ಚಿಲ್ಲರೆ ಕಥೆಗಳು
"ಏನು ಶಬ್ದಾನೇ ಬರ್ತಿಲ್ಲ ಅಂದ್ರೆ, ನಿಮಗೆ ಕಿವಿ ಹೋದ್ವ ಇಲ್ಲ ಗಂಟೆಗೆ ನಾಲಗೆ ಬಿದ್ದೋಯ್ತಾ". ತುಸು ಕೋಪದಲ್ಲೇ ಕಾರ್ಯದರ್ಶಿಗಳು ಹೇಳಿದರು. ನೆನ್ನೆಯಿಂದ ದೇವಸ್ಥಾನದ ಗಂಟೆಯಲ್ಲಿ ಶಬ್ಧವೇ ಹೊಮ್ಮುತ್ತಿಲ್ಲ ಅನ್ನೋದು ಹೇಳೋಕೆ ಅರ್ಚಕರು ದರ ದರನೇ ಓಡಿಬಂದು ಮನೆಯ ಬಾಗಿಲ ಬಳಿ ಬಿಸುಟ ಅರ್ಚಕರ ಉಂಗುಷ್ಟ ಕಿತ್ತುಹೋದ ಹವಾಯಿ ಚಪ್ಪಲಿಗೆ ಜೀವದಾನವೆಂಬಂತೆ ಹಾಕಿದ್ದ ಪಿನ್ನು ತನ್ನೆಲ್ಲಾ ಶಕ್ತಿ ತೊರೆದು ಉಂಗುಷ್ಟದೊಂದಿಗೆ ಹೊರಬಂದಿತು.
ಸರಿ ನೋಡೋಣ ಅಂತ ಇಬ್ಬರು ದೇವಸ್ಥಾನದ ಹಾದಿ ಹೂಡಿದರು.
ಇದಿರು ಸಿಕ್ಕಮನುಷ್ಯನ ಆಕೃತಿಗೆ ಎಂತದೋ ಕುತೂಹಲ ಎನಿಸಿ " ದೇವಸ್ಥಾನದ ಲೆಕ್ಕದಲ್ಲಿ ಮಿಸ್ಟಿಕ್ ಆಯಿತ. ಏಕಿಷ್ಟು ಅವಸರ" ಎಂದು ನಕ್ಕಿತು.ಅರ್ಚಕರಿಗೆ ಏನು ಹೇಳಬೇಕು ತೋರಲಿಲ್ಲ. ಅಲ್ಲೆ ನಿಂತು "ಇಲ್ನೋಡಿ ದೇವಸ್ಥಾನದ..."
"ಆರ್ಚಕರೇ ದೇವರೇ ಇಲ್ಲ ಅನ್ನೋ ನಾಸ್ತಿಕ ಅವನು, ಅವನಿಗ್ಯಾಕೆ ಇವೆಲ್ಲಾ ಹೇಳ್ತಿರಾ. ನಡಿರಿ ಸುಮ್ನೆ" ಕಾರ್ಯದರ್ಶಿಗಳು ಮತ್ತಷ್ಟು ಕೆಂಡವಾದರು.
ಆ ಮನುಷ್ಯ ಆಕೃತಿ ಅಲ್ಲೆ ನಿಂತು ಏನನ್ನೋ ಯೋಚಿಸುತ್ತಿತ್ತು ಅದಕ್ಕೆ ನೆರಳಿರಲಿಲ್ಲ.
ದೇವಾಲಯಕ್ಕೆ ಬಂದ ಕಾರ್ಯದರ್ಶಿಗಳು ಎಡೆಬಿಡದೇ ಗಂಟೆಯೊಡೆದು ಆರ್ಚಕರ ಮುಖ ನೋಡಿದರು. ಮೂಲೆಯಲ್ಲಿ ಮಲಗಿದ್ದ ಬೀದಿನಾಯಿಯೊಂದು ಅನಿರೀಕ್ಷಿತವಾಗಿ ಎರಗಿದ ಸದ್ದಿಗೆ ಎಚ್ಚರಗೊಂಡು ನೋಡತೊಡಗಿತು.
ಕಾರ್ಯದರ್ಶಿಗಳು ಗುಡುಗಿ ಹೋದನಂತರ ಆರ್ಚಕರು ಪ್ರಯತ್ನಿಸಿದರು ಗಂಟೆಯಿಂದ ನಾದ ಹೊಮ್ಮಲಿಲ್ಲ. ಬೀದಿನಾಯಿಯ ನಿದ್ದೆಗೆ ಮತ್ತೆ ಭಂಗ ಬರಲಿಲ್ಲ.
✤✤✤
ಬನ್ನಿ ಬನ್ನಿ
ಎಲ್ಲಾ ಬನ್ನಿ
ಕರ್ಚೀಫು ತಗೋಳಿ
ಅಂತಿಂಥಾ ಕರ್ಚೀಫ್ ಅಲ್ಲ ಇದು
ನಿಮ್ಮ ನೋವನ್ನ ಕರಗಿಸತ್ತೆ
ನಿಮ್ಮ ಕಣ್ಣೀರನ್ನ ಹಿಂಗಿಸತ್ತೆ
ಬನ್ನಿ ಬನ್ನಿ
ಎಲ್ಲಾ ಬನ್ನಿ
ನೋಡಿ ತಾಯಿ ನೋಡಪ್ಪ ದೊರೆ
ಹೀಗೆ ವಾರದ ಹಿಂದೆ ಒಬ್ಬ ಹುಡುಗಿ ಕರಿಬಣ್ಣ
ಅಂತ ಅಳುತ್ತಾ ಬಂದಳು, ಊರವರು ಆಡಿಕೊಂಡರಂತೆ
ತುಸು ಬೆಳ್ಳಕಿರೋರು ಹಂಗಿಸಿದರಂತೆ, ನ್ಯೂಸು ಆ್ಯಂಕರಾಗಲು ಹೋದಾಗ ಧ್ವನಿ ಭಾಷಾಪ್ರೌಢಿಮೆಯಷ್ಟೆ ಮುಖ್ಯವಲ್ಲವಂದರಂತೆ. ದುಃಖಿತೆ ಆಕೆ. ಅಳುತ್ತಲೇ ನಮ್ಮ ಕರ್ಚೀಫಿನಿಂದ ಕಣ್ಣೀರು ಒರೆಸಿಕೊಂಡಳು. ಅವಳ ಕಪ್ಪೇಲ್ಲಾ ಕರಗಿಹೋಯ್ತು.
ಜನ ಒಪ್ಪಿದರು.
ಇನ್ನೋಬ್ಬ ಅಳುತ್ತಾ ಬಂದ.
ಅವನೂ ಕರಿಯನಾ
ಇಲ್ಲ ಇಲ್ಲ. ಅವ ಸಿಕ್ಕಾಪಟ್ಟೆ ದಪ್ಪವಿದ್ದ. ಜೋತೇಲಿದ್ದವರು ಮೂದಲಿಸಿದರಂತೆ. ಹತ್ತಿರದವರು ತಟ್ಟೆ ಇದಿರು ಅದು ತಿನ್ಬೇಡ ಇದು ತಿನ್ಬೇಡ ವಾಕು ಮಾಡು ಅನ್ನ ಬಿಡು ಅಂದರಂತೆ.
ಆದರೇನಂತೆ ನಮ್ಮ ಕರ್ಚೀಫು ಇದೆಯಲ್ಲ ಬಂದವನ ಕಣ್ಣಿರು ನಾನೆ ಓರೆಸಿದೆ.
ನೋಡಿ ಈಗ ಕರ್ಚೀಫೇ ಇದ್ದ ಅತಿಕೊಬ್ಬನ್ನ ಹಿಂಡಿದೆ. ಮುಂದಿನ ತಿಂಗಳು ಸಿಕ್ಸ್ ಪ್ಯಾಕು ಬಂದರೂ ಆಶ್ಚರ್ಯವಿಲ್ಲ.
ಜನ ಸ್ವೀಕರಿಸಿದರು.
ಸುಮ್ನೆ ನಿಂತಿದಿರಲ್ಲ ಡವ್ಟ್ ಯಾಕೆ. ಕಾಸಿಲ್ಲ ಕರಿಮಣಿ ಇಲ್ಲ. ನಿಮ್ಮ ನಂಬಿಕೆಯೇ ಕಾಸು.
ಅಗೋ ಅಲ್ನೋಡಿ ಆ ಯಮ್ಮ ಮುಂದೆ ರೋಡಿನ ಕೊನೆಯ ಕ್ರಾಸಿನ ಬೋರ್ಡು ಕೆಳಗೆ ಹೋಗಿ ಮರೆಯಾದ್ರಲ್ಲ. ಪ್ರಗ್ನೆಂಸಿ ಕಿಟ್ಟು ಹಿಡಿದು ಅಳುತ್ತಿದ್ದರು. ನಮ್ಮ ಕರ್ಚೀಫು ಅವರ ಬಳಿ ಇದೆ. ಕೆಲವೇ ದಿನ ನೋಡ್ತಿರಿ, ಸುತ್ತಲಿರೋರೆಲ್ಲ 3 ವರ್ಷವಾಯ್ತು ಗುಡ್‌ನ್ಯೂಸ್ ಇಲ್ವ ಅಂತ ಕೇಳಲ್ಲ. ಥೈರಾಯ್ಡ್ ಪರೀಕ್ಷಿಸಿ ಕಂಡ ಕಂಡ ಟೇಸ್ಟು ಮಾಡಿಸಿ ಅಂತೆಲ್ಲ ಯಾರೂ ಸಜ್ಜೆಸ್ಟು ಮಾಡಲ್ಲ. ದೂರದೂರಿನ ದೇವಸ್ಥಾನದ ಮಗ್ಗುಲಿಗೆ ನಿಂತ ಅರಳಿಮರಕ್ಕೆ ಪುಟ್ಟತೊಟ್ಟಿಲು ಕಟ್ಟಿರೆಂದು ಯಾರೂ ಪಿಸುಗುಡಲ್ಲ. ನೋಡ್ತಿರಿ.
ಅಯ್ಯೋ ಸುಮ್ನೆ ನಿಂತಿದಿರಲ್ಲ.
ಬನ್ನಿ ಬನ್ನಿ
ಎಲ್ಲಾ ಬನ್ನಿ
ಕರ್ಚೀಫು ತಗೋಳಿ
ಅಂತಿಂಥಾ ಕರ್ಚೀಫ್ ಅಲ್ಲ ಇದು
ನಿಮ್ಮ ನೋವನ್ನ ಕರಗಿಸತ್ತೆ
ನಿಮ್ಮ ಕಣ್ಣೀರನ್ನ ಹಿಂಗಿಸತ್ತೆ
✤✤✤
ಯಾರೋ ಸತ್ತಿದ್ದರು. ಗುಂಡಿ ಅಗೆಯುತ್ತಿದ್ದೆ. ಐನೂರು ರುಪಾಯಿಗೆ ಮಾತಾಗಿತ್ತು. ಗಟ್ಟಿನೆಲ ಇನ್ನೊಬ್ಬ ಜೊತೆಯಾದ.ತಲ ಇನ್ನೂರೈವತ್ತು ಅಂತ ಮಾತಾಯಿತು. ಇಬ್ಬರೂ ಅಗೆದೆವು ನೆಲ ಕಲ್ಲಿನಂತಾಗಿತ್ತು.
ಸತ್ತವರ ಮಗ ಅರ್ಜೆಂಟಾಗಿ ಅದಾವುದೋ ದೇಶಕ್ಕೆ ತುರ್ತು ಹೋಗಬೇಕಿತ್ತು. ಜೆ.ಸಿ.ಬಿ ಕರೆಸಿ ಒಂದೇ ನಿಮಿಷಕ್ಕೆ ನೆಲ ಬಗೆದು ಕಾರ್ಯ ಮುಗಿಸಿದರು. ನಾವು ಕಾಯ್ತಾ ಇದ್ವು, ಇಬ್ಬರಿಗೂ ನೂರು ಕಿಸೆಗಿಳಿಸಿ ಕಳುಹಿಸಿದರು.
ಸತ್ತವರ ಮಗ ಅರ್ಜೆಂಟಾಗಿ ಅದಾವುದೋ ದೇಶಕ್ಕೆ ತುರ್ತು ಹೋಗಬೇಕಿತ್ತು. ಜೆ.ಸಿ.ಬಿ ಕರೆಸಿ ಒಂದೇ ನಿಮಿಷಕ್ಕೆ ನೆಲ ಬಗೆದು ಕಾರ್ಯ ಮುಗಿಸಿದರು. ನಾವು ಕಾಯ್ತಾ ಇದ್ವು, ಇಬ್ಬರಿಗೂ ನೂರು ಕಿಸೆಗಿಳಿಸಿ ಕಳುಹಿಸಿದರು.
✤✤✤
ಹೊಸ್ದುರ್ಗ ಗಾಡಿ ಕೆಬಿ ಕ್ರಾಸಲ್ಲಿ ಊಟಕ್ಕೆ ನಿಲ್ಲಿಸಿ, ಹೊಟ್ಟೆ ತುಂಬಿದ್ದಕೋ ಏನೋ ಆಮೆ ವೇಗದಲ್ಲಿ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಸಾಗ್ತಾ ಇತ್ತು.ಅವತ್ತು ಮಾಧುಸ್ವಾಮಿಯವರು ಸಚಿವ ಸಂಪುಟಕ್ಕೆ ಸೇರುವ ಘೋಷಣೆಯಾಗಿತ್ತು. ರೋಡಲ್ಲೇಲ್ಲಾ ಪಟಾಕಿ ಸದ್ದು, ಎಲ್ಲಡೆ ಸಂಭ್ರಮ. ಬಸ್ಸು ಚಿಕ್ಕನಾಯಕನಹಳ್ಳಿ ಬಸ್ಟಾಂಡಿಗೆ ಬಂದು ನಿಂತು ಸಾವರಿಸಿಕೊಳ್ಳುತ್ತಿತ್ತು. ಕಂಡಕ್ಟ್ರು ಇಳಿದು ಹೋದರು. ಮಳೆ ಬರೋ ಹಾಗೆ ಆಗಿದೆ.
ಮೊಬೈಲಿನ ಎಡಕಿವಿ ಹಿಂಡಿದೆ , ಬೀಗ ಹಾಕಿಕೊಂಡ ಅದರ ಮುಖ ಕಪ್ಪಾಯಿತು. ಸುತ್ತ ಗಮನಿಸ್ತಾ ಇದ್ದೆ. ಬಸ್ಟಾಂಡಿನ ಪೀಠದಲ್ಲಿ ಬಸ್ಸು ನಿಂತಿರಲಿಲ್ಲ. ಅದಕ್ಕೂ ಹೊರಡುವ ಧಾವಂತ.ನಕ್ಷತ್ರದ ಮೊನಚು ಮೂತಿಗಳನ್ನು ಪೇರಿಸಿ ಇಟ್ಚಂತೆ ನೆಲದಿಂದ ಐದಾರು ಇಂಚು ಮೇಲುಬ್ಬಿದ ಸಿಮೆಂಟು ತಡೆಗೋಡೆಗಳು. ಕೊನೆಯ ನಿಲುಗಡೆ ತಾಣ ಹುಳಿಯಾರು ರೂಟಿನದು. ಬೋರ್ಡಿನ ಕೆಳಗೆ ಮೊಮ್ಮಗಳು ಅಜ್ಜಿ ನಿಂತಿದ್ದರೂ ಏನೂ ಮಾತಡದೇ ನಿಶ್ಯಬ್ದದಲ್ಲೇ ವಿಹರಿಸುತ್ತಿದ್ದಾರೆ ಅನ್ನಿಸಿತು. ಇಬ್ಬರ ಮೊಗದಲ್ಲಿ ಬೇಸರ ಇತ್ತು. ಮೊಮ್ಮಗಳ ಕೈಲಿ ಯಾವುದೋ ಡಯಗ್ನೋಸ್ಟಿಕ್ ಸೆಂಟರಿನ ಖಾಕಿ ಕವರು ಮುದ್ದೆಯಾದಂತಿತ್ತು. ಅದರ ಮೇಲೆ ಒಂದೆರಡು ಹನಿ ಮಳೆ ನೀರು ಬಿದ್ದವು. ಇಳಿಯುವುದು ಇನ್ನರ್ಧ ಗಂಟೆಯಾದ್ದರಿಂದ, ಮಳೆ ಬಂದರೆ ಏನು ಮಾಡೋದಪ್ಪ ಅನಿಸಿ ಹೊರಗೆ ಕೈ ಚಾಚಿ ನೋಡಿದೆ ಮಳೆ ಬರ್ತಾ ಇರ್ಲಿಲ್ಲ. ಅವಳೆಡೆ ಕಣ್ಣು ಹಾಯಿಸಿದೆ ಅವಳು ಖಾಕಿ ಕಲರಿನ ರಿಪೋರ್ಟಿನ ಮೇಲೆ ಮತ್ತೆರಡು ಹನಿಗಳು ಬಿದ್ದವು. ಕಂಡಕ್ಟರ್ ಬಂದ ಕೂಡಲೇ ಬಸ್ಸು ತನ್ನ ಎಂದಿನ ಲಯದಲ್ಲಿ ಹೊರಡೋ ದಾರಿ ಹಿಡಿಯಿತು.
✤✤✤
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ