ಪ್ರಮೇಯಾ
ಅಲಾರಮ್ ಆಗಲೇ ನಾಲ್ಕೈದು ಬಾರಿ ಬಾಯ್ ಬಡಿದುಕೊಂಡಿತ್ತು. ಎದ್ದು ಅರಸಿಕೆರೆಯ ಸರ್ಕಾರಿ ಪಿಯು ಕಾಲೇಜಿನ ಮೈದಾನದ ಸುತ್ತಾ ಏಳೆಂಟು ಸುತ್ತು ಹೊಡೆಯುವುದರೊಳಗೆ ಏದುಸಿರು ಬಿಡುವಂತಾಗಿತ್ತು. ಆಗತಾನೆ ಮೈದಾನಕ್ಕೆ ಕಂಪೌಂಡು ಕಾಮಗಾರಿ ನಡೆಯುತ್ತಿದೆ. ಪುಟ್ಟ ಪುಟ್ಟ ಭರ್ಜಿಯಾಕಾರದಲ್ಲಿದ್ದ ಚೂಪಾದ ಕಂಬಿಗಳನ್ನು ಆಗಿನ್ನು ಮಡ್ಡಿಕಲಸಿ ನಿರ್ಮಿಸಿದ್ದ ಗೋಡೆಯ ಹೊಟ್ಟೆ ಬಗೆದು ನೆಡುತ್ತಿದ್ದರು. ಮೈದಾನದ ಗೇಟಿನ ಬಳಿ ಕೆಲವು ಹಿರಿಯ ನಾಗರಿಕರಿಗೆ ಅದ್ಯಾರೋ ತರುಣಿ ವೈದ್ಯರಂತೆ ಬಿಳಿ ಬಟ್ಟೆ ತೊಟ್ಟು ಮೈಕಿಡಿದು ಇದಾವುದೋ ನೀಲಿಕಲರಿನ ಮುಲಾಮು ಹೇಗೆ ಮಂಡಿನೋವನ್ನು ಶಮನಗೊಳಿಸಿತು ಎಂದು ಸವಿವರವಾಗಿ ಕೇಳುತ್ತಿದ್ದಳು. ಪಕ್ಕದಲ್ಲೆ ವೃತ್ತಾಕಾರದಲ್ಲಿದ್ದ ಕಸದ ಸಿಮೆಂಟು ಬ್ಲಾಕ್‌ಗೆ ತುಂಬಾ ದಿನವಾದ್ದರಿಂದಲೋ ಏನೋ ತುಂಬಿಹೋಗಿದ್ದ ಕಸದ ರಾಶಿ ತನ್ನ ಇರುವಿಕೆಯನ್ನು ಸುತ್ತಾ ನೂರಾರು ಮೀಟರ್‌ಗಳವರೆಗೂ ಸಾರಿ ಹೇಳುತ್ತಿತ್ತು.ನೋಡನೋಡುತ್ತಲೆ ಚಂಗನೆ ಅದರ ಮೇಲೆ ಎಗರಿದ ಬೀದಿನಾಯಿಗಳು ಕಪ್ಪುಬಣ್ಣದ ಕವರನ್ನು ಕಚ್ಚಿಕೊಂಡು ರಪರಪನೆ ತಲೆಬಡಿದು ಅದರಲ್ಲಿ ಬೆಚ್ಚಗೆ ಕೂತಿದ್ದ ಡಯಪರುಗಳನ್ನು ಅರೆಕ್ಷಣದಲ್ಲಿ ರಸ್ತೆಯ ತುಂಬೆಲ್ಲಾ ಹರಡಿದವು. ಹರಿದು ಅರೆಜೀವವಾಗಿದ್ದ ಕವರನ್ನು ಹಿಡಿದು ನಾಯಿಯೊಂದು ಮಿನಿ ವಿಧಾನಸೌದದ ಕಡೆ ಓಡಿತು. ಅದರ ಹಿಂದೆ ಕಿಂದರಿಜೋಗಿಯ ಅನುಸರಿಸಿ ಹೊರಟ ಮಕ್ಕಳಹಿಂಡಿನಂತೆ ಉಳಿದ ನಾಯಿಗಳು ಕೂಡ ಹಿಂಬಾಲಿಸಿದವು. ರಸ್ತೆಯ ತುಂಬಾ ಹತ್ತಿ ಉಂಡೆಗಳಂತ...