದಿನ ಸ್ಪೆಷಲ್" ಬೋರ್ಡು ಖಾಲಿ ಹಣೆ ಪಟ್ಟಿ ಕಟ್ಟುಕೊಂಡಿತ್ತು.
ಪ್ರವೇಶ ದ್ವಾರದ ಎಡಕ್ಕೆ ಎರಡು ಎದೆಮಟ್ಟಕ್ಕೆನಿಂತ ಅಲ್ಯೂಮಿನಿಮ್ ಟೇಬಲ್ಲುಗಳು. ಅವಸರಕ್ಕೆ ಹೋರಡುವವರು ತಾವು ಆರ್ಡರು ಮಾಡಿದ್ದ ತಿನಿಸುಗಳನ್ನು ಎಡ ಮೊಣಕೈ ಊರಿ ತಿನ್ನುತ್ತಾ ಹೊರಟು ಹೋಗುತ್ತಿದ್ದರು. ಸಾವಕಾಶವಾಗಿ ತಿನ್ನಬಯಸುವವರು , ಫ್ಯಾಮಿಲಿಯೊಟ್ಟಿಗೆ ಬಂದವರು ಸರ್ವಿಸ್ ವಿಭಾಗದಲ್ಲಿ ಕುಳಿತು ಆರ್ಡರ್ ಕೊಟ್ಟದ್ದು ಬರಲಿಲ್ಲ ಎನ್ನುತ್ತಾ ವೇಟರ್ ಬರುವಿಕೆಗೆ ಕಾಯುತ್ತಾ ಇದ್ದರು. ಕ್ರಂಚಿಯಾದ ಮಸಾಲೆದೋಸೆಯನ್ನು ಕೌದಿಯಂತೆ ಹೊದ್ದು ಬೆಚ್ಚಗೆ ಕೂತ ಆಲೂಗಡ್ಡೆ ಪಲ್ಯ, ಖಾರ-ಸಿಹಿಯೆನ್ನದೇ ಜೋತೆಯಾಗಿಯೇ ಇರೋ ಚೌಚೌಬಾತು,ತ್ರಿವಳಿ ಸೆಟ್ಟು ದೋಸೆ, ಇವೆಲ್ಲಾ ಇಲ್ಲಿ ಖಾಯಂ ಸದಸ್ಯರು. ಇದು ನನ್ನ ಫೇವರಿಟ್ ಹೋಟೆಲ್ಲು ಒಂದು ಉದ್ದಿನೊಡೆ ಎರಡು ಗುಂಡು ಇಡ್ಲಿ ಹೊಡೆದು ಸ್ಟ್ರಾಂಗು ಡಿಕಾಕ್ಷನ್ನು ಹಾಕಿಸಿ ಕಾಫಿ ಕುಡಿದೆನಂದರೆ ದಿನ ಅದ್ಭುತವಾಗಿ ಶುರುವಾದಂತೆ.
ಒಳಹೋದ ನಂತರ ಖಾಲಿ ಜಾಗ ಇದೆಯಾ ಎಂದು ನೋಡುತ್ತಿದ್ದೆ. ಯಾರೋ ಕರೆದಂತೆ ಭಾಸವಾಯ್ತು
"ಹಲೋ ಇಲ್ಕೇಳಿ"
"ನಾನಾ??" ತಿರುಗಿ ನೋಡಿದೆ
"ಚಟ್ನಿ ಖಾಲಿ ಆಗಿದೆ. ಒಂದು ಕಪ್ ಚಟ್ನಿ ತಂದುಕೊಡಿ"
ಮೂಲೆ ಟೇಬಲಿನಲಿ ಕೂತಿದ್ದ ಹುಡುಗಿ ಕೈ ಮೇಲಿತ್ತಿ ನನಗೆ ಅಂದಳು. ಅವಳು ಹಾಕಿದ್ದ ಕೆಂಪು ಕಲರಿನ ಕುರ್ತಿ ಬಿಳಿ ಬಣ್ಣದ ಹೂ ಚಿತ್ರಗಳಿಂದ ತುಂಬಿತ್ತು. ಗಾಢನೀಲಿಬಣ್ಣದ ಜೀನ್ಸ್ ತೊಟ್ಟಿದ್ದ ಅವಳು ಅವರೇಜಿಗಿಂತ ತುಸು ಚನ್ನಾಗೆ ಇದ್ದಳು. ಹಣೆಯಲ್ಲಿ ಕಂಡೂ ಕಾಣದಷ್ಟು ಸಣ್ಣದಾಗಿ ಕಪ್ಪು ಕಲರಿನ ಬೊಟ್ಟನ್ನು ಇಟ್ಟಿದ್ದಳು. ಈ ಒಲಂಪಿಕ್ಕಿನಲ್ಲಿ ಎಲ್ಲಾ ಸ್ಪರ್ಧೆಗಳ ಹಾಗೆ ಈ ಹೆಣ್ ಹೈಕಳು ಇಡುವ ಬೋಟ್ಟು ಕಂಡುಹಿಡಿಯೋ ಸ್ಪರ್ಧೆ ಇಡ್ಬೇಕು ಮೊದಲು. ಇಷ್ಟೆಲ್ಲಾ ಯೋಚನೆಗಳ ಮಧ್ಯೆ ಇವಳ್ಯಾರು ಗುರು ಇಷ್ಟು ಚೆಂದ ಡ್ರೆಸ್ಸು ಮಾಡಿಕೊಂಡು ಟಕ್ಕಿನ್ನು ಮಾಡಿ ಕ್ರಾಪು ತೆಗೆದು ಬಂದಿರೋ ನನಗೆ ಹೋಟೆಲು ಕೆಲಸ ಮಾಡು ಅಂತಾಳೆ ಅನ್ನಿಸಿತು. ನಂಗೆ ತುಸು ಕೋಪ ಏರಿತು. ಇರಲಿ ಸರಿಯಾಗಿ ಇವಳಿಗೆ ಜಾಡಿಸೋಣ ಅನ್ನಿಸಿ ಸರ್ವಿಂಗ್ ಏರಿಯಾದಲ್ಲಿದ್ದ ಚಟ್ನಿಕಪ್ಪುಗಳ ರಾಶಿಯಿಂದ ಒಂದು ತಂದು ಅವಳ ಮುಂದೆ ಇಟ್ಟೆ.
"ಇಲ್ನೋಡಿ..." ನಾ ಶುರುಮಾಡುವ ಹೊತ್ತಿಗೆ ನನ್ನ ಹಿಂದೆ ಇಂದ ವೇಟರ್ ಒಬ್ಬ ಮತ್ತೊಂದು ಕಪ್ಪಿನಲ್ಲಿ ತಂದು ಅವಳ ಮುಂದೆ ಇಟ್ಟು ನನ್ನ ನೋಡುತ್ತಾ ಹೊರಟುಹೋದ. ಇಷ್ಟೆಲ್ಲಾ ಯೋಚನೆಯಲ್ಲಿ ಮುಳುಗಿದ್ದ ನನಗೆ ನನ್ನ ಹಿಂದೆ ಇದ್ದವ ನನ್ನ ಗಮನಕ್ಕೆ ಬಂದಿರಲಿಲ್ಲ. ನಾನು ಪೆಚ್ಚಾಗಿ ಏನು ಮಾಡಬೇಕೆಂದು ತಿಳಿಯದೇ ವಾಪಸ್ಸು ಹೋಗುವಷ್ಟರಲ್ಲಿ ಅವಳು ಕುಳಿತುಕೊಳ್ಳಿ ಅಂದಳು. ಅವಳಿಗೆ ಇದೆಲ್ಲಾ ಅರ್ಥವಾಗಿತ್ತು.
ವೇಟರ್ ಕರೆದು ಅವಳೇ "ಎಕ್ಷ್ಟ್ರಾ ಚಟ್ನಿ ವೇಸ್ಟ್ ಆಗೋದು ಬೇಡ ಒಂದು ಉದ್ದಿನೊಡೆ ಕೊಡಿ ರಾಜಣ್ಣ ಇವರಿಗೆ" ಅಂದಳು. ಅರೆನಿಮಿಷದಲ್ಲೆ ನನ್ನ ಮುಂದೆ ಪ್ರತ್ಯಕ್ಷವಾದ ವಡೆಗೆ ನಾ ಹೆಚ್ಚು ಸಮಯ ಕೊಡುವ ಗೊಡವೆಗೆ ಹೋಗಲಿಲ್ಲ. ಅವಳೇ ಮತ್ತೆ ಮಾತು ಶುರು ಮಾಡಲಿ ಅಂತ ಸುಮ್ಮನಿದ್ದೆ..
"ಸಾರಿ..ನಿಮಗೆ ಹೇಳ್ದೆ ಅನ್ಕೊಂಡು ಬೇಜಾರ್ ಆದ್ರಾ??" ಕಾಳಜಿಪೂರ್ವಕವಾಗಿ ಕೇಳಿದಳು.
"ನನಗೆ ಅನ್ಕೊಂಡು ಸ್ವಲ್ಪ ಬೇಜಾರಾಯ್ತು. ನನ್ನನ್ನೇ ಈ ಹೋಟೆಲ್ ಕೆಲಸದವನು ಅನ್ಕೊಂಡ್ರೆ ಕೋಪ ಬರೋಲ್ವ ಹೇಳಿ" ನಾನು ಕೊಂಚ ತಣ್ಣಗಾಗಿದ್ದೆ ಅಥವಾ ಉದ್ದಿನೊಡೆ ತಣ್ಣಗಾಗುವಂತೆ ಮಾಡಿತ್ತು.
"ನಿಮಗೆ ಕೋಪ ಬಂತು ಅಂತ ಗೊತ್ತಾಯ್ತು. ಅಂದಹಾಗೆ ಹೋಟೆಲಲ್ಲಿ ಕೆಲಸ ಮಾಡೋದು ಸಪ್ಲೈಯರ್ ಕೆಲಸ ಮಾಡೋದು ಕಡಿಮೆ ಘನತೆಯ ಕೆಲಸ ಅಂತೇನೂ ಅಲ್ಲ. ಎಲ್ಲಾ ಎಲ್ಲಾ ಕೆಲಸಗಳಿಗೆ ಅದರದ್ದೆ ಆದ ಗೌರವ ಇರತ್ತೆ. ಅನ್ನ ಹಾಕೋ ಕೈಗಳೆಂದ್ರೆ ಕಡಿಮೆ ಕೆಲಸ ಅಂತ ನಂಗೆ ಯಾವತ್ತು ಅನಿಸಿಲ್ಲ" ಎಂದು ಒಂದೇ ಉಸಿರಲ್ಲೆ ಹೇಳಿದಳು.
ನನ್ನ ಈಗೋ ಅನ್ನೋ ಹುಸಿಬೆಟ್ಟಕ್ಕೆ ಸರಿಯಾದ ಉಳಿ ಪೆಟ್ಟನ್ನೇ ಕೊಟ್ಟಿದ್ದಳು. ಅದು ಕುಸಿದು ಸಾವಿರ ಹೋಳಾಗಿತ್ತು. ಅವಳು ಹೇಳಿದ್ದು ನನಗೂ ಸರಿ ಅನ್ನಿಸಿತು. ಅವಳು ನಂಗೆ ಕೆಲಸ ಹೇಳಿದಳು ಅನ್ನೋದಕಿಂತ ನನ್ನನೇ ಕೆಲಸದವನು ಅಂದಿದ್ದು ತುಸು ಕೋಪ ತರಿಸಿತ್ತು.
ನನಗಿಂತ ಮುಂಚೆ ಬಿಲ್ಲು ಕೌಂಟರಿಗೆ ಹೋಗಿ ಅವಳೆ ಬಿಲ್ಲು ಕೊಟ್ಟಳು. ನಾನು ಜೇಬನ್ನು ತಡಕಾಡುತ್ತಿದ್ದೆ. ಇರಲಿ ಬಿಡಿ ಎಂದು ಸಂಜ್ಞೆ ಮಾಡುತ್ತಾ ಒಂದೈದು ಹೆಜ್ಜೆ ಮುಂದಡಿ ಇಡುವಾಗ. ನಂಗೆ ಏನು ಹೇಳಬೇಕು ಅಂತ ಗೊತ್ತಾಗದೆ ."ಹಲೋ..ಇವ್ರೇ ನೆಕ್ಸ್ಟ್ ಟೈಮು ನಾನೆ ಕೊಡ್ತಿನಿ" ಅಂದೆ. ಅವಳು ಹಿಂತಿರುಗಿ ನೋಡಿ ಮುಗುಳ್ನಕ್ಕು ಮರೆಯಾದಳು. ಕ್ಯಾಷು ಕೌಂಟರಿನಲ್ಲಿದ್ದ ವಯಸ್ಸಾದ ಹಿರಿಯರು ಕಣ್ಣ ಕೆಳಗೆ ಜಾರಿದ್ದ ಕನ್ನಡಕದ ಮೇಲಿಂದ ನನ್ನನ್ನೇ ನೋಡುತ್ತಿದ್ದರು.
ಮಾರನೇ ದಿನ ಅದೇ ಟೈಮಿಗೆ ನಾ ಹೋದಾಗ ಅವಳು ಇರುತ್ತಾಳೆ ಎಂಬ ನಂಬಿಕೆ ನನಗಿರಲಿಲ್ಲ. ಮತ್ತೆ ಸಿಗಬಹುದು ಎಂಬ ಸಣ್ಣ ಹುಕಿಯಂತೂ ಬಲವಾಗಿ ಇತ್ತು. ವಾರವಾಗುತ್ತಾ ನೆನಪು ಮಾಸುತ್ತಾ ಅದಾಗಲೇ ಇದು ಒಂದು ಕನಸು ಅಂದುಕೊಂಡು ಮರೆತುಬಿಡುವ ದಾರಿಯಂತು ನನ್ನ ಕಣ್ಣ ಮುಂದೆ ಸ್ಪಷ್ಟವಾಗಿ ಕಾಣತೊಡಗಿತು.
ಅವತ್ತು ಮಂಗಳವಾರ ಬಸ್ಸಿಳಿದು ಹೊಸಮನೆ ಎಕ್ಸ್ಟೆಂಶನ್ ಬ್ರಾಂಚಿಗೆ ಸಾವಕಾಶವಾಗಿ ನಡೆದು ಹೋಗ್ತಿದ್ದೆ. ಅದೇ ಮೋದಲಬಾರಿ ಭಾಜ್ಯರನ್ನು ನೋಡಿದ್ದು ಅಂದು ನಾನು ಹೋಟೆಲ್ಲಿನಲ್ಲಿ ಕಂಡವಳ ಜೊತೆಯಲ್ಲಿ. ಅವಳೂ ನನ್ನ ನೋಡಿ ಮುಗುಳ್ನಕ್ಕು ಮಾತುಕತೆಗೆ ಮುನ್ನುಡಿ ಬರೆದಳು. ಭಾಜ್ಯ 'ಸರಿ ಕಣೆ ನಾ ಹೊರಡ್ತಿನಿ' ಎನ್ನುತ್ತಾ ಎರಡೂ ಕೈಯಲ್ಲಿ ಪ್ರಮೇಯಾಳ ಮುಖದಿಂದ ನೆಟಿಕೆ ತೆಗೆದು ಹೊರಟರು.
'ನೀವೇನು ಮಾಡ್ಕೊಂಡಿದ್ದೀರಾ. ನಿಮ್ ನೇಮು..??'
'ನೀವು..??'
'ಇಜಿಕೊಳ್ಟು. ನಾನು ಬ್ಯಾಂಕಲ್ಲಿ ಕೆಲಸ. ಓದಿದ್ದು ಬಿಕಾಂ '
'ನಾನು ಪ್ರಮೇಯಾ. ಸಿ.ಎ. ಇಂಟರ್ನಶಿಪ್ ಮಾಡ್ತಿದ್ದೇನೆ'
ಏನೋ ಜ್ಞಾಪಿಸಿಕೊಂಡವಳಂತೆ 'ನಿಮ್ಮ ನಂಬರ್ ಕೊಡಿ' ಎಂದು ನಗುತ್ತಲೇ ಕೇಳಿದಳು. ಇದೇನಿದು ಪೀಠಿಕೆನೇ ಶುರು ಆಗಿಲ್ಲಾ ಆಗಲೇ ಉಪಸಂಹಾರ ಹಾಕ್ತಿದಳಲ್ಲ ಅನ್ನಿಸಿತು. ಎಲ್ಲೋ ಏನೋ ಮಿಸ್ ಹೊಡಿತಿದೆ ಅನಿಸಿ ನಂಬರ್ ಕೊಡುತ್ತಾ ಯಾಕೆ ಅಂದೆ. ಅವಳು 'ಲೋನ್ ಏನು ಕೇಳೋದಿಲ್ಲ ಯೋಚನೆ ಮಾಡ್ಬೇಡಿ' ಎಂದು ಮತ್ತದೆ ನಗು ಸೂಸುತ್ತಾ ಎಲ್ಲೋ ತುರ್ತಾಗಿ ಹೋಗಬೇಕೆಂದು ಅಕ್ಟಿವಾದಲ್ಲಿ ಬಂದ ಯಾರೊಟ್ಟಿಗೋ ಹೊರಟಳು. ಮಿಂಚಿನಂತೆ ನಡೆದುಹೋದ ಇದೆಲ್ಲದರಿಂದ ಸುಧಾರಿಸಿಕೊಳ್ಳೋಕೆ ಆಫಿಸು ಕೆಲಸದಲ್ಲಿ ತೊಡಗಿಕೊಳ್ಳಬೇಕಾಯ್ತು. ಅವತ್ತು ಅವಳ ಜೊತೆ ಇದ್ದಿದ್ದು ಅವಳಣ್ಣನೋ ತಮ್ಮನೋ ಅಥವಾ ಬಾಯ್ ಫ್ರೆಂಡೋ ನಂಗೆ ಸಿಕ್ಕಿ ಅವಳೇನಾಗಬೇಕೆಂದು ಕೇಳಿದರೆ ಏನು ಹೇಳೋದು ಎನಿಸಿ ಕೊಂಚ ಅಲೋಚನೆಯಲ್ಲಿದ್ದೆ. ನೋಡಿದಾಕ್ಷಣ ಲವ್ವಾಗಿ ತಕ್ಷಣವೇ ನಂಬರು ಕೇಳೋಕೆ ನಾನ್ಯಾವ ಮಾಸ್ಟರ್ ಪೀಸು. “Romance is the privilege of the rich, not the profession of The Unemployed Me.”
ಎರಡು ಮೂರು ದಿನವಾದರೂ ಅವಳಿಂದ ಕಾಲು ಬರಲಿಲ್ಲ. ಒಳ್ಳೆದೇ ಆಯಿತು ಅಂದುಕೊಂಡೆ. ಆ ಸಂದರ್ಭದಲ್ಲಿ ಅವಳ ನಂಬರನ್ನು ನಾನು ಪಡೆಯೋದು ಮರೆತು ಬಿಟ್ಟಿದ್ದೆ. ಇದ್ದಕ್ಕಿದ್ದಂತೆ ಆಫೀಸು ಟೈಮಲ್ಲೆ ಅನಾಮಿಕ ನಂಬರಿಂದ ಕಾಲು ಬಂತು. ಅವತ್ತು ಗುರುವಾರ. ಪ್ರಮೇಯಾ ಮಾತಾಡುತ್ತಿದ್ದಳು. ಅವಳ ಯಾವುದೋ ಅರ್ಜೆಂಟು ಕೆಲಸದಲ್ಲಿದ್ದಳು ಅನಿಸುತ್ತಿತ್ತು. ’ ಈ ವಿಕೆಂಡು ಏನಾದರೂ ಕೆಲಸ ಇದೆಯಾ’ ’ಅ.... ಇಲ್ಲ ಫ್ರಿ ಇರ್ತಿನಿ ಯಾಕೆ” ಪ್ರಶ್ನಾರ್ಥಕವಾಗಿ ಕೇಳಿದೆ. ’ಹೇಳ್ತಿನಿ ಬೇರೆ ಏನೂ ಪ್ಲಾನು ಇಟ್ಕೋಬೇಡಿ’ ಎನ್ನುತ್ತಾ ಕರೆ ತುಂಡರಿಸಿದಳು. ಈ ನಂಬರ್ ಸೇವ್ ಮಾಡ್ಕೊಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲೇ ಸುಮ್ಮನಾದೆ. ಡೇಟು ಗೀಟು ಅಂತೆಲ್ಲಾ ಹೊರಡೋಣ ಅಂದರೆ ಆದಕ್ಕೆಲ್ಲಾ ಸ್ವಲ್ಪವಾದರು ರೆಡಿಯಾಗಬೇಕು. ಛೇ ಈ ತರ ದುಷ್ಟ ಆಲೋಚನೆಗಳು ಯಾಕೆ ಬರ್ತಾವಪ್ಪ ಅನಿಸಿ ಒಂದೆರದು ಕ್ಯಾಷುವಲ್ ಅಂಗಿಗಳನ್ನು ಕೊಂಡೆ.
ಮರುದಿನ ಅದೇ ನಂಬರಿಂದ ಕರೆ ಬಂದಿತ್ತು. ಟಿ ಎಮ್ ಎಸ್ಸು ಕಾಲೇಜಲ್ಲಿ ಶನಿವಾರ ಅಂಧವಿದ್ಯಾರ್ಥಿಯೊಬ್ಬಳಿಗೆ ಸ್ಕ್ರೈಬಾಗಿ ಬರಲು ಸಾಧ್ಯವಾಗುತ್ತದ ಎಂದು ಅವಳು ಕೇಳಿಕೊಂಡಿದ್ದಳು. ಈ ರೀತಿ ಪರೀಕ್ಷೆಗಳಿಗೆ ಸ್ಕ್ರೈಬಾಗಿ ಹೋಗೋದು ನನಗೇನು ಹೊಸದಲ್ಲ ತುಮಕೂರು ಎಂಪ್ರೆಸ್ಸು ಕಾಲೇಜಲ್ಲಿ ರಾಜ್ಯ ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ಟೈಮಲ್ಲಿ ಒಂದೆರಡು ಬಾರಿ ಹೋಗಿ ನಂಗೆ ಅನುಭವವಿತ್ತು. ಬರಬೇಕಾದವರು ತುರ್ತು ಕಾರ್ಯನಿಮಿತ್ತಾ ಬರಲಾಗದಿದ್ದಕ್ಕೆ ಪ್ರಮೇಯಾ ನನ್ನಲ್ಲಿ ವಿನಮ್ರವಾಗೆ ಕೇಳಿದ್ದಳು. ಪರೀಕ್ಷೆ ಮುಗಿದಮೇಲೆ ಮರೆಯದೆ ಕರೆಮಾಡಬೇಕೆಂದು ಹೇಳಿದ್ದಳು. ಪರೀಕ್ಷೆ ಮುಗಿಸಿ ಹೊರಬಂದಾಗ ಆಗಲೇ 4:30 ಆಗಿತ್ತು. ಇನ್ನೆನು ಕರೆಮಾಡೋದು ಅಂದುಕೊಳ್ಳುವಾಗ ಕ್ಯಾಂಟಿನಿನಲ್ಲಿ ಇರೋದಾಗಿಯೊ ಕಾಯುತ್ತಿರುವುದಾಗಿಯೂ ಅವಳೆ ಕರೆಮಾಡಿ ಹೇಳಿದಳು. ಅವಳು ಅದೇ ಜಾಗದಲ್ಲಿ ಕೂತಿದ್ಲು ಇವತ್ತು ಇನ್ನೊಂದು ಅಭ್ಯರ್ಥಿಗೆ ಸ್ಕ್ರೈಬಾಗಿ ಹೋಗಿ ಬಂದಿದ್ದಳು. ಏಕತಾನತೆಯ ಕೆಲಸಗಳ ಮಧ್ಯೆ ಇಂತಹ ಕೆಲಸಗಳು ನಮ್ಮ ದಿನಚರಿಯನ್ನು ಸಹ್ಯವಾಗಿಸೋಕೆ ಇಂಬು ನೀಡುತ್ತವೆ. ಥ್ಯಾಂಕ್ಸ್ ಗಳ ಫಾರ್ಮಲಿಟಿ ಮುಗಿದ ಮೇಲೆ ಕಾಫಿ ಬಿಲ್ಲು ನಾನೆ ಕೊಟ್ಟೆ. ಹೊಸದಾಗಿ ಕೊಂಡ ಶರ್ಟು ತನ್ನ ಅಸ್ಥಿತ್ವದ ಸಾರ್ಥಕತೆ ಪಿಸುಗುಡುತ್ತ ನಸುನಕ್ಕಿತು.
ಎಣಿಕೆ ತಪ್ಪುವಷ್ಟು ಭೇಟಿಗಳಾದವು. ಔಪಚಾರಿಕತೆಯ ಪರದೆ ನಮ್ಮನ್ನು ಬಿಟ್ಟು ತುಂಬಾ ದಿನಗಳಾಗಿತ್ತು. ಒಣಪ್ರತಿಷ್ಠೆ, ಒಬ್ಬರನ್ನೋಬ್ಬರು ಮೆಚ್ಚಿಸಬೇಕೆಂಬ ಹಪಾಹಪಿ, ತೋರಿಕೆಯ ಸುಖ, ಇವೆಲ್ಲಾ ನಮ್ಮ ಮಧ್ಯೆ ಬಂದೆ ಇಲ್ಲ. ಚಿಕ್ಕಮಂಗಳೂರು ಅಂತ ಮಿಸ್ಸಾಗಿ ಅಂದರೆ ಅವಳಿಗೆ ತುಸು ಸಿಟ್ಟೇ ಅನ್ನಬಹುದು. ಅವಳಿಗೆ ಸಿಟ್ಟುಬರುವ ಇನ್ನೊಂದು ವಿಷಯ ಅಂದ್ರೆ ಅವಳಪ್ಪನ ಬಗ್ಗೆ ಹೇಳಬೇಕಾದಾಗ. ತಾಯಿ ಸತ್ತಾಗ ಅತ್ತೆಯ ಮಡಿಲಿಗೆ ನವಜಾತ ಶಿಶುವನ್ನು ಹಾಕಿ ಅವರು ಯಾರ ಜೊತೆಗೋ ಹೊರಟು ಹೋದರಂತೆ. ಅಜ್ಜಿ ಮೊಮ್ಮಗಳು ಇಬ್ಬರು ಕಳಸದಲ್ಲಿ ಇದ್ದಾರೆ. ಒಮ್ಮೆ ಫೋನಲ್ಲಿ ಮಾತಾಡುವಾಗ ಅವರೋಟ್ಟಿಗೂ ಮಾತಾಡಿಸಿದ್ದಳು.
ಪ್ರಮೇಯಳನ್ನು ಅರ್ಥ ಮಾಡಿಕೊಳ್ಳೋಕೆ ಪ್ರಯತ್ನಿಸಿ ನಾ ಸೋತಿದ್ದೇನೆ. ಸಮಾಜಮುಖಿ ಕಾರ್ಯಗಳು ಎಂದರೆ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಹೋಗುವ ಅವಳ ಮನೋಭಾವಕ್ಕೆ ಕಾರಣವನ್ನು ಹುಡುಕುವ ಗೋಜಿಗೆ ತುಂಬಾ ಸಲ ಹೋಗಿ ಬರಿಗೈಯಲ್ಲೆ ವಾಪಾಸ್ಸು ಬಂದಿದ್ದೇನೆ. ಅವಳು ಅಧ್ಯಾತ್ಮ, ಅನಾಥರ ಬದುಕು, ಪರಾನುಭೂತಿ ಇವೆಲ್ಲಾ ನನ್ನನ್ನ ಮತ್ತಷ್ಟು ಸ್ಟ್ರಾಂಗು ಮಾಡತ್ತೆ, ಅನ್ನುತ್ತಾ ಇಷ್ಟುದ್ದ ವಿವರಣೆ ಕೊಟ್ಟಿದ್ದಳು. ಅವಳ ಕಣ್ಣ ಹೊಳಪನ್ನು ಗಮನಿಸಿದ್ದೆ. ಕಡೂರು ಸಾರ್ವಜನಿಕ ಆಸ್ಪತ್ರೆಯ ತೊಟ್ಟಿಯಲ್ಲಿ ದೊರೆತ ಹೆಣ್ಣುಮಗುವಿನ ಭ್ರೂಣದ ನ್ಯೂಸು ಕೇಳಿ ಕಾಫಿ ಕುಡಿಯುವಾಗ ಕಣ್ಣೀರು ಕಟ್ಟೆಯೊಡೆದು ಕುಡಿದ ಕಾಫಿಯಲ್ಲಿ ಉಳಿದಿದ್ದ ಪಸೆಯಲ್ಲಿ ಬೆರೆತಿತ್ತು. ಅವಳ ನಗು, ಅಳು, ಕೋಪ, ಮೂಡು ಸ್ವಿಂಗುಗಳು, ಓಡಾಟ, ಕಾಡಿಗೆ ಕಣ್ಣ ಹೊಳಪು, ಅರೆಬರೆ ಉಳಿದಿದ ನೈಲ್ ಪಾಲಿಶು, ಸೆಲ್ಫು ಸ್ಟಾರ್ಟಾಗದ ಅವಳ ಸ್ಕೂಟರು ಇಷ್ಟಾಗಿಯೂ ಯಾವ ಎಕ್ಸಾಮಲ್ಲೂ ಎಡವದ ಅವಳ ಎಚ್ಚರಿಕೆ ನನ್ನಲ್ಲಿ ಇರೋ ಕೆಲವು ಹುಚ್ಚಾಟಗಳು ಕಂಫ್ಯುಷನ್ಸುಗಳು ತುಂಬಾ ಬಾಲಿಶ ಅಂತ ಅನಿಸೋಕೆ ಶುರುವಾಗುತ್ತವೆ.
ಒಮ್ಮೆ ಕಾಫಿ ಕುಡಿಯುತ್ತಿರುವಾಗ ಭಾಜ್ಯ ಆಕಸ್ಮಿಕವಾಗಿ ಸಿಕ್ಕು ’ಯಾರೆ ಅಕ್ಕ ಇವರು ಅನ್ನುತ್ತಾ’ ತುಂಟನಗುಬೀರಿ ಹೋಗಿದ್ದರು. ಅದಕ್ಕೆಲ್ಲ ಮುನ್ನುಗ್ಗಿ ಎಂದೂ ಇವಳು ವಿವರಣೆ ಕೊಟ್ಟಿಲ್ಲ. ಆಮೇಲೆ ಭಾಜ್ಯ ನನ್ನೊಟ್ಟಿಗೂ ಅಷ್ಟೇ ಆತ್ಮಿಯರಾಗಿದ್ದರು. ಪ್ರಮೇಯ ಮಂಗಳಮುಖಿಯರನ್ನೆಲ್ಲ ಕೂಡಿಸಿ ಒಂದು ಸ್ವಸಹಾಯ ಸಂಘ ಮಾಡಿ ಉಪ್ಪಿನಕಾಯಿ, ವಿವಿಧ ಬಣ್ಣದ ಸಂಡಿಗೆಗಳು, ತೊಕ್ಕು, ಹಪ್ಪಳ, ಪುಳಿಯೊಗರೆ ಮುಂತಾದ ಉತ್ಪನ್ನಗಳನ್ನು ಮಾಡಿ ಸ್ವವಲಂಬನೆಯ ಬದುಕು ಕಟ್ಟಿಕೊಳ್ಳಲು ತಾನಿದ್ದ ಎನ್.ಜಿ.ಓ. ಮುಖಾಂತರ ಮುನ್ನುಡಿ ಬರೆದಿದ್ದಳು. ಎರಡ್ಮೂರು ವರ್ಷಗಳ ಕೆಳಗೆ ಸಿಗ್ನಲ್ಲಿನಲ್ಲಿ ಅವರಿವರ ದುಡ್ಡು ಕೇಳುತ್ತಿದ್ದ ಜಾಗದಲ್ಲೇ ಅವರು ತಯಾರಿಸಿದ ವಿವಿಧ ಉತ್ಪನ್ನಗಳು ಶಾಪಿನ ಮೂಲಕ ಮಾರಾಟವಾಗುತ್ತಿದ್ದವು. ಮನುಷ್ಯ ಚಂದ್ರನ ಮೇಲೆ ಪುಟ್ಟ ಹೆಜ್ಜೆ ಇಟ್ಟು ದಾಪುಗಲು ಎಂದು ಬೀಗುವ ಹೊತ್ತಿಗೆ ಇಲ್ಲೊಂದು ಚಿಗುರಿದ ಹೊಸಬದುಕು ನನಗೆ ಮೊದಲನೆಯದಕ್ಕಿಂತ ಹೆಚ್ಚು ಆಪ್ತವೆನಿಸಿತು.
ಮತ್ತೂ ಕೆಲವು ವಿಧವೆಯರನ್ನು ಸೇರಿಸಿ ಹೊಲಿಗೆ ಮಷಿನು ಕೊಡಿಸಿ ಅವರು ಹೊಲಿಯೋ ಬಟ್ಟೆಗಳನ್ನು ಮುತುವರ್ಜಿಯಿಂದ ಸಂಬಂಧಪಟ್ಟ ಬಟ್ಟೆಯಂಗಡಿಗೆಗಳಿಗೆ ತಲುಪಿಸೋ ಸಂವಹನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಯಾವುದಾದರು ವಸ್ತು ಪ್ರದರ್ಶನ ಜಾತ್ರೆ ಇಂತಹ ಸಂದರ್ಭದಲ್ಲಿ ತಪ್ಪದೇ ಅಲ್ಲಿ ಹೋಗಬೇಕೆಂಬ ಅವಳ ಒತ್ತಾಯಕ್ಕೆ ಅವರು ಮಣಿಯಲೇ ಬೇಕಿತ್ತು. ಮುಳ್ಳಯನಗಿರಿ ಬೆಟ್ಟದಲ್ಲಿ ಅದ್ಯಾರೋ ಪ್ಲಾಸ್ಟಿಕ್ಕು ಬಿಸುಡುವ ಹೊತ್ತಲ್ಲಿ ತಾರಮಾರಿ ಬೈದಿದ್ದಳು. ರಸ್ತೆಯಲ್ಲಿ ಅಡ್ಡದಿಡ್ಡಿ ಓಡಿಸುವವರು ಯಾರೆ ಆದರೂ ಅವರಿಗೆ ಉಗಿಯದೇ ಇರುತ್ತಿರಲಿಲ್ಲ. ನಾನು ಹಿಂಬದಿ ಕೂತು ಅವಳು ಬೈಯ್ಯುವಾಗ ಅವಳ ಹೆಲ್ಮೆಟ್ಟು ಕೈಲಿಡಿದು ಸುಮ್ಮನೆ ನಿಲ್ಲುವುದರ ಮೂಲಕ ನನ್ನ ಪಾಲಿನ ಕೊಡುಗೆಯನ್ನು ನೀಡುತ್ತಿದ್ದೆ. ಆಗಾಗ್ಗೆ ಇಂಗ್ಲಿಷಲ್ಲಿ ಕವನಗಳನ್ನ ಬರೆದು ಕಳುಹಿಸುತ್ತಾಳೆ. ಡಿಕ್ಷನರಿ ಆಪನ್ನು ಒಂದೆಡೆ ಒಪನ್ನು ಮಾಡಿ ಒದಿ ಅರ್ಥೈಸಿಕೊಳ್ಳೊ ಹೊತ್ತಿಗೆ ಐದಾರು ಕಿಲೋಮಿಟರು ಓಡಿದಷ್ಟು ದಣಿವಾಗುತ್ತದೆ.
ಆದು ರೋಹಿತ್ ನ ಸಿನಿಮಾ ಅಖಾಡ ಭಾಗ 1 ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಸಮಯ. ಹಾಸನದ ಥಿಯೇಟರ್ ಒಂದರಲ್ಲಿ ಅಭಿಮಾನಿಗಳು ಕೋಣ ಕಡಿದು ಕಟೌಟಿಗೆ ರಕ್ತ ಅಭಿಷೇಕ ಮಾಡುವ ಸಮಯದಲ್ಲಿ ಇನ್ನೊಬ್ಬ ನಟನ ಅಭಿಮಾನಿಗಳೊಟ್ಟಿಗೆ ಜಗಳವಾಗಿ ಬೇಧಭಾವವಿಲ್ಲದೇ ಎಲ್ಲರೂ ಆಸ್ಪತ್ರೆ ಸೇರಿದ್ದರು. ಇದರಿಂದ ಕೋಪಗೊಂಡ ರೋಹಿತ್ ಫೇಸ್ ಬುಕ್ಕು ಲೈವ್ ಬಂದು ಮಾತಿನ ಬರದಲ್ಲಿ ’ನನ್ನ ಅಭಿಮಾನಿಗಳ ತಂಟೆಗೆ ಬಂದ್ರೆ ನಾವು ಸುಮ್ಮನೆ ಬಿಡೊಲ್ಲ. ನಾವೇನೂ ಬಳೆ ತೊಟ್ಟಿಲ್ಲ’ ಅಂದು ಬಿಟ್ಟ.ರಾಜ್ಯದೆಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಯ್ತು. ಪ್ರಮೇಯಾ ಕೂಡ ನಟನನ್ನು ಟ್ಯಾಗು ಮಾಡಿ ’ಚಲ್ಲಣವ ಕಟ್ಟಿ ಮಲ್ಲರೊಡನೆ ಸೆಣೆಸಿ ಗೆದ್ದು ನಿಂತ ಮೇಲೆ “ಬಳೆ ತೊಟ್ಟಿಲ್ಲ” ವೆಂಬ ಮಾತು ಹೊರಟರೆ ನಿನ್ನ ಮಸ್ತಿಷ್ಕದೊಳಗೆ ಬಟಾಣಿ ಮೆದುಳೂ ಇಲ್ಲದಾಯ್ತೇ ಬೆಳ್ಳಿ ತೆರೆಯ ಖಾಲಿ ವೀರಾ!’ ಎಂದು ಫೇಸ್ ಬುಕ್ಕಲ್ಲಿ ಬರೆದಿದ್ದಳು. ಅಂದುಕೊಂಡಂತೆ ಅಭಿಮಾನಿಗಳು ಅವಾಚ್ಯ ಶಬ್ಧಗಳಿಂದ ಫೇಸ್ ಬುಕ್ಕು ಗೋಡೆಯನ್ನು ತುಂಬಿಸಿದ್ದರು. ಇದರಿಂದ ನೊಂದುಕೊಂಡಿರಬಹುದಾದ ಪ್ರಮೇಯಾಳನ್ನು ಸಂತೈಸಲು ಕರೆಮಾಡಿದ್ದೆ. ನಗುತ್ತಾ ಅವಳು ’ಬಹುಸಂಖ್ಯಾತರ ನಂಬಿಕೆಗಳಿಗೆ ತರ್ಕಬದ್ಧವಾಗಿ ಒದಗೋ ಮಾತುಗಳು ರುಚಿಸುವುದಿಲ್ಲ. ಹುಡುಗಿ ಏನಾದ್ರು ಅವರ ನಂಬಿಕೆಗೆ ಕೊಳ್ಳಿ ಇಟ್ಟರೆ ಅವಳನ್ನು “ಸೂಳೆ ಡಗಾರ್ ಹಾದಿರಗಿತ್ತಿ” ಅಂತಾರೆ ಗಂಡಸರೇನಾದರೂ ಅಂದರೆ ಅವರ ಅಮ್ಮನೋ ತಂಗಿಯನ್ನೋ ಪದಗಳಲ್ಲೆ ಸೂಳೆಗಾರಿಕೆಗೆ ತಳ್ಳುತ್ತಾರೆ. ಇವರಿಗೆ ಕೆಲವರ ಅಭಿಪ್ರಾಯಗಳು ಸಹನೀಯ ಅನಿಸದಿದ್ರೆ ಸೋಷಿಯಲ್ ಮೀಡಿಯಾ ವರ್ಚುಯಲ್ ಪ್ರಾಸ್ಟಿಟ್ಯೂಟ್‌ಗಳನ್ನು ಉತ್ಪಾದಿಸೋ ಕಾರ್ಖಾನೆಯಾಗುತ್ತದೆ. ಇಷ್ಟೆಲ್ಲಾ ನೆಗೆಟಿವಿಟಿಗೆ ವಿಚಲಿತನಾಗ್ತಿದಿನಿ ಅನಿಸಿದ್ರೆ ಒಂದೋ ಜಾಲತಾಣ ಅನ್ನೋ ದೊಂಬರಾಟ ನನಗಲ್ಲ ಇಲ್ಲಾ ನೆನ್ನೆ ಮೊನ್ನೆಯೋ ಹೆಜ್ಜೆ ಇಟ್ಟಿರಬೇಕು ಅಥವಾ ಇಂತವು ಕಣ್ಣಿಗೆ ಬೀಳದಂತೆ ಪೋಷಕರು ನಮ್ಮನ್ನ ಬಚ್ಚಿಟ್ಟು ಬೆಳಸಿರಬೇಕು ಅಷ್ಟೆ’ ಅಂತ ತಣ್ಣಗೆ ಉಸುರಿದ್ದಳು. ಯಾವುದೋ ಬ್ಲಡ್ಡ್ ಡೊನೇಷನ್ನು ಕ್ಯಾಂಪಿನಲ್ಲಿ ಇರುವುದಾಗಿಯೂ ಸಂಜೆಯೊಳಗೆ ಆದರೆ ಬಂದು ಭಾಗವಹಿಸಬೇಕೆಂದು ಹೇಳೋದು ಮರೆಯಲಿಲ್ಲ.
ಇನ್ನೋಮ್ಮೆ ಹೀಗಾಯ್ತು ಕಳಸದ ಬಸ್ಟಾಂಡಿನಲ್ಲಿ ಕಾಯುತ್ತಿರುವಾಗ ಹತ್ತಿರದಲ್ಲಿದ್ದ ಊರಿನ ಪಂಚಾಯಿತಿ ಆಫೀಸಿನಿಂದ ಕೆಲವು ಮಹಿಳಾ ಉದ್ಯೋಗಿಗಳು ಶೌಚ ನಿಮಿತ್ತಾ ನಿತ್ಯ ಬಸ್ಟಾಂಡಿನಲ್ಲಿದ್ದ ಮಹಿಳೆಯರ ಶೌಚಾಲಯಕ್ಕೆ ಬರುತ್ತಿದರು. ಸ್ವಚ್ಚ ಭಾರತ ಅಭಿಯಾನದಡಿ ಎಲ್ಲ ಸಾರ್ವಜನಿಕ ಕಛೇರಿಗಳಲ್ಲಿ ಜೆಂಡರ್ ಸ್ಪೆಸಿಫಿಕ್ ಟಾಯ್ಲೆಟ್ಟುಗಳು ಇರಬೇಕೆಂಬ ನಿಯಮವಿದೆ, ಕಛೇರಿಯಲ್ಲಿರುವ ಒಂದು ಶೌಚಾಲಯವು ದುರಸ್ತಿಗಾಗಿ ಕಾಯುತ್ತಿತ್ತು. ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವ ಕ್ರಮ ಕೈಗೊಂಡಿರಲ್ಲ ಎಂದು ಅದರಲ್ಲೊಬ್ಬರಾಗಿದ್ದ ಪ್ರಮೇಯಾಳ ಗೆಳತಿಯ ತಾಯಿಯಿಂದ ಇದೆಲ್ಲಾ ತಿಳಿಯಿತು. ಸೀದಾ ಪೋಸ್ಟಾಫಿಸಿಗೆ ಹೋದವಳು ಒಂದು ಆರ್.ಟಿ.ಐ ಎಸೆದು ಕಳಸದಲ್ಲಿರುವ ಎಲ್ಲಾ ಸಾರ್ವಜನಿಕ ಕಛೇರಿಗಳಲ್ಲಿ ಬಳಸಯೋಗ್ಯ ಶೌಚಗಳು ಹಾಗು ಅದರಲ್ಲಿ ಗಂಡಸು ಹೆಂಗಸರಿಗೆ ವಿಂಗಡಿಸಿದ ಮಾಹಿತಿ ಕೇಳಿದ್ದಳು. ನೋಡೊಕೆ ತುಂಬಾ ಚಿಕ್ಕ ವಿಷಯ ಅನಿಸಿದ್ರು ಇದ್ದಕ್ಕೆಲ್ಲಾ ಒಂದು ತಾರ್ಕಿಕ ಅಂತ್ಯ ನೀಡಬೇಕು ಅಂತ ನಿರ್ಧರಿಸಿಯಾಗಿತ್ತು. ಮಾಹಿತಿ ಬಂದಾಗ ಅವಳು ಎಣಿಸಿದಂತೆ ಕೇವಲ ನಗರ ವ್ಯಾಪ್ತಿಯಲ್ಲಿದ್ದ ಕಛೇರಿಗಳ ಹೊರತು ಪಡಿಸಿ ಬೇರೆ ಕಡೆಯಲ್ಲಿ ಎಲ್ಲೂ ಕೂಡ ಬಳಸಯೋಗ್ಯ ಶೌಚಗಳು ಇರಲಿಲ್ಲ. ಅದನ್ನೇ ಒಂದು ವರದಿ ಸಿದ್ಧಪಡಿಸಿ ರಾಜ್ಯಮಟ್ಟದ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ಮಾಡಿದ್ದಳು. ಎಚ್ಚೆತ್ತಾ ಜಿಲ್ಲಾಡಳಿತ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಕಛೇರಿಗಳ ಶೌಚಾಲಯದ ಮಾಹಿತಿ ನೀಡಬೇಕೆಂದು ಅದಕ್ಕೆ ಪೂರಕವಾಗಿ ಸ್ವಚ್ಚಭಾರತ ಅಭಿಲಾಷೆಗಳನ್ನು ಕಾರ್ಯರೂಪಕ್ಕೆ ತರಲು ಅಗತ್ಯ ಅಯಕಟ್ಟಿನ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಫರ್ಮಾನು ಹೊರಡಿಸಿದ್ದರು. ’ಅದು ಎಷ್ಟು ಕಾರ್ಯರೂಪಕ್ಕೆ ಬರುತ್ತೋ ಇಲ್ವೋ ಗೊತ್ತಿಲ್ಲ ಆದರೆ ಒಂದಷ್ಟು ಅಕ್ಕ ತಂಗಿಯರಂತೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿರ್ತಾರೆ” ಎನ್ನುತ್ತಾ ಕಾಡಿಗೆ ಪರಿಧಿಯೊಳಗೆ ಅವಿತಿದ್ದ ಕಣ್ಣು ಅರಳಿಸಿದ್ದಳು.
ಇಂತಿಪ್ಪ ಪ್ರಮೇಯಾ ಭಾಜ್ಯರ ಮೇಲೆ ಮುನಿಸಿಗೆ ಕಾರಣ ನಂಗೆ ಊಹಿಸಲೂ ಸಾಧ್ಯವಿರಲಿಲ್ಲ. ಕೆಲವು ವಿಚಾರಗಳ ಬಗ್ಗೆ ಅವಳಿಗೆ ಕೋಪ ಬೇಜಾರು ಆಗೋಕೆ ಸಾಧ್ಯವೇ ಇಲ್ಲ ಎಂದು ನಾನು ದೃಢವಾಗಿನಂಬಿರುವ ವಿಷಯಗಳಲ್ಲಿ ಭಾಜ್ಯ ಕೂಡ ಒಬ್ಬರು. ಕಾಫಿ ಮ್ಯೂಸಿಯಮ್ಮಿನ ಬಳಿ ಬಂದಾಗ ಕರೆ ಮಾಡಿದೆ. ನಾ ತಲುಪೋ ಹೊತ್ತಿಗೂ ಅವಳೂ ಬಸ್ಟಾಂಡಿಗೆ ಬರುವುದಕ್ಕೂ ಸರಿಯಾಯ್ತು. ಇಬ್ಬರು ಸಿಕ್ಕಮೇಲೆ ಕಾಫಿ ಸಂಪ್ರದಾಯವಂತೂ ಆಗಲೇ ಬೇಕು. ಅದಕ್ಕು ಮುನ್ನ ಭಾಜ್ಯರಿಗೆ ಕರೆಮಾಡಿದೆ ಅವರು ಕಾಯುತ್ತಿದ್ದರೇನೋ ಅನ್ನುವಂತೆ ಪಟ್ಟನೆ ರಿಸೀವ್ ಮಾಡಿದ್ರು. 'ಪ್ರಮೇಯಾ ಇಲ್ಲೇ ಇದ್ದಾಳೆ ಮಾತಾಡಿ' ಎನ್ನುತ್ತಾ ಅವಳೆಡೆಗೆ ಲೌಡ್ ಸ್ಪೀಕರ್ ಇಟ್ಟು ರವಾನಿಸಿದೆ. ಹುಸಿಕೋಪದಲ್ಲಿ ನನ್ನೆಡೆ ನೋಡುತ್ತಾ ಏನೊಂದು ಮಾತಾಡದೆ ಹಾಗೆ ಕೈಯಲ್ಲಿ ಹಿಡಿದಿದ್ದಳು. ಕಾಷ್ಠ ಮೌನ. ಮತ್ತೆ ಭಾಜ್ಯರೆ 'ಸರಿ ಕಣೆ ನೀನೇ ಗೆದ್ದೆ. ಸಂಘದವರಲ್ಲಿ ಅರ್ಹರನ್ನ ಆ ಪೋಲೀಸು ಟ್ರಯಲ್ಸ್ ಗೆ ಕಳಿಸ್ತೆನೆ. ನೀನು ಹೀಗೆ ನನ್ನೋಟ್ಟಿಗೆ ಇದ್ರೆ ಕರುಳು ಸುಟ್ಟಂಗೆ ಆಗತ್ತೆ.'. ಗಂಟಲು ಬಿಗಿದ ಮಾತುಗಳು ಕೇಳುತ್ತಿತ್ತು. ಲೌಡ್ ಸ್ಪೀಕರ್ ತೆಗೆದು ಅರಳಿದ ಮೊಗದಲ್ಲಿ ಕೆಲದೂರ ಹೋಗಿ ಮಾತಾಡಿ ಬಂದಳು. ರಾಜ್ಯ ಸರ್ಕಾರ ಮಂಗಳಮುಖಿಯರಿಗೆ ನೇಮಕಾತಿಯಲ್ಲಿ 1% ಮೀಸಲಾತಿಯೊಟ್ಟಿಗೆ ಇತ್ತೀಚೆಗೆ ಆರಕ್ಷಕರ ಹುದ್ದೆಗಳಿಗೆ ಸುತ್ತೋಲೆ ಹೊರಡಿಸಿದ್ದರು. ಜೊತೆಗೆ ಉಚಿತ ತರಬೇತಿಯನ್ನೂ ಘೋಷಿಸಿದ್ದರು. ಮುಜುಗರದಿಂದಲೋ ಏನೋ ಪ್ರಮೇಯಾ ಎಷ್ಟು ಕೇಳಿದರೂ ಕಳುಹಿಸಲು ಭಾಜ್ಯ ಒಪ್ಪಿರಲಿಲ್ಲ.ಅವಳಿಷ್ಟದ ಪುಳಿಯೋಗರೆ ಡಬ್ಬಿ ಕೊಟ್ಟು ಹೋಟೆಲಿನತ್ತ ಹೆಜ್ಜೆ ಇಟ್ಟೆವು. ಮಾರನೇ ದಿನ ಅಲ್ಲಿಂದ ಮೂಡಿಗೆರೆಗೆ ಹೋಗಬೇಕಿತ್ತು ಬಸ್ಸು ಹತ್ತುವ ವೇಳೆ ಪುಳಿಯೊಗರೆ ಮಾಡಿ ತಂದು ಕೊಟ್ಟಳು, ಬಸ್ಸಲ್ಲಿ ಮುಚ್ಚಳ ತೆಗೆದಾಗ ಬಸ್ಸು ತುಂಬೆಲ್ಲಾ ಅದರ ಪರಿಮಳ ಹರಡಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ