ಹಲೋ......

<---ಸತ್ತವರ ಜೊತೆ ನೀವು ಈ ದೂರವಾಣಿಯ ಮೂಲಕ ಮಾತನಾಡಬಹುದು. ನಿಮ್ಮ ದುಃಖ ದುಮ್ಮಾನಗಳನ್ನು ಕೇಳುವುದು ಹೇಳುವುದು ಏನಾದರೂ ಇದ್ದರೇ ಇಲ್ಲಿರುವ ಫೋನ್‌ಬೂತಿನ ಮೂಲಕ ಕೇಳಬಹುದಾಗಿದೆ.--->


ವಾಟ್ಸಪ್ಪಿನಲಿ ದುತ್ತನೆ ಬಂದ ಜಾಹಿರಾತು ಬೆನ್ನತ್ತಿ ಅಡ್ರೆಸ್ಸು ಹುಡುಕಿದಾಗ ನಮ್ಮ ಮನೆಯಿಂದ 173 ಕೀ.ಮಿ ದಕ್ಷಿಣಕ್ಕೆ ಇರುವ ಅಮೃತೂರಿನ ವಾಣಿಜ್ಯ ಸಂಕೀರ್ಣದ ನೆಲಮಹಡಿಯ ವಿಸ್ತಾರವಾದ ಕಂಪೌಂಡಿನ ಅಂಗಳದಲ್ಲಿ ಏಕಾಂಗಿಯಾಗಿ ನಿಂತಿದ್ದ ಫೋನ್ ಬೂತ್‌ನ ಕಡೆ ತೋರಿಸಿತ್ತು. ಗೂಗಲ್ ಮ್ಯಾಪಿನಲ್ಲಿ ಅಷ್ಟೇನು ಆಸಕ್ತಿದಾಯಕ ರಿವ್ಯೂಗಳೇನು ಇರಲಿಲ್ಲ. ಆದರೂ ನನಗೆ ಹೋಗಬೇಕೆನಿಸಿತು. ಅಪ್ಪನಿಗೆ ಇಷ್ಟೆಲ್ಲಾ ನಾನು ಬಿಡಿಸಿ ಹೇಳಿರಲಿಲ್ಲ.


"ನೀನೆಷ್ಟು ದಡ್ಡಿ ಅಂದ್ರೆ ಯಾರಾದ್ರೂ ಸಿಕ್ಕಾಪಟ್ಟೆ ಪ್ರಾಚೀನ ಕಾಲದ ಪೋನಲ್ಲಿ ಮಾತಾಡೋಕೆ ಅಂತ 170 ಕಿಮಿಗಟ್ಟಲೆ  ಹೋಗ್ತಾರಾ??" ರಿಂಗ್  ರೋಡಿಗೆ ಕಾರಿನ ತನ್ನೆರಡು ಚಕ್ರಗಳನ್ನು ತಾಗಿಸುತ್ತ ಅಪ್ಪ ಅಂದ. ಸಣ್ಣ ಕಿರಿಕಿರಿ ಅವನ ಮಾತಲ್ಲಿತ್ತು.


"ಅಪ್ಪ... ಸುಮ್ನೆ ಹೋಗಣ ಈಗ. ಇದೆಲ್ಲ ನೆನ್ನೆನೆ ಮಾತಾಡಿದ್ವಲ್ಲ. ಅದು ಮುಗಿಸಿ ನಿನ್ನ ಪೆನ್ಷನರ್ಸ್ ಕ್ಲಬ್ಬಿನಲ್ಲಿ ಹರಟೆ ಟೀಮಿನವರಿಂದ ಹರಟೆ ಪ್ರೋಗ್ರಾಮಿಗೆ ನಾನು ಜೊತೆಯಲ್ಲೇ ಬರ್ತಿನಿ ಹೋಗಣ ನಂಗೂ ಒಂತರ ಚೇಂಜಸ್ ಅನಿಸತ್ತೆ" ಕೀರ್ತಿ ಒಂದೆ ಉಸಿರಲ್ಲಿ ಹೇಳತೊಡಗಿದಳು. ಕಾರು ನೂರರ ವೇಗದಲ್ಲಿ ಸಾಗುತ್ತಿತ್ತು. ಮಳೆಬಂದು ಕಡುಕಪ್ಪುಬಣ್ಣವನ್ನು ಮೈಮೇಲೆ ಹೊದ್ದು ಮಲಗಿದ್ದ ರಸ್ತೆಯ   ಮೇಲೆ ಅಪ್ಪ ಮಗಳ ಸಣ್ಣಪುಟ್ಟ ಕಿರಿಕಿರಿ ಮಾತುಗಳು ಅಲ್ಲಲ್ಲಿ ದಾಖಲಾಗುತ್ತ  ಪ್ರಯಾಣ ಸಾಗುತ್ತಿತ್ತು.


ಎಲ್ಲವೂ ಮೊದಲಿನಂತೆ ಇರಲಿಲ್ಲ. ವರ್ಷದ ಹಿಂದೆ ನಾನು ಸಪೂರಳಾಗಿದ್ದೆ ವರ್ಕ್ ಫ್ರಮ್ ಹೋಮ್ ಪರ್ಮನೆಂಟ್ ಆದಮೇಲೆ ನಾನು ನನ್ನಪ್ಪನಿಗಿಂದ ತುಸು ದೊಡ್ಡದಾಗೆ ಕಾಣ್ತಿದ್ದೇನೆ. ಆರು ತಿಂಗಳ ಮುಂಚೆ ನಾನು ಅಮ್ಮ ಇಬ್ಬರೂ ಅಪ್ಪನ ಆಫೀಸಿನಲ್ಲಿ ಆಯೋಜಿಸಿದ್ದ ನಿವೃತ್ತಿ ಸಮಾರಂಭಕ್ಕೆ ತೆರಳಿ ಅಪ್ಪನ ಜೊತೆಗಿದ್ದು ಅವನ 30 ವರ್ಷಗಳ ಸುಧೀರ್ಘ ಸೇವೆಗೆ ತುಸುಭಾರವಾದ ಹೃದಯದಲ್ಲೆ ಅಪ್ಪ ಉಪಸಂಹಾರ ಹಾಕಿದ್ದ. ಇತ್ತೀಚೆಗೆ ಅಷ್ಟು ಕ್ರಿಯಾಶೀಲನಾಗಿ ಅಪ್ಪ ಇರುವುದಿಲ್ಲ. ಹೊಸದಾಗಿ ಕೊಂಡ Recliner ಮೇಲೆ ಕೂತು ದೀರ್ಘವಾದ ಯೋಚನೆಯಲ್ಲಿ ತೊಡಗಿರುತ್ತಾನೆ‌. ಅಮ್ಮ ಪ್ರೀತಿಯಿಂದ ಸಲಹುತ್ತಿದ್ದ ಮನೆಯ ಕಂಪೌಂಡಿನ ಗಾರ್ಡನ್ನಿಗೂ ಈಗ ಹೋಗುವುದನ್ನು ಬಿಟ್ಟಿದ್ದರು. ಅಮ್ಮನೊಟ್ಟಿಗೆ ಮತ್ತೆ ಮಾತಾಡುವುದರಿಂದ ಅಪ್ಪ ತನ್ನ ದಿನಚರಿಗೆ ಮರಳಬಹುದೆಂಬ ನಿರೀಕ್ಷೆ ನನ್ನದು. ನಾಳೆ ಎಂತದಾದ್ರು ಒಳ್ಳೆದಾಗತ್ತೆ ಅನ್ಕೊಂಡು ಬದುಕೋದೆ ಅಲ್ವ ಜೀವನ ಅಂದ್ರೆ.


"ಇವತ್ತು ವರ್ಕಿಂಗ್ ಡೇ ಅಲ್ವ ಲಾಸ್ಟ್ ವೀಕ್ ಇಂದ ಯಾಕೆ ಇಷ್ಟು ಫ್ರೀ ಆಗಿ ಇದ್ಯಾ. ಕೆಲಸದಿಂದ ತೆಗೆದರಾ ಹೇಗೆ??" ತನ್ನೆರಡು ಗಾಢ ಹುಬ್ಬುಗಳನ್ನು ಕೂಡಿಸುತ್ತ ಸ್ಟೇರಿಂಗ್ ಕೈಲಿಡಿದೆ ಅಪ್ಪ ತುಸು ಪ್ರಶ್ನಾರ್ಥಕವಾಗೆ ಕೇಳಿದ.


"I had a difference of opinion with my Manager" ನಾ ಶುರು ಮಾಡಿದೆ.


"ಇರು ನಾನೆ ಏನಾಗಿರತ್ತೆ ಹೇಳ್ತಿನಿ. ನೀನ್ ಮಾಡಿರೋ ಕೆಲಸ ಸರಿಯಾಗಿರತ್ತೆ. ಅವರು ಹೇಳಿರೋದು ಸರಿ ಇರಲ್ಲ. ಅಲ್ವ"

ಅಪ್ಪನ ವ್ಯಂಗ್ಯ ನನಗೆ ಅರ್ಥ ಆಯ್ತು.


"ಹಿ ಇಸ್ ಸಚ್ ಅ ಸೆಕ್ಸಿಸ್ಟ್ ಆ್ಯಸೊಲ್"


"ನನ್ ಮುಂದೆ ಹಾಗೆಲ್ಲಾ ಮಾತಡ್ಬೇಡ ಅಂತ ಎಷ್ಟು ಸಲ‌ ಹೇಳಿದಿನಿ"


"ಅವನಿಗೆ ಸಿಂಪಲ್ ಮ್ಯಾಥಮಾಟಿಕಲ್ ಫಂಕ್ಷನ್ಸ್ ಆರ್ಥ ಆಗಲ್ಲ. ಮ್ಯಾನೆಜರ್ ಅಂತ ಕೂರ್ಸಿದಾರೆ. ನಾ ಕಷ್ಟ ಪಟ್ಟು ಮಾಡೋ ಕೆಲಸದಲ್ಲಿ ತಪ್ಪು ಹುಡುಕೊದೆ ಅವನ ಕೆಲಸ. ಹುಡುಗಿ ಅನ್ನೋದನ್ನ ಒಂದು ಪ್ರಿವಿಲೆಜ್ ಅಗಿ ಮಾಡ್ಕೊಂಡಿದಿನಿ ಅಂತ ಟೀಮಿನ ಯಾರೋ ಹತ್ತಿರ ಹೇಳಿದಾನೆ ಬೇವರ್ಸಿ" ನನ್ನ ದನಿ ಗಡುಸಾಗುತ್ತಿತ್ತು. ಯಾಕೋ ಅಳು ಒತ್ತರಿಸಿ ಬರುತ್ತಿತ್ತು. ನೋಡಿದೆ ನನ್ನ ಕಡೆಯಿದ್ದ ಮುಖ ವಿಂಡ್‌ಶೀಲ್ಡ್ ಕಡೆ ತಿರುಗಿಸಿ, ತಲೆ ಅಲ್ಲಾಡಿಸುತ್ತಿದ್ದ .


"ಹೌದು ನಾನು ಸರಿ ಬಟ್ ನಂಗೆ ಬಾಸ್ ಅವ್ನು..ಸೋ..."


"ಯಾವಾಗಲೂ ಯಾರನ್ನಾದರೂ ದೂರೋದೆ ಮಾಡ್ತಿರ್ತಿಯಾ ಯಾವಾಗಲೂ. ನಿನ್ ಸ್ಕೂಲು, ಕಾಲೇಜು, ಕಛೇರಿ, ಮ್ಯಾನೇಜರು ಅಥವಾ ನಾನು. ಯಾವಾಗಾದ್ರೂ ಯೋಚಿಸಿದ್ಯಾ ಮೇ ಬಿ ಇಟ್ ಇಸ್ ಯು ಅಂತ??"


ನಂಗೆ ಸಿಟ್ಟು ನೆತ್ತಿಗೇರಿತು. ಸಂತೈಸುವಿಕೆಯ ನಿರೀಕ್ಷೆಯಲ್ಲಿದ್ದ ನನಗೆ ಈ ಮಾತುಗಳು ಬಹುವಾಗೆ ತಟ್ಟಿತು


"ನಿಂಗೆ ಇದೆಲ್ಲಾ ಅರ್ಥ ಆಗಲ್ಲ. ನಿನ್ ಅಡ್ವೈಸ್ ನನಗೇನು ಬೇಕಿಲ್ಲ"


ಇಬ್ಬರೂ ಗಂಭೀರರಾದೆವು. ಅವರನ್ನು ಮತ್ತೆ ಟ್ರಾಕಿಗೆ ಮರಳಿಸೋದು ನನಗೆ ತುಸು ಸುಲಭವೆ.  ದಾರಿಮಧ್ಯೆ ನಿಲ್ಲಿಸಿ ಸ್ಟೇರಿಂಗ್  ನಾ ಕಸಿದು ಓಡಿಸುತ್ತಿದ್ದೆ. ಗೂಗಲ್ ಮ್ಯಾಪ್ ಆನ್ ಮಾಡಿ ದಾರಿಯಲಿ ಸಿಗೋ ಉತ್ಕೃಷ್ಟ ಗುಣಮಟ್ಟದ ವೆಜಿಟೇರಿಯನ್ ರೆಸ್ಟೋರೆಂಟ್ ಹುಡುಕೋಕೆ ಹಚ್ಚಿದೆ. ಯಡಿಯೂರು ಟೆಂಪಲ್ ಕೂಡ ಹತ್ತಿರದಲ್ಲೆ ಇತ್ತು. ತುಂಬಾ ಜನರು ಬಂದು ಹೋಗುತ್ತಿದ್ದುದರರಿಂದ ಹಾಗೆ ಹೈವೆಗೆ ಹೊಂದಿಕೊಂಡಂತೆ ಇದ್ದುದರಿಂದ ರೋಡಿನ ಎರಡೂ ಬದಿಗೆ ಒಳ್ಳೆ ಹೋಟೆಲ್ಗಳೇ ಇದ್ದವು. ತಿಂಡಿ ಮುಗಿಸಿ ಮತ್ತೆ ನಮ್ಮ ಪ್ರಯಾಣ ಶುರುವಾಯ್ತು. ಮನಸಿನಲ್ಲಿ ನೆನಪಿನ ಮಹಜರು ನಡೆಯುತ್ತಿತ್ತು.

ನಂಗೆ ಇನ್ನು ನೆನಪಿದೆ ನಾನಗ ಚಿಕ್ಕವಳು. ಎಲ್ಲಾದರೂ ಟ್ರಿಪ್ ಹೋರಟರೇ ಅಪ್ಪ ಬಹುಶಿಸ್ತಿನಿಂದ ಎಲ್ಲಾವನ್ನೂ ನೋಡ್ಕೋತಿದ್ದ‌. ಮೊದಲೇ ಹೈಸ್ಕೂಲಿನಲ್ಲಿ ಗಣಿತ ಟೀಚರ್. ಎಲ್ಲವೂ ಪಕ್ಕ ಲೆಕ್ಕ. ಹೋಗುವ ಸಮಯ ಬರುವ ಸಮಯ ಉಳಿಯುವ ಹೊಟೇಲ್ ಎಲ್ಲವನ್ನೂ ಕಟ್ಟು ನಿಟ್ಟಾಗಿ ಫಾಲೋ ಮಾಡ್ತಿದ್ರು. ನಿಮಗೆ ಆಶ್ಚರ್ಯ ಆಗಬಹುದು ಇದೆಲ್ಲಾ ಮಾಡ್ತಾ ಇದ್ದಿದ್ದು ಇಂಟರ್ನೆಟ್ ಇಲ್ಲದ ಟೈಮಲ್ಲಿ. ಲೈಫನ್ನು ಅಷ್ಟೆ ರೂಪುರೇಷೆಯಿಂದ ಬದುಕೋಕೆ‌ ಅಪ್ಪ ಪ್ರಯಾತ್ನಿಸ್ತಿದ್ದ. ಬದುಕು‌ ಸೂತ್ರಕ್ಕೆ ತಕ್ಕಂತೆ ಬಿಡಿಸುವ ಸರಳ ಗಣಿತ ಅಲ್ವಲ್ಲ.

ಅಮ್ಮ ಅಂದರೇ ಮಗಳಿಗೆ ಒಂದು ಗಂಡು ನೋಡಿ‌ ಮದುವೆ ಮಾಡಬೇಕೆಂದು ಸೂತ್ರಕ್ಕೆ ಕಟ್ಟು ಬಿದ್ದು ಬದುಕುವ ಹೆಣ್ಣುಮಗಳು. ಅದು ಆಗೋದಿಲ್ಲ ಅಂತ ಗೊತ್ತಾದಾಗ ಸಂತೈಸಿದ್ದು ಇದೇ ಅಪ್ಪನೆ. ಅಮ್ಮ ಹೋಗಿ ಎರಡು ತಿಂಗಳಾಗಿದೆ. ಕ್ಯಾನ್ಸರ್ ಟ್ರೀಟ್‌ಮೆಂಟ್ ಅವಳನ್ನು ಆರೇಳು ತಿಂಗಳು ಬಹುವಾಗೆ ಕಾಡಿಸಿತ್ತು. ಅವಳು ಹೋದಮೇಲೆ ಅಪ್ಪ ಬಹು ಕೃಶವಾಗಿದ್ದಾನೆ. ಅವಳು ಹೋದಮೇಲೆ ಎಷ್ಟೋ ಮಾತುಗಳು ಅವಳಿಗೆ ನಾ ಹೇಳಿಲ್ಲ ಎನಿಸಿ ನೊಂದುಕೊಳ್ಳುತ್ತೇನೆ. ಅವಳಿಂದ ಕೇಳುವುದು ತುಂಬಾ ಇದೆ ಎನಿಸಿ ನಿದ್ದೆ ಬರದೇ ಬೆಳಕಾಕೋ ವರೆಗು ಒದ್ದಾಡಿದ್ದು ಇದೆ. ನಮ್ಮವರ್ಯಾರಾದರು ನಮ್ಮಿಂದ ಮರೆಯಾದಾಗ ದೂರವಾದಾಗ ಹೇಳುವ ಮಾತುಗಳು ನಮ್ಮಲ್ಲೇ ಉಳಿದಾಗ ಆಗೋ ನೋವು ಬಣ್ಣಿಸೋಕೆ ಆಗಲ್ಲ.


ಇನ್ನು ನಾವು ಸಾಗೋ ದಾರಿ 78 ಕಿ.ಮೀ ಇತ್ತು. ಪೆಟ್ರೋಲ್ ಬಂಕಿನಲ್ಲಿ ಸಾಲುಗಟ್ಟಿದ್ದ ಕಾರುಗಳ ಹಿಂದೆ ನಮ್ಮ ಕಾರು ಐದನೆಯದೋ ಆರನೆಯದೋ ಇರಬೇಕು. ಫೋನ್‌ ಪೇ ನಲ್ಲಿ ಮಾಡಿದ್ದ ದುಡ್ಡು ಬಂದಿಲ್ಲ ಅಂತ ಬಂಕ್ ಸಿಬ್ಬಂದಿ ಯಾವುದೋ ಕಾರಿನವನೊಟ್ಟಿಗೆ ಜಗಳಕ್ಕೆ ಬಿದ್ದಿದ್ದರು. ವಾಪಸ್ ತಗೋಳೋದಕ್ಕು ಆಗದ ಸ್ಥಿತಿಯಲ್ಲಿ ನಾವು ಇರಬೇಕಾಯ್ತು. ನನ್ನ ಫೋನ್ ರಿಂಗಾಯ್ತು. ಅಪ್ಪ ಫೋನ್ ಹಿಡಿದು ತೋರಿಸಿದ. ರೋಹಿಣಿ 😍 ಅಂತ ಬರ್ತಿತ್ತು. ನಾ ಸ್ವಿಕರಿಸಿದೆ.


"ಹೇ ರೋ..."


...


"ಲೇ...ರಾಕಿ ಕರೆದೊಯ್ಬೇಡಾ‌. ಆ ಮನೆಗೆ ಹೊಂದಿಕೊಂಡಿದ್ದಾನೆ"


...


"ರೋ...ಕಮಾನ್ ಯಾ... ಇನ್ನೆರಡು ದಿನದಲ್ಲಿ ನಾ‌ ವಾಪಾಸು ಬೆಂಗಳೂರಿಗೆ ಬರ್ತಿದಿನಿ. ನಾನೆ ಅವನನ್ನ ನೋಡ್ಕೋತಿನಿ"


...


"ನೊ...ಬಟ್...ಹಲೋ....ಹಲೋ...ಫ..."


....


ಫೋನ್ ಕಪ್ಪಿನೊಳಗೆ ಮೊಬೈಲ್ ಎಸೆದೆ


...


"ರೋಹಿಣಿ ಕಾಲ್ ಮಾಡಿದ್ಲು. ಬೇರೆ ಅಪಾರ್ಟ್ಮೆಂಟಿಗೆ ಮೂವ್ ಆಗ್ತಿದಾಳೆ. ರಾಕಿಯನ್ನೂ ಕರೆದೋಯ್ತಿದಾಳೆ" 


"ಓ...ಆ ನಾಯಿ‌ಮರಿನ.??"


"ಹ್ಞೂ. ವಿ ಬ್ರೋಕ್ ಅಪ್ ಲಾಸ್ಟ್ ವೀಕ್. ರಾಕಿ ನನ್ನ ಜೊತೆನೆ ಇರ್ತಾನೆ. ಈಗ ಮಾತ್ರ ತಗೊಂಡ್ ಹೋಗಿದಾಳೆ" ಉಗುರು ಕಚ್ಚುತ್ತಾ ಅಂದೆ.


ಒಂದೂವರೆ ವರ್ಷ ಇಬ್ಬರೂ ಜೊತೆಗೆ ರಿಲೇಶನ್‌ಶಿಪ್ಪಿನಲ್ಲಿ  ಇದ್ದೆವು. ಈಗ ರೋಹಿಣಿಗೆ ಬಾಯ್‌ಫ್ರೆಂಡ್ ಕೂಡ ಇದ್ದಾನೆ.ಮದುವೆ ಮಾತುಕತೆಯೂ ನಡೆಯುತ್ತಿದೆಯಂತೆ. ಅನ್ಫೇತ್‌ಫುಲ್ ಬಿಚ್‌. ಅವಳ ನನ್ನ ಹೆಸರು ಸೇರಿ 4 ತಿಂಗಳ‌ ಹಿಂದೆ ರಾಕಿ ಅಂತ ಮುದ್ದು ನಾಯಿಮರಿಗೆ ಹೆಸರಿಟ್ಟಿದ್ದೆವು‌. ಈಗ ಅವನನ್ನು ನನ್ನಿಂದ ಕಸಿಯೋಕೆ ನೋಡ್ತಿದಾಳೆ.


ಕಾರಿಗೆ ಪೆಟ್ರೋಲ್ ತುಂಬಿಸಲು ಇಳಿದ ಅಪ್ಪ ಟಯರ್ ವಿಂಡ್‌ಶೀಲ್ಡ್ ಕೂಲಂಕುಷವಾಗಿ ಪರಿಶೀಲಿಸಿದ. ಕಂಠಪೂರ್ತಿ ಪೆಟ್ರೋಲ್ ತುಂಬಿಸಿ ನಮ್ಮ ಪ್ರಯಾಣ ಮುಂದುವರೆಯಿತು. ಹೊಟ್ಟೆ ತುಂಬಿಸಿದ್ದಕ್ಕೋ ಏನೂ ಕಾರು ನಿಧಾನವಾಗಿ ತನ ಲಯದಲ್ಲೇ ಸಾಗುತ್ತಿತ್ತು. ಕಾರಿನ ಹಣೆಗೆ ಸಿಗಂದೂರು ಚೌಡೇಶ್ವರಿ ಕೃಪೆ ಅಂತ ಅಮ್ಮ ಅಪ್ಪನಿಗೆ ಬಲವಂತ ಮಾಡಿಸಿ ಸ್ಟಿಕರ್ ಹಾಕಿಸಿದ್ದಳು. ಕಾರಿನ ಒಳಗೆ ಕಟ್ಟಿದ್ದ ಹಳದಿಬಣ್ಣದ ಪ್ಲಾಸ್ಟಿಕ್ ಅಂಜನೆಯ ಪುಟ್ಟ ಸಂಜೀವಿನಿ ಪರ್ವತ ಹಿಡಿದು ದಾರಕ್ಕೆ ತನ್ನ ನಡು ಕಟ್ಟಿಸಿಕೊಂಡು ನಮ್ಮ ಜೊತೆ ಅಮೃತೂರಿಗೆ ಹಾರುತ್ತಿದ್ದ.

ಇನ್ನೈದು ಕಿಲೋಮೀಟರ್ ದೂರ ಇತ್ತು. "ಸ್ಪೀಕ್ ಟು ದ ಡೆಡ್"  ಸೈನ್‌ಬೋರ್ಡ್ ಪಾಸ್ ಆದ ಆಗೆ ಆಯ್ತು. ಕಾರು ನಿಧಾನಮಾಡಿ ಅಪ್ಪ  "ನಾವು ಅಲ್ಲಿಗೇನಾ ಹೋಗ್ತಾ ಇರೋದು" ಅಂತ ಕೇಳಿದ.


"ಅಪ್ಪ ಅದು ನಿಜ. ನಾನು ತುಂಬಾ ವಿಚಾರಿಸಿಯೇ ನಿರ್ಧಾರ ಮಾಡಿದ್ದು. ನೀನ್ ಹೇಳಿದ್ರೆ ಖಂಡಿತ ಒಪ್ಪುತ್ತಿರಲಿಲ್ಲ." ಏನೂ ಮಾತಾಡಲಿಲ್ಲ. ತಲೆ ಅಲ್ಲಾಡಿಸಿ ಸುಮ್ಮನಾದ.

ಫೋನ್ ಬೂತಿನ ಪಾರ್ಕಿಂಗ್ ಲಾಟಿನ ಬಳಿ ಕಾರು ನಿಲ್ಲಿಸಿದೆವು. ಹಳೆ ಕಾಲದಲ್ಲಿ STD/ISD ಅಂತ ಬೋರ್ಡು ಮೈತುಂಬ ಅಂಟಿಸಿಕೊಂಡು ಜನರಲ್ ಸ್ಟೋರಿಗೋ, ಬೇಕರಿಗೋ ಹೊಂದಿಕೊಂಡಂತೆ ಇರುತ್ತಿದ್ದ ಬೂತುಗಳು ಜ್ಞಾಪಕಕ್ಕೆ ಬಂತು.

"ಅಪ್ಪ ಮಾತಾಡ್ತಿಯಾ..??"


"ಇಲ್ಲ" ಕಡ್ಡಿ ಮುರಿದಂತೆ ಅಂತ.


"ನಾನೇ ಹೋಗ್ತಿನಿ" ಧೈರ್ಯ ಮಾಡಿ ಹೊರಟೆ.


ಬೂತಿನ ಒಳಹೊಕ್ಕೆ. ಫೋನಿನ ರಿಸೀವರ್ ಮಾತ್ರ ಇತ್ತು ಅದರ ಪೀಠಾ ಎಲ್ಲೂ ಇರಲಿಲ್ಲ. ಒಂದು ಬದಿಯ ವೈಯರ್ ಗೊಡೆಗೆ ಅಂಟಿತ್ತು‌. ಕಿವಿಗೆ ಆನಿಸಿಕೊಂಡೆ
ನಿಶ್ಯಬ್ಧ. ಸ್ವಲ್ಪ ಹೊತ್ತು ಹಾಗೆ ಇದ್ದೆ‌. ಮೊದಲು ನಾನೇ ಮಾತಾಡಬೇಕೆನೋ ಅನಿಸಿ,


"ಹಲೋ"

 
ಉತ್ತರ ಬರಲಿಲ್ಲ


"


"ಹಲೋ ಅಮ್ಮ ಅಪ್ಪ ಜೊತೆಲಿದಾರೆ..." ದುಃಖ ಒತ್ತರಿಸಿ ಬಂತು ಅಳು ತಡೆಯಲಾಗಲಿಲ್ಲ. ರಿಸಿವರ್ ಕೈಲಿಡಿದೇ ಸುತ್ತ ಗಮನಿಸಿದೆ. ತುಂಬಾ ಹಳೆಯ ಬೂತು ಅನ್ನಿಸ್ತದೆ, ತಿಳಿಮಬ್ಬು, ಗ್ಲಾಸಿನ ತುಂಬೆಲ್ಲ ಮೈಚಾಚಿತ್ತು. ದೂರದಲ್ಲೆಲ್ಲೋ ಅಮ್ಮ ನಿಂತಂತೆ ಭಾಸವಾಯಿತು ಅಥವಾ ನಿಂತಿದ್ದಳು. ಬೆನ್ನು ನನ್ನ ಕಡೆ ಮಾಡಿದ್ದಳು. ಯಾರ ಜೊತೆಗೋ ಮಾತಾಡ್ತಾ ಇದ್ದಳು. ನನ್ನ ಬಗ್ಗೆಯೇ ಇರಬೇಕು ಇಲ್ಲ ಅಪ್ಪನ ಬಗ್ಗೆ ಇರಬೇಕು. ಅವಳಿಗೆ ನಮ್ಮಬ್ಬರ ಮಿಕ್ಕ ಪ್ರಪಂಚವೇನಾದರೂ ಇದೆಯಾ‌. ಖಂಡಿತಾ ಇಲ್ಲ. ನಿಜವಾಗಿಯೂ ಅವಳ‌ ಮಾತು ಬೇಕಿದ್ದುದು ಅಪ್ಪನಿಗಲ್ಲ ನನಗೆ. ಅವಳು ಮಾತಾಡುತ್ತಿದ್ದಳು ಬಹುಶಃ ನನ್ನ ಬಗ್ಗೆ ನನ್ನ ಕಾಲೇಜು ಕ್ಲಾಸ್‌ಮೇಟು ಅವಳ ಸ್ನೇಹಿತೆಯ ಮಗ ಗೌತಮನ ಬಳಿ ನನ್ನ ಜೀವನದ ಬಗ್ಗೆ ವಿಚಾರಿಸುತ್ತಿರಬಹುದು. ಅಲ್ಲಲ್ಲ ಅವರು ಅಪ್ಪನಿಗೆ ವರ್ಷಕ್ಕೋಮ್ಮೆ  ಹೆಲ್ತ್ ಚೆಕಪ್ಪು ಮಾಡುವ ಡಾಕ್ಟರಿರಬಹುದು. ಅಲ್ಲಲ್ಲ...ಅವರು...ಬೇರೆ.‌‌..ಎಲ್ಲರು ಬದಲಾಗುತ್ತಿದ್ದಾರೆ‌‌. ಅವಳು‌ ಮಾತ್ರ ನಿಶ್ಚಲೆ. ನನ್ನ ಬಗ್ಗೆ ಅವಳಿಗೆ ತಿಳಿಯಲು ಇದ್ದ ಜನರೆಲ್ಲಾ ಬಂದೋಗುತ್ತಿದ್ದಾರೆ‌. ಎಲ್ಲರೂ ಅವಳಿಗೆ ಉತ್ತರ ಕೊಡುತ್ತಿಲ್ಲ. ಹೃದಯ ಬೇಯುತ್ತಿತ್ತು. ನನ್ನಿಂದ ಅವಳು ನೊಂದಿದ್ದಳು ಅಂತ ಎಂದೂ ಅವಳು ತೋಡಿಕೊಂಡಿರಲಿಲ್ಲ. ನನ್ನನೊಪ್ಪದ ಈ ಸಮಾಜ ಬೇಕಿರಲಿಲ್ಲ ನನಗೆ, ಅವಳು ಸಮಾಜಕ್ಕೆ ಹೆದರಿದ್ದಳು. ನಾ ಅವಳನ್ಯಾಕೆ ಸಮಾಜದ ಒಟ್ಟಿಗೆ ದೂರ ಮಾಡಿದೆ ಅನ್ನೋದು ಗೋಜಲು ಗೋಜಲಾಯ್ತು. ಸಮಾಜ ನನ್ನನ್ನ ಮನುಷ್ಯಳನ್ನಾಗಿ ಸ್ವಿಕರಿಸುತ್ತಿಲ್ಲ ಅನ್ನೋ ಕೊರಗು ಸದಾ ಇತ್ತು ಅದಕ್ಕಾಗಿ ನಾ ಹೊರಾಡುತ್ತಲು ಇದ್ದೆ. ಆದರೆ ಅಮ್ಮ ಆಗಲೇ ನನ್ನನ್ನು ಮಗಳು ಎಂದು ಸ್ವಿಕರಿಸಿದ್ದಳು ಅದಕ್ಕೇ ಎಳ್ಳಷ್ಟು ಕೃತಜ್ಞತೆಯನ್ನು ತೋರಿಸಿರಲಿಲ್ಲ. ನಾನು ನನ್ನೊಟ್ಟಿಗೆ ಮಾತಾಡ್ತಾ ಇದ್ದಿನಿ ಅನಿಸಿತು‌. ಹ್ಞಾ ಹೌದು ಜೈವಿಕವಾಗಿ ನಾನು ಕೂಡ ಅವಳ ಒಂದು ಭಾಗವೇ ಅಲ್ಲವೆ ಅನಿಸೋಕೆ ಶುರುವಾಗತೊಡಗಿತು.

ಜೋರು ಗಾಳಿ ಬೀಸಿ ನನ್ನ ಕೈಲಿರುವ ರಿಸಿವರ್ ಜ್ಞಾಪಕಕ್ಕೆ ಬಂತು. ಅವಳ ಜೊತೆ ಮಾತಾಡಬೇಕೆನಿಸಿ ಹೊರಬಂದೆ. ಬೂತಿನ ಹೊರಗಿನ ಖಾಲಿ ಜಾಗದಲ್ಲಿ ಅವಳಿರಲಿಲ್ಲ. ಅಪ್ಪ ಇದ್ದ.

15 ನಿಮಿಷ ನಮ್ಮ ಮಧ್ಯೆ ಮಾತುಕತೆ ಏನಿರಲಿಲ್ಲ. ನಾನೆ ಕೇಳಿದೆ.
"ಅಪ್ಪ ನೀ ಪ್ರಯತ್ನಿಸು"

ಮುಷ್ಟಿ ಬಿಗಿಯಿಡಿದು ತನ್ನಲ್ಲೆ ಅವ ಉಗುಳು ನುಂಗಿದ

"ಐ ಮಿಸ್ ಮೈ ಮದರ್"

"ನಾನು ಅಷ್ಟೆ" ಅಪ್ಪನು ಅಂದ. ಇಬ್ಬರು ಕಾರಲ್ಲಿ ಕೂತು ಹೊರಡಲು ಸಿದ್ಧರಾದೆವು.


ಯಾಕೋ ಅಪ್ಪ ಕಾರು ಚಾಲು ಮಾಡಲಿಲ್ಲ. ನಾವು ತುಂಬಾ ಹೊತ್ತು ಅಲ್ಲೇ ಇದ್ದೇವು. ಬಿಳಿಕಲರಿನ ಸ್ವಿಫ್ಟ್ ಕಾರಲ್ಲಿ ಒಂದು ಪುಟ್ಟ ಕುಟುಂಬ ಬಂದಿಳಿಯಿತು. ತಾಯಿ ಮಗಳನ್ನು ಕೈಯಿಡಿದು ಇಳಿಸಿದಳು. ಪಿಂಕು ಕಲರಿನ ಶೂ ತೊಟ್ಟ 6 ವರ್ಷದ ಮುಗುವೊಂದು ತಾಯಿಯೊಟ್ಟಿಗೆ ಇಳಿಯಿತು. ಅವರು ನಮ್ಮ ಕಾರಿನ ಮೂಲಕವೇ ಹಾದು ಹೋಗುತ್ತಿದ್ದರು. ಅಪ್ಪ ಇಳಿದು ಅವರ ಬಳಿ ಹೋದ.

"ಅಮ್ಮ ಕೇಳಿ‌ ಇಲ್ಲಿ. ನೀವೂ ಫೋನ್ ಬೂತಿಗೋಸ್ಕರ ಬಂದ್ರ"

ಅವರು ತುಸು ನಗುತ್ತಾ" ಹೌದು. ಅವಾಗಾವಾಗ ನಾವು ಬರ್ತಿರ್ತೇವೆ. ನನ್ನ ಮಗ ಸುಭಾಶ್ ನಾಲ್ಕೈದು ತಿಂಗಳಿಂದೆ ಕ್ಯಾನ್ಸರ್‌ನಿಂದ ನಮ್ಮನ್ನು ಅಗಲಿದ. ಅವನ ತಂಗಿ ಶೃತಿಯದು ಇವತ್ತು ಹುಟ್ಟಿದ ದಿನ.ಹಾಗಾಗಿ...."ಅವರು ಮುಂದುವರೆಸಲಿಲ್ಲ. ಗಂಬೀರರಾದ್ರು. ನಮಗೆ ಅರ್ಥವಾಯ್ತು.

"ನನ್ನ ಮಡದಿಯೂ ನಮ್ಮಿಂದ ಒಂದೂವರೆ ತಿಂಗಳ ಹಿಂದೆ ದೂರವಾದರು" ಸ್ವಲ್ಪ ಸಾವರಿಸಿ "ನಿಮ್ಮ ಮಗ ನಿಮಗೆ ಉತ್ತರಿಸ್ತಾನೆ ಅಲ್ವಾ..!?" ಕೂತೂಹಲಭರಿತ ಸಂತಸದಲ್ಲೇ ಅವ ಕೇಳಿದ.

"ಉತ್ತರ ಸಿಗಬಹುದು. ಯಾವ ರೀತಿ ಉತ್ತರ ಎಕ್ಪೆಕ್ಟ್ ಮಾಡ್ತಿದಿರಾ ಅನ್ನೋದು ತುಂಬಾ ಇಂಪಾರ್ಟೆಂಟ್"

ಇದೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಶೃತಿ ಮರುಮಾತಿಗೆ ಕಾಯದೇ. ಫೋನ್ ಬೂತಿಗೆ ಓಡಿ. ಫೋನ್ ರಿಸಿವರ್ ಕೈಲಿಡಿದು ಮಾತಾಡತೊಡಗಿದಳು. ವಾಪಸು ಬಂದು ನೆಕ್ಸ್ಟ್ ಟೈಮ್ ಬರೋವಾಗ ಮರೆಯದೇ ಚಾಕಲೇಟು ತರಬೇಕೆಂದೂ, ತಾತನ ಹಳೆ ಕನ್ನಡಕ ಎಲ್ಲಿಟ್ಟಿದ್ದಾನೆಂದು ಮರೆಯದೇ ಹೇಳೆಂದು ಕೇಳಿದ್ದೆನೆಂದು ತಾಯಿಗೆ ವರದಿ ಒಪ್ಪಿಸಿದಳು.

ಹೋಗುವ ಮುನ್ನ ನಮ್ಮ ಕಡೆ ತಿರುಗಿ ಆ ತಾಯಿ ಹೊರಟಳು.

ಅಪ್ಪ ನೋಡನೋಡುತ್ತಲೇ ಧೈರ್ಯ ಮಾಡಿ ಬೂತಿನೊಳಗೆ ಹೊಕ್ಕ.ರಿಸಿವರ್ ಬಲಗೈ ಹಿಡಿದು ಎಡಗೈನಲ್ಲಿ ಕಣ್ಣೋರೆಸಿಕೊಳ್ಳುತ್ತಿದ್ದ. ನನಗಿಂತ ಹೆಚ್ಚು ಹೊತ್ತೆ ಅಲ್ಲಿದ್ದ. ನಿಧಾನವಾಗಿ ಬಂದು ಡ್ರೈವರ್ ಸೀಟಿನಲ್ಲಿ ಕೂತ‌. ನಾನು ಅವನನ್ನೇ ದಿಟ್ಟಿಸುತ್ತಿದ್ದೆ.


"ಅಮ್ಮ ಹೇಳಿದ್ಲು ನೀನು ನಿನ್ನ ಕಾಲ್ ಮೇಲೆ ನಿಲ್ಲುವವರೆಗೂ ನನ್ನ ಜೊತೆಯೇ ಇದ್ದು ಜೋಪಾನ ಮಾಡ್ಬೇಕು ಅಂತ. ಹಾಃ ಹಾಗೆ ನಿನ್ನ ನಾಯಿಮರಿನೂ ಜೊತೆಯಲ್ಲಿ ಕರೆದುಕೊಂಡು ಬಾ ಪಾರವಾಗಿಲ್ಲ"

"ನಿಜ ಅವಳೇ ಹೇಳಿದ್ಲಾ??"

ಅಪ್ಪ ನನ್ನ ಕಡೆ ನೋಡಿ ನಸುನಕ್ಕ. ಅ ನಗುಮುಖವನ್ನ ನಾ ನೋಡಿ ತುಂಬಾ ದಿನವಾಗಿತ್ತು. "ನಾವಿಬ್ರು ಫರ್ಸ್ಟ್ ಡಿಸೈಡ್ ಮಾಡ್ಬೇಕು ಮಂದೆ ಏನ್ ಮಾಡ್ಬೇಕು ಅಂತ" ತುಸು ಗಂಭೀರವಾಗೆ ಹೇಳಿದ.

"ನಡಿ ಅಪ್ಪ ಹರಟೆ ಪ್ರೋಗ್ರಾಮಿಗೆ ಲೇಟಾಯ್ತು ಮುಂದೆ ಅಲ್ಲೇ ಹೋಗೋಣ" ಕಾರು ಸಂಜೆಯ ಅರೆಗತ್ತಲಿನಲ್ಲಿ ಮರೆಯಾಯ್ತು.


ಅಮ್ಮ ಆಗಲೇ ಉತ್ತರಿಸಿಯಾಗಿತ್ತು.


ಕಾಮೆಂಟ್‌ಗಳು

  1. ಅಮೋಘವಾದ ಪರಿಕಲ್ಪನೆ...

    ನನ್ನ ಅನಿಸಿಕೆ..
    Foul words not necessarily required ಅನ್ನಿಸ್ತು.. ಅವ್ರಿಬ್ರೂ well educated..

    (In presenting words)As a father he is on track..
    But as a daughter, she uses abuse words.. as it seems she has lost faith in life..

    If yes (ಅದು ಕಂಕ್ಲೂಡ್ ಆಗ್ಲಿಲ್ಲ).. ಆಕೆಯ ಮಾತಿನಲ್ಲಿ ಹಾಗೆ ವ್ಯಕ್ತವಾಯಿತು..

    If no.. (Foul words ಬೇಡ)..
    ಕಥೆಗೆ ಕಂಕ್ಲೂಶನ್ ಮುಖ್ಯ..
    ಓದುಗ ಕಥೆಯ ಸಂಪೂರ್ಣತೆ ಬಯಸ್ತಾನೆ..😊

    All the very best for your future writings..
    👍

    ಪ್ರತ್ಯುತ್ತರಅಳಿಸಿ
  2. Thank you for the reply. Conclusion ಓದುಗರೇ ಕೊಡ್ಬೇಕು. ಕೆಲವು ಕಥೆಗಳೇ ಹಾಗೆ. Improve. ಮಾಡ್ಕೋಳಕೆ ಪ್ರಯತ್ನಿಸ್ತಿನಿ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

The Stillness Between Two Trees

ಆಲ್ ವಿ ನೀಡ್ ಇಸ್ ಚೇಂಜ್

ಅಪ್ಪ ನೀನ್ಯಾಕೆ ಹೀಗೆ....?